ಕೆ.ಆರ್.ಪುರ: ಪ್ರತಿ ವರ್ಷ ಮಳೆಗಾಲದಲ್ಲಿ ಗಾಳಿ, ಮಳೆಗೆ ನೆಲಕ್ಕೆ ಉರುಳುವ, ರೆಂಬೆ-ಕೊಂಬೆ ಮುರಿದುಕೊಳ್ಳುವ ಮರ, ಗಿಡಗಳಿಗೆ ಕಾಯಕಲ್ಪ ನೀಡುವ ಕಾರ್ಯವನ್ನು ಉತ್ಸಾಹಿಗಳ ತಂಡವೊಂದು ಸದ್ದಿಲ್ಲದೆ ಮಾಡುತ್ತಿದೆ.
ಬೆಂಗಳೂರು, ಉದ್ಯಾನನಗರಿ ಎಂಬ ಖ್ಯಾತಿ ಪಡೆದಿದೆ. ಆದರೆ, ಪ್ರತಿ ವರ್ಷ ಮಳೆಗಾಲದಲ್ಲಿ ಮರಗಳು ಬೀಳುವುದು, ಕೊಂಬೆ ಮುರಿಯುವುದು ಸಾಮಾನ್ಯ. ಹೀಗೆ ಮರಗಳು ಉರುಳಿದ ಸಂದರ್ಭದಲ್ಲಿ ಸಾರ್ವಜನಿಕರು ಮರಗಳ ತೆರವಿಗೆ ಬಿಬಿಎಂಪಿ ಸಿಬ್ಬಂದಿಯ ದಾರಿ ಕಾಯುತ್ತಾರೆ.
ಆದರೆ, ಇಲ್ಲೊಂದು ಪರಿಸರ ಪ್ರೇಮಿಗಳ ತಂಡ, ಅಧಿಕಾರಿ, ಸಿಬ್ಬಂದಿಗಾಗಿ ಕಾಯದೆ, ಮಳೆ, ಗಾಳಿಗೆ ಮುರಿದು ಬೀಳುವ ಮರಗಳನ್ನು ನಿಲ್ಲಿಸುವ ಕಾರ್ಯದಲ್ಲಿ ತೊಡಗಿದೆ. ಈ ಮೂಲಕ ಮರ, ಗಿಡಗಳಿಗೆ ಮರುಜೀವ ನೀಡುತ್ತಿದೆ.
ಮರಗಳಿಗೆ ಕಾಯಕಲ್ಪ ನೀಡುವ ಈ ಅಭಿಯಾನಕ್ಕೆ “ವೀಕ್ಲಿ ಚಾಲೆಂಜ್’ ಎಂಬ ಹೆಸರಿಡಲಾಗಿದ್ದು, ಕೇವಲ ಒಂದು ವಾರದಲ್ಲಿ ನೂರಾರು ಮರಗಳನ್ನು ಈ ತಂಡದ ಸದಸ್ಯರು ರಕ್ಷಿಸಿದ್ದಾರೆ. ಬಾಲಾಜಿ ರಘೋತ್ತಮ್ ಹಾಗೂ ನಂದಾ ