ಚಿತ್ರದುರ್ಗ: ಚಿತ್ರದುರ್ಗ-ತುಮಕೂರು ಜಿಲ್ಲೆಗಳನ್ನೊಳಗೊಂಡಂತೆ ಫೆ. 16 ಮತ್ತು 17 ರಂದು ಎರಡು ದಿನಗಳ ಕಾಲ ತುಮಕೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯುವಂತಾಗಲು ಫೆ. 11 ರಂದು ತಾಲೂಕು ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ತುಮಕೂರಿನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಕೌಶಲ್ಯ ಮಿಷನ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಚಿತ್ರದುರ್ಗ-ತುಮಕೂರು ಜಿಲ್ಲೆಗಳ ನಿರುದ್ಯೋಗಿಗಳಿಗೆ ಏರ್ಪಡಿಸಿರುವ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ. 16 ಮತ್ತು 17 ರಂದು ತುಮಕೂರಿನ ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ನೇರವಾಗಿ ಭಾಗವಹಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್‌ನಲ್ಲಿ ಫೆ. 14 ರ ಒಳಗಾಗಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಮುದ್ರಿತ ಪ್ರತಿಯಲ್ಲಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
7ನೇ ತರಗತಿ ಉತ್ತೀರ್ಣ, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ ಹಾಗೂ ಅಪ್ರಂಟಿಸ್ ತರಬೇತಿ, ಬಿ.ಇ, ಡಿಪ್ಲೋಮಾ ಎಲ್ಲಾ ಟ್ರೇಡ್‌ನವರು, ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸ್ ಪಾಸಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿ ನೇರವಾಗಿ ಉದ್ಯೋಗ ಮೇಳದಲ್ಲಿ ಹಾಜರಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. 18 ರಿಂದ 35 ವರ್ಷದೊಳಗಿನ ವಯೋಮಿತಿಯ ಪುರುಷ, ಮಹಿಳಾ ಹಾಗೂ ವಿಕಲಚೇತನ ಅಭ್ಯರ್ಥಿಗಳೂ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಅರ್ಜಿ ಸಲ್ಲಿಸಿದ ಹಾಗೂ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಆಯಾ ತಾಲೂಕು ಕೇಂದ್ರದಲ್ಲಿ ಫೆ. 11 ರಂದು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುವುದು. ಫೆ. 11 ರಂದು ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ತಾಲೂಕು ಕೇಂದ್ರಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳದ ಆಯೋಜಕ ಸಿಬ್ಬಂದಿಗಳೇ ತಾಲೂಕು ಕೇಂದ್ರಗಳಿಗೆ ಆಗಮಿಸಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಸಂದರ್ಶನ ಎದುರಿಸುವ ಬಗೆ, ಭಾಷೆಯ ಬಳಕೆ, ಡ್ರೆಸ್ ಕೋಡ್, ವಿಷಯ ಪ್ರಸ್ತುತಪಡಿಸುವಿಕೆ ಹೀಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಾಗಾರಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿ ಅವರಿಂದ ಚಾಲನೆ ಕೊಡಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಪಿ.ಎನ್. ರವೀಂದ್ರ ಮಾತನಾಡಿ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು ಐಇಸಿ ಚಟುವಟಿಕೆಗಳಿಗೆ ನಿಗದಿಪಡಿಸಿರುವ ಅನುದಾನ ಬಳಸಿ ಉದ್ಯೋಗ ಮೇಳದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಪ್ರತಿಯೊಂದು ಗ್ರಾಮಗಳಲ್ಲೂ ಉದ್ಯೋಗ ಮೇಳದ ಕುರಿತು ಕನಿಷ್ಠ ಎರಡು ಬಾರಿ ಡಂಗುರ ಹಾಕಿಸುವಂತೆ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಉದ್ಯೋಗ ಮೇಳ ಹಾಗೂ ತರಬೇತಿ ಕಾರ್ಯಾಗಾರದ ಕುರಿತ ಹೆಚ್ಚಿನ ಮಾಹಿತಿಗೆ ಚಿತ್ರದುರ್ಗ-08194-230485, 9448629764 ಅಥವಾ 9449681556/7022459064 ಸಂಪರ್ಕಿಸಬಹುದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ಸಲುವಾಗಿ ಉದ್ಯೋಗ ಮೇಳದ ಮೂಲಕ ವೇದಿಕೆ ಕಲ್ಪಿಸಿಕೊಡಲಾಗಿದೆ. ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚಿನ ಉದ್ಯೋಗದಾತರು, ಕಂಪನಿಗಳು ಭಾಗವಹಿಸಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಉದ್ಯೋಗ ಮೇಳ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಅಭ್ಯರ್ಥಿಗಳು ಯಾರಿಗೂ ಹಣ ಪಾವತಿಸುವ ಅಗತ್ಯವಿಲ್ಲ.
•ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.