ಬೆಂಗಳೂರು : ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಅಕ್ಟೋಬರ್ 28 ರಂದು ನಡೆಯುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಪ್ರಾರಂಭವಾಗಿದ್ದು, ಅ.20 ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ನಿರ್ದೇಶ ನೀಡಿದ್ದಾರೆ.
ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಜತೆಗೆ ಸಮನ್ವಯ ಸಭೆ ನಡೆಸಿದ ಅವರು, ಇಡಿ ಸರ್ಕಾರವೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, 20ನೇ ತಾರೀಕಿನೊಳಗಾಗಿ ನೋಂದಣಿ ಕಾರ್ಯ ಮುಕ್ತಾಯಗೊಳಿಸಬೇಕು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವೆಬ್ ಸೈಟ್ ನಲ್ಲಿರುವ ಕ್ಯೂ ಆರ್ ಕೋಡ್ ಅಥವಾ ಲಿಂಕ್ ಅನ್ನು ಬಳಸಬಹುದು. ವ್ಯಕ್ತಿಗತ ಹಾಗೂ ಸಂಘ ಸಂಸ್ಥೆಗಳು ಹೆಸರು ನೋಂದಾಯಿಸಬಹುದು ಎಂದು ಹೇಳಿದರು.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಜತೆಗೆ ಸಭೆ ನಡೆಸಿದ್ದು, ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ 25 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನ 11 ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂದರು.
ಕೋಟಿ ಕಂಠ ಗಾಯನದಲ್ಲಿ ಆರು ಹಾಡುಗಳ ಗಾಯನ ಕಡ್ಡಾಯವಾಗಿದೆ. ನಂತರ ಬೇಕಾದರೆ ಕನ್ನಡಪರವಾದ ಎಷ್ಟು ಗೀತೆಗಳನ್ನು ಬೇಕಾದರೂ ಹಾಡಬಹುದು.ಐಟಿ, ಬಿಟಿ ಸೇರಿದಂತೆ ಎಲ್ಲಾ ಇಲಾಖೆಗಳನ್ನೂ ರಾಜ್ಯೋತ್ಸವ ಸಂಭ್ರಮದಲ್ಲಿ ಸೇರಿಸಿ ಕೊಳ್ಳಲಾಗುವುದು. ಈ ಸಂಬಂಧ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ನನ್ನ ನಾಡು ನನ್ನ ಹಾಡು’ ಪೋಸ್ಟರ್ ಅನ್ನು ಸಚಿವರು ಬಿಡುಗಡೆ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ರಾಜಕುಮಾರ ಪಾಟೀಲ್,ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ ಲಿಂಗರಾಜ ಗಾಂಧಿ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ ನಿರಂಜನ, ನೃಪತುಂಗ ವಿವಿ ಕುಲಪತಿ ಪ್ರೊ ಶ್ರೀನಿವಾಸ ಬಳ್ಳಿ, ಮಹಾರಾಣಿ ವಿವಿ ಕುಲಪತಿ ಸೇರಿದಂತೆ ಇತರ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.