Advertisement
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಭಿನಂದನಾ ಬಳಗ ಹಾಗೂ ಹಾಸನ ಜಿಲ್ಲಾ ಲೇಖಕಿಯರ ಬಳಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಮಾತನಾಡಿದ ಅವರು, ಪ್ರತಿ ಕ್ಷಣವೂ ತಪಸ್ಸಿನಂತೆ ಬದುಕನ್ನು ಸವೆಯಬೇಕು. ಅದು ಕ್ಷಣವಾಗಲೀ, ನಿಮಿಷವಾಗಲೀ, ದಿವಸವಾಗಲೀ, ಬದುಕುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
Related Articles
Advertisement
ಹಾಸನ ಸಾಂಸ್ಕೃತಿಕ ತವರು: ಹಾಸನ ಜಿಲ್ಲೆಯ ಹೆಸರೇ ಒಂದು ಅದ್ಭುತ, ಅನನ್ಯ, ಹಾಸನವು ಸಾಂಸ್ಕೃತಿಕ ತವರು, ಈಗಲೂ ಶೇ 80 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದಾರೆ. ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ಮೆಣಸು, ಶುಂಠಿ ಮತ್ತಿತರ ಸಾಂಬಾರ ಪದಾರ್ಥಗಳಲ್ಲದೇ, ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗಡ್ಡೆ ಬೆಳೆಗಳು ಜಿಲ್ಲೆಯ ರೈತರ ಕೈ ಹಿಡಿದು ಮುನ್ನಡೆಸಿದೆ. ಬದುಕು ಕಟ್ಟಿಕೊಟ್ಟಿದೆ ಎಂದರು.
ಪ್ರಕೃತಿಯ ಮುನಿಸು: ಕಳೆದ 2 ದಶಕಗಳಿಂದ ಮುನಿಯುತ್ತಾ ಬಂದಿರುವ ಪ್ರಕೃತಿ ಜೊತೆಗೆ ಮಾನವ ದೂರದೃಷ್ಟಿಯಿಲ್ಲದ ನಡೆ, ದುರಾಸೆಯಿಂದ ಅತಿವೃಷ್ಟಿ, ಅನಾವೃಷ್ಟಿ, ಜನರ ಬದುಕಲ್ಲಿ ತಲ್ಲಣ ಸೃಷ್ಟಿಸಿವೆ. ಧರ್ಮಸ್ಥಳ ಬಳಿ ಹರಿಯುವ ನೇತ್ರಾವತಿ, ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ನದಿಗಳು ಬೇಸಿಗೆಯಲ್ಲಿ ಒಣಗಿ ನಿಂತು, ಸ್ವತಃ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ಕೆಲದಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಬರಬೇಡಿ ಎಂದು ಕರೆ ಕೊಡುವವರೆಗೆ ಪರಿಸ್ಥಿತಿ ವಿಷಮಗೊಂಡಿದ್ದು ದುರಂತ. ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಸಾವು ನೋವುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದೂಲೀಲಾವತಿ ಆತಂಕ ವ್ಯಕ್ತಪಡಿಸಿದರು.
ಶಿಲ್ಪ ಕಲೆಗಳ ಬೀಡು: ವಿಶ್ವ ವಿಖ್ಯಾತ ಶಿಲ್ಪಕಲೆಯ ನಾಡು ಕಲೆಗಳ ತವರು ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಅದ್ಭುತ ಸೌಂದರ್ಯದ ನಿತ್ಯ ಹರಿದ್ವರ್ಣದ ಕಾಡುಗಳು ಹಾಸನ ಜಿಲ್ಲೆಯ ಐಸಿರಿ. ರಾಷ್ಟ್ರಕ್ಕೆ ಕನ್ನಡದ ಪ್ರಧಾನಿಯನ್ನು ಕೊಟ್ಟ ಮೊದಲ ಜಿಲ್ಲೆ, ಮೊಟ್ಟಮೊದಲ ಕನ್ನಡ ಶಾಸನ ಜಿಲ್ಲೆಯ ಹಲ್ಮೀಡಿಯಲ್ಲಿರುವುದು ಹಾಸನ ಜಿಲ್ಲೆಯ ಹಿರಿಮೆ ಎಂದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿ ತವರೂರು ಹಾಸನ ಜಿಲ್ಲೆ.
ಇಂತಹ ಮಹತ್ವದ ಹಾಸನದಲ್ಲಿ ಇಂದು ನಡೆಯುತ್ತಿರುವ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಸಾಕ್ಷಿ ಪ್ರಜ್ಞೆ. ಮಹಿಳೆಯರನ್ನು ಮುಖ್ಯವಾನಿಯಲ್ಲಿ ಗುರುತಿಸಿ ಅವರ ಪ್ರತಿಭೆಗೆ ಅವಕಾಶ ಸಿಗಬೇಕು ಎಂಬುದು ಇಲ್ಲಿರುವ ಮಾನವೀಯ ಕಳಕಳಿಯ ಪ್ರತೀಕವಾಗಿದೆ ಎಂದು ಹೇಳಿದರು.
