ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಅಭಿನಯದ ಚೊಚ್ಚಲ ಚಿತ್ರ “ತ್ರಿವಿಕ್ರಮ’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಹಲವು ಚಿತ್ರಗಳಲ್ಲಿ ತೆರೆಹಿಂದೆ ಕೆಲಸ ಮಾಡಿ ಒಂದಷ್ಟು ಅನುಭವ ಪಡೆದುಕೊಂಡಿರುವ ವಿಕ್ರಂ ರವಿಚಂದ್ರನ್, “ತ್ರಿವಿಕ್ರಮ’ನ ಮೂಲಕ ಹೀರೋ ಆಗಿ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಇನ್ನು ವಿಕ್ರಂ ಹೆಸರಿಗೆ, ನಟನಾ ಟ್ಯಾಲೆಂಟ್‌ಗೆ, ಲುಕ್ ಮತ್ತು ಮ್ಯಾನರಿಸಂ ಗೆ ತಕ್ಕಂಥ ಕಥೆಯನ್ನ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಸಹನಾ ಮೂರ್ತಿ, ಅದನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ “ತ್ರಿವಿಕ್ರಮ’ನ ಶೂಟಿಂಗ್ ಕೂಡ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದ ಕೆಲಸದಲ್ಲಿ ನಿರತವಾಗಿದೆ.
ಇದರ ನಡುವೆಯೇ, “ತ್ರಿವಿಕ್ರಮ’ ಚಿತ್ರದ ಆಡಿಯೋ ರೈಟ್ಸ್ ಭಾರೀ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಹೌದು, ಚಿತ್ರತಂಡದ ಮೂಲಗಳ ಪ್ರಕಾರ, “ತ್ರಿವಿಕ್ರಮ’ ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 50 ಲಕ್ಷಕ್ಕೆ ಮಾರಾಟವಾಗಿದೆಯಂತೆ. “ಎ2 ಮ್ಯೂಸಿಕ್’ ಆಡಿಯೋ ಸಂಸ್ಥೆ “ತ್ರಿವಿಕ್ರಮ’ನ ಹಾಡುಗಳನ್ನು ಕೇಳಿ ಖುಷಿಯಿಂದ ಡಿಮ್ಯಾಂಡ್ ಮಾಡಿ, ಇಷ್ಟೊಂದು ದೊಡ್ಡ ಮೊತ್ತಕ್ಕೆ ಚಿತ್ರದ ಹಾಡುಗಳನ್ನ ಖರೀದಿಸಿದೆ ಎನ್ನುತ್ತದೆ ಚಿತ್ರತಂಡ.
ಈ ಬಗ್ಗೆ ಮಾತನಾಡುವ ಚಿತ್ರತಂಡ, “ಇಂದಿನ ದಿನಗಳಲ್ಲಿ ಸ್ಟಾರ್ ಹೀರೋಗಳ ಸಿನಿಮಾದ ಹಾಡುಗಳೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಬಿಕರಿಯಾಗುವುದು ತೀರಾ ಅಪರೂಪ. ಹೀಗಿರುವಾಗ ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, “ತ್ರಿವಿಕ್ರಮ’ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ. ಈಗಾಗಲೇ ಬಿಡುಗಡೆಯಾ ಗಿರುವ “ತ್ರಿವಿಕ್ರಮ’ನ ಫಸ್ಟ್‌ಲುಕ್, ಟೀಸರ್‌ಗಳು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂತೆಯೇ ಸಿನಿಮಾ ಕೂಡ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎನ್ನುತ್ತದೆ.
ಇನ್ನು “ತ್ರಿವಿಕ್ರಮ’ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಚೇತನ್ ಕುಮಾರ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಅರ್ಜುನ್ ಜನ್ಯಾ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್, ಸಂಚಿತ್ ಹೆಗಡೆ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಿರ್ಮಾಪಕ ಸೋಮಣ್ಣ “ತ್ರಿವಿಕ್ರಮ’ನಿಗೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಬಾಕಿಯಿರುವ ಎರಡು ಹಾಡುಗಳನ್ನು ಭಾರತ-ಚೀನಾ, ಭಾರತ-ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.