ವಿಜಯಪುರ: ಮೀನುಗಾರಿಕೆ ಕುರಿತು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಫೆ. 3ರಿಂದ 5ರವರೆಗೆ ಬೃಹತ್ ಮತ್ಸ್ಯಮೇಳ ವಸ್ತುಪ್ರದರ್ಶನ-2018 ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ವಿಜಯಕುಮಾರ ಎಸ್. ಹೇಳಿದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಗರದ ಡಾ| ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಬಳಿಯಿರುವ ಆನ್‌ಲೈನ್ ವಾಣಿಜ್ಯ ಕಟ್ಟಡದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದಲ್ಲಿ ವಿಜ್ಞಾನಿಗಳಿಂದ ಒಳನಾಡು ಮೀನುಗಾರಿಕೆಯ ಬಗ್ಗೆ ರೈತರೊಡನೆ ಸಂವಾದ ಹಾಗೂ ದೇಶಿಯ, ವಿದೇಶಿಯ 55 ತಳಿಯ ಮೀನು ತಳಿಗಳ ಪ್ರದರ್ಶನ, ಮಾಹಿತಿ ನೀಡಲಾಗುತ್ತದೆ ಸುದ್ದಿಗೋಷ್ಠಯಲ್ಲಿ ತಿಳಿಸಿದರು.
ಸಿಐಎಫ್‌ಎ, ಸಿಎಂಎಫ್‌ಆರೈ, ಸಿಐಎಫ್‌ಆರ್‌ಐ ಕೇಂದ್ರಿಯ ವಿದ್ಯಾಲಯಗಳ ಇಬ್ಬರು ವಿಜ್ಞಾನಿಗಳು ಮತ್ತು ಒಬ್ಬರು ಸಹಾಯಕರು ಮೇಳದಲ್ಲಿ ಪಾಲ್ಗೊಂಡು ಮೀನುಗಾರಿಕೆ ಸಂಶೋಧನೆಯಲ್ಲಿ ಕೈಗೊಂಡ ಸಂಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ. ನುರಿತ ವಿಜ್ಞಾನಿಗಳಿಂದ ಗೋಷ್ಠಿ ಮತ್ತು ಸಂವಾದದ ಮೂಲಕ ಮೀನುಗಾರಿಕೆ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದರು.
ಸಣ್ಣ ರೈತರು ಕೂಡ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಿ ಆರ್ಥಿಕ ಸಂಪನ್ಮೂಲವಾಗಿ ಮಾಡಿಕೊಳ್ಳಲು ಅವಕಾಶವಿದೆ. ಆಹಾರಕ್ಕಾಗಿ ಮಾತ್ರವಲ್ಲದೇ ಮನೆಗಳಲ್ಲಿ ಅಲಂಕಾರಿಕವಾಗಿಯೂ ಮೀನುಗಳನ್ನು ಸಾಕುವ ವಿಧಾನಗಳ ಕುರಿತು ರೈತರಿಗೆ ಕಿರು ತರಬೇತಿ ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ 9,500 ರೈತರು ಮೀನು ಉತ್ಪಾದನೆಯಲ್ಲಿ ತೊಡಗಿದ್ದು ಮೀನು ಸಾಕಾಣಿಕೆ ಮಾಡಿದಲ್ಲಿ ಕೃಷಿ ಹೊಂಡಗಳಲ್ಲಿರುವ ಪ್ಲಾಸ್ಟಿಕ್ ಹಾಳೆ ತಿನ್ನುತ್ತವೆ ಎಂಬ ಅನುಮಾನ ನಿವಾರಿಸಲಾಗಿದೆ. ಹೀಗಾಗಿ ರೈತರು ಇದೀಗ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದಾರೆ ಎಂದರು. ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಮತ್ಸ್ಯ ವಸ್ತುಪ್ರದರ್ಶನಕ್ಕೆ 10 ಸಾವಿರ ರೈತರು, ವಿದ್ಯಾರ್ಥಿಗಳು ಹಾಗೂ ಮೀನು ಉತ್ಪಾದನಾ ಆಸಕ್ತರು ಭೇಟಿ ನೀಡಿದ್ದಾರೆ. ಈ ಬಾರಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಕರು ಆಗಮಿಸುವ ನೀರಿಕ್ಷೆ ಇದೆ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ| ವಿಜಯ ಎಸ್, ಡಾ| ಮಂಜಣ್ಣ ಎಂ, ಡಾ| ಹರಿಶ್ಚಂದ್ರ ಜಾಧವ, ಸತೀಶ ರಜಪೂತ, ಸಂತೋಷ ತಳವಾರ ಪತ್ರಿಕಾಗೋಷ್ಠಿಯಲ್ಲಿದ್ದರು.