ಈಬಾರಿ ನಾವು ಪಕ್ಷಿವೀಕ್ಷಣೆಗೆ ಆರಿಸಿಕೊಂಡ ಸ್ಥಳ ತಮಿಳುನಾಡಿನ ವಾಲ್ಪರೈ (Valparai). ಸಮುದ್ರ ಮಟ್ಟದಿಂದ ಸರಿ ಸುಮಾರು 3500 ಅಡಿಗಳಷ್ಟು ಎತ್ತರದಲ್ಲಿರುವ ಕೊಯಮತ್ತೂರು ಜಿಲ್ಲೆಯ ಗಿರಿಧಾಮ. ಏಳನೇಯ ಸ್ವರ್ಗ ಎಂದೇ ಹೆಸರಾದ ಪಶ್ಚಿಮ ಘಟ್ಟದ ಅನೈಮಲೈ ಬೆಟ್ಟಗಳ ಶ್ರೇಣಿಯ ನೈಸರ್ಗಿಕ ಸೌಂದರ್ಯದ ಸೀಮೆ. ಅನೇಕ ರೀತಿಯ ವನ್ಯಜೀವಿಗಳ ಆಶ್ರಯ ತಾಣ. ಬೇರೆಡೆಗೆ ವಿರಳವಾದ ಸಿಂಗಳೀಕ (ಸಿಂಹದ ಬಾಲದ ಮಂಗ) ಈ ಕಾಡಿನಲ್ಲಿ ಹೇರಳವಾಗಿ ಕಾಣಸಿಗುತ್ತವೆ. ರಸ್ತೆಯಂಚಿನ ಬೆಟ್ಟಗಳಲ್ಲಿ ಅಪರೂಪದ ಪ್ರಾಣಿ ಸಂಕುಲ “ನೀಲಗಿರಿ ತಹರ್’ಗಳು ಕಾಣಸಿಗುತ್ತವೆ. ಇಲ್ಲಿಗೆ ಸಮೀಪದಲ್ಲಿರುವ “ಅನಲೇ ಎಸ್ಟೇಟ್’ನಲ್ಲಿ “ಗ್ರೇಟ್ ಇಂಡಿಯನ್ ಹಾರ್ನ್ಬಿಲ್’ಗಳ ಕಲರವ. ಈ ಜಾತಿಯ ಹಾರ್ನ್ಬಿಲ್ ನಮ್ಮಲ್ಲಿ ಕಾಣುವುದು ಅಪರೂಪ. ಹಾಗಾಗಿ ಅವುಗಳ ಛಾಯಾಗ್ರಹಣ ಮಾಡುವ ಉದ್ದೇಶದಿಂದಲೇ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೆ. ಡಿ. ಸತ್ಯನಾರಾಯಣ, ಗೌತಮ್ ರಮೇಶ್, ಹರೀಶ್, ಮಿತ್ರ ನಂದನ್ ಮತ್ತು ನಾನು ಕಳೆದ ವಾರ “ಅನಲೇ ಎಸ್ಟೇಟ್’ ದಾರಿ ಹಿಡಿದೆವು.
“ಅನಲೇ ಎಸ್ಟೇಟ್’ 450 ಎಕರೆಗಳಷ್ಟು ವಿಶಾಲವಾದ ಟೀ ತೋಟ. ಅದರ ಸುತ್ತಲೂ ಹಚ್ಚ ಹಸುರಿನ ದಟ್ಟ ಕಾಡು. ಅಲ್ಲಲ್ಲಿ ಹರಿವ ನೀರ ತೊರೆಗಳು, ಚಿಕ್ಕ ಚಿಕ್ಕ ಜಲಪಾತಗಳು. ಟೀ ತೋಟದ ಕೆಳಭಾಗದ ಕಾಡಿನ ಮುಗಿಲೆತ್ತರದ ಮರಗಳಲ್ಲಿ ಈ “ಹಾರ್ನ್ ಬಿಲ್’ಗಳ ಸಮಾವೇಶವೇ ನೆರೆದಿತ್ತು. ಮರದ ಗೊಂಚಲುಗಳಲ್ಲಿ ನೇತಾಡುವ ಹಣ್ಣುಗಳನ್ನು ತಿನ್ನುತ್ತ, ತನ್ನ ಮರಿಗಳಿಗೂ ಕೊಕ್ಕಿನ ತುಂಬಾ ತುಂಬಿಕೊಂಡು ಬಂದು ತಿನ್ನಿಸುತ್ತ, ಅತ್ತಿಂದಿತ್ತ-ಇತ್ತಿಂದತ್ತ ಹಾರುವ ಈ ಪಕ್ಷಿಗಳನ್ನು ನೋಡುವದೇ ಒಂದು ಸಂಭ್ರಮ. ಜೊತೆಯಲ್ಲಿ ಅದರ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿವ ತವಕ.