ಅಭಿನಂದನಾ ಗ್ರಂಥ ಬಿಡುಗಡೆ: ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪತ್ತು ಕುಮಾರ್ ಅವರು, ಹಾಸನ ಜಿಲ್ಲೆಯಲ್ಲಿ ಪತ್ರಕರ್ತೆಯಾಗಿ 40 ವರ್ಷ ಸೇವೆ ಸಲ್ಲಿಸಿರುವ ಲೀಲಾವತಿಯರ ಸಾಧನೆ ದೊಡ್ಡದು. ಮಹಿಳೆಗೆ ಹೆಚ್ಚು ಅವಕಾಶ ಇಲ್ಲದ ವೇಳೆ ಛಲದಿಂದ ಮುಂದೆ ಬಂದು ಗಟ್ಟಿಯಾಗಿ ನಿಂತಿದ್ದಾರೆ. ರಾಜ್ಯ ಲೇಖಕಿಯರ ಸಂಘದ ಶಾಖೆಯನ್ನು ಹಾಸನ ಜಿಲ್ಲೆಯಲ್ಲೂ ತೆರೆಯಿರಿ ಎಂದು ಸಲಹೆ ನೀಡಿದರು.
ಬಹುಮುಖ ಪ್ರತಿಭೆಗೆ ಸಂದ ಗೌರವ: ಹಿರಿಯ ಸಾಹಿತಿ ಬಾನು ಮುಷ್ತಾಕ್ ಮಾತನಾಡಿ, ಹಿರಿಯ ಪತ್ರಕರ್ತೆಯಾಗಿರುವ ಲೀಲಾವತಿ ಸೇವೆಯನ್ನು ಗುರ್ತಿಸಿ ಮಹಿಳಾ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದು ಬಹುಮುಖ ಪ್ರತಿಭೆಗೆ ಸಿಕ್ಕ ಗೌರವ. ಸಾಧನೆಗೆ ಯಾವ ಅಡ್ಡದಾರಿಯಿಲ್ಲ. ನಿರಂತರವಾದ ಪರಿಶ್ರಮ ಮಾತ್ರ ಸಾಧನೆಯ ಮೆಟ್ಟಿಲು.
ಸಾಹಿತ್ಯ ಸಮ್ಮೇಳನದ ಮೂಲಕ ಮಹಿಳೆಯರನ್ನು ಗುರ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯು ಛಲದಿಂದ ಮುನ್ನುಗಿದರೆ ಸಾಧನೆ ಕಷ್ಟವಲ್ಲ ಎಂಬುದಕ್ಕೆ ಲೀಲಾವತಿಯವರಿಗೆ ಸಿಕ್ಕಿರುವ ಸ್ಥಾನ,ಮಾನವೇ ಸಾಕ್ಷಿ ಎಂದು ಹೇಳಿದರು.
ಖ್ಯಾತಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳು ಸಿಗುವುದು ಕಡಿಮೆ. ಆದರೆ ಇಂದು ಮಹಿಳೆಯರು ಛಲದಿಂದ ಕಟ್ಟುಪಾಡುಗಳನ್ನು ಪುರುಷರಿಗೆ ಸರಿ ಸಮನಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಡುವ ಮೂಲಕ ತಮ್ಮ ಸಾಮರ್ಥಯ ಪ್ರದರ್ಶಿಸುತ್ತಿದ್ದಾರೆ. ಅಂತಹವರಲ್ಲಿ ಲೀಲಾವತಿ ಅವರೂ ಒಬ್ಬರು ಎಂದರು.
ಹಿರಿಯ ಪತ್ರಕರ್ತರಾದ ಕೆ. ಶೇಷಾದ್ರಿ, ಶಿವಾನಂದ ಅವರು ಮಾತನಾಡಿದರು. ಅಭಿನಂದನಾ ಬಳಗದ ಅಧ್ಯಕ್ಷೆ ಎನ್. ಶೈಲಜಾ ಹಾಸನ, ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದ, ಸಾಹಿತಿ ಶಾಂತಾ ಅತ್ನಿ, ಮಂಗಳಾ ವೆಂಕಟೇಶ್, ಭಾರತ ಸೇವಾದಳದ ಜಿಲ್ಲಾ ಸಂಘಟಕಿ .ಎಸ್. ರಾಣಿ, ಮಂಗಳಮ್ಮ, ಜಯಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು. ಗೊರೂರು ಪಂಕಜ ನಿರೂಪಿಸಿದರು. ಪುಷ್ಪ ಕೆಂಚಪ್ಪ ವಂದಿಸಿದರು.