“ಗ್ರೇಟ್ ಇಂಡಿಯನ್ ಹಾರ್ನ್ಬಿಲ…’ ಹಕ್ಕಿಗಳು “ಹಾರ್ನ್ಬಿಲ್’ ಜಾತಿಗಳಲ್ಲೇ ಅತಿ ದೊಡ್ಡದಾದ ಪಕ್ಷಿ. ಈ ಪಕ್ಷಿಯ ವೈಜ್ಞಾನಿಕ ಹೆಸರು ಬುಸೇರೋಸ್ ಬೈಕಾರ್ನಿಸ್ (Buceros Bicornis) ಇವು ಸಾಮಾನ್ಯವಾಗಿ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ, ಭಾರತೀಯ ಉಪಖಂಡದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಇವು ಸುಮಾರು 90 ರಿಂದ 120 ಸೆಂಟಿಮೀಟರಗಳಷ್ಟು (35 ರಿಂದ 40 ಇಂಚು) ಉದ್ದವಾಗಿರುತ್ತವೆ. ತನ್ನ ವಿಶಿಷ್ಟವಾದ ಕೊಕ್ಕು ಮತ್ತು ವರ್ಣಮಯತೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತವೆ. ಉದ್ದನೆಯ ಹಳದಿ ಬಣ್ಣದ ಬಾಗಿದ ಕೊಕ್ಕು ಮತ್ತು ಅದರ ಮೇಲೆ ಶಿರಸ್ತ್ರಾಣದಂತೆ ಕಾಣುವ ಇನ್ನೊಂದು ಟೊಪ್ಪಿಗೆಯಿಂದಾಗಿ ಇತರ ಪಕ್ಷಿಗಳಿಗಿಂತ ಭಿನ್ನವಾಗಿ ಕಾಣುತ್ತವೆ. ಕುತ್ತಿಗೆಯ ಬಳಿ ಕಪ್ಪು ಮತ್ತು ಹಳದಿ ಬಣ್ಣ. ಕೆಂಪನೆಯ ಕಣ್ಣುಗಳು, ಕಪ್ಪು ಗರಿಗಳ ಮೇಲೆ ಹಳದಿ ಮತ್ತು ಬಿಳಿ ಬಣ್ಣದ ಚಿತ್ತಾರ. ಉದ್ದನೆಯ ಬಾಲದ ರೆಕ್ಕೆಗಳಲ್ಲಿ ಕಪ್ಪು ಬಿಳಿ ತೇಪೆಗಳು. ದಟ್ಟ ಹಸಿರಿನ ಹಿನ್ನೆಲೆಯಲ್ಲಿ ಎದ್ದು ಕಾಣುವ ವರ್ಣ ಸಂಯೋಜನೆ. ರೆಕ್ಕೆ ಬಿಚ್ಚಿ ಹಾರುವಾಗ ಅದನ್ನು ನೋಡುವದೇ ಕಣ್ಣಿಗೊಂದು ಹಬ್ಬ. ಇವುಗಳ ಮುಖ್ಯ ಆಹಾರ ಕಾಡಿನಲ್ಲಿ ಸಿಗುವ ಹಣ್ಣು-ಹಂಪಲುಗಳು. ಸಣ್ಣ ಸಸ್ತನಿಗಳು, ಕೀಟಗಳು ಮತ್ತು ಸರೀಸ್ರಪಗಳನ್ನೂ ಇವು ತಿನ್ನುತ್ತವೆ.
ಇವುಗಳ ಗೂಡು ಕಟ್ಟುವಿಕೆ ತುಂಬಾ ವಿಶಿಷ್ಟವಾದದ್ದು. ಸಂತಾನೋತ್ಪತ್ತಿಯ ಸಮಯದಲ್ಲಿ ಮರದ ಪೊಟರೆಯೊಳಗೆ ಹೆಣ್ಣು ಹಕ್ಕಿಯನ್ನು ಕೂರಿಸಿ, ಆಹಾರ ನೀಡುವದಕ್ಕಷ್ಟೇ ಸಣ್ಣ ದ್ವಾರ ಬಿಟ್ಟು, ಗಂಡು ಹಕ್ಕಿ ಪೊಟರೆಯ ಬಾಗಿಲನ್ನು ಮುಚ್ಚಿ ಬಿಡುತ್ತದೆ ಮತ್ತು ಪೊಟರೆಯೊಳಗಿರುವ ಪಕ್ಷಿಗೆ ಮತ್ತು ಮರಿಗಳಿಗೆ ಪ್ರತಿದಿನ ಪ್ರತಿಕ್ಷಣ ಆಹಾರ ಸರಬರಾಜು ಮಾಡುತ್ತದೆ. ಮರಿಗಳು ದೊಡ್ಡದಾದ ನಂತರ ಗೂಡಿನ ಬಾಗಿಲು ತೆರೆದು ಹೊರಬರಲು ಅನುವು ಮಾಡಿಕೊಡುತ್ತದೆ. ಈ ವಿಶಿಷ್ಟ ಗೂಡು ಕಟ್ಟುವಿಕೆ ಪರಭಕ್ಷಕಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆಯಾದರೂ ಒಂದೊಮ್ಮೆ ಹೊರಗಿರುವ ಗಂಡು ಹಕ್ಕಿಗೇನಾದರೂ ತೊಂದರೆ ಆದರೆ ಪೊಟರೆಯಲ್ಲಿರುವ ಹಕ್ಕಿಗಳು ಹೊರಬರಲಾಗದೇ ಅಲ್ಲೇ ಸಾಯುವ ಸಂದರ್ಭವೂ ಇರುತ್ತದೆ.
“ಗ್ರೇಟ್ ಇಂಡಿಯನ್ ಹಾರ್ನ್ಬಿಲ್’ ಗಳು ಜನಮಾನಸದಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಜನರು ಇದನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸುತ್ತಾರೆ. ಕೆಲವು ಸಮುದಾಯಗಳಲ್ಲಿ ಇಂದಿಗೂ ಜನರು ಹಾರ್ನ್ಬಿಲ್‌ನ ಗರಿಗಳು, ಕ್ಯಾಸ್ಕ ಗಳು ಮತ್ತು ಕೊಕ್ಕುಗಳನ್ನು ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಬಳಸುತ್ತಾರೆ. ಇವು ಅರಣ್ಯದಲ್ಲಿ ಬೀಜ ಪ್ರಸರಣಕ್ಕೆ ಕಾರಣವಾಗಿ ಪರಿಸರ ಉಳಿಸುವಲ್ಲಿ ಸಹಕಾರಿಯಾಗಿದೆ. ಆದರೆ ಅರಣ್ಯ ನಾಶ, ಅವುಗಳ ಆವಾಸ ಸ್ಥಾನಗಳ ನಾಶ, ಬೇಟೆ ಮತ್ತು ವನ್ಯಜೀವಿ ವ್ಯಾಪಾರ ಮುಂತಾದವುಗಳು ಅವುಗಳ ಸಂತತಿಯ ನಾಶಕ್ಕೆ ಕಾರಣವಾಗುತ್ತಿದೆ. ಈಗಾಗಲೇ “ಇಂಟನ್ಯಾìಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್’ (IUCN) ಅವುಗಳನ್ನು ವಿನಾಶದ ಅಂಚಿನಲ್ಲಿರುವ ಪ್ರಭೇದ ಎಂದು ವರ್ಗೀಕರಿಸಿದೆ. ಈ ಭವ್ಯವಾದ ಪಕ್ಷಿ ಸಂಕುಲವನ್ನು ಉಳಿಸಿಕೊಳ್ಳುವದು ನಮ್ಮ – ನಿಮ್ಮೆಲ್ಲರ ಜವಾಬ್ದಾರಿ.
ಮೂರು ದಿನಗಳ ನಮ್ಮ ಪಕ್ಷಿ ವೀಕ್ಷಣೆ ಸಾರ್ಥಕವಾಯಿತು. “ಗ್ರೇಟ್ ಇಂಡಿಯನ್ ಹಾರ್ನ್ಬಿಲ್’ ಗಳ ಅದೆಷ್ಟೋ ಚಟುವಟಿಕೆಗಳು ನಮ್ಮ ಕ್ಯಾಮರಾದಲ್ಲಿ ದಾಖಲಾಯಿತು. ಸಾಮಾನ್ಯವಾಗಿ “ಮಲಬಾರ್ ಗ್ರೇ ಹಾರ್ನ್ಬಿಲ್’, “ಮಲಬಾರ್ ಪೈಡ್ ಹಾರ್ನ್ಬಿಲ್’ ಗಳನ್ನು ನೋಡಿದ ನಮಗೆ ಇದಕ್ಕಿಂತಲೂ ಸುಂದರವಾದ ದೊಡ್ಡದಾದ ಪಕ್ಷಿಯನ್ನು ನೋಡಿದ ಖುಷಿ. ಫೋಟೋ ತೆಗೆಯುವ ಭರದಲ್ಲಿ ಕಾಲಿಗೆ ಇಂಬಳ ಕಚ್ಚಿಸಿಕೊಂಡಿದ್ದೂ ಆಗ ಗೊತ್ತಾಗಲಿಲ್ಲ.
-ಜಿ. ಆರ್.
ಪಂಡಿತ್, ಸಾಗರ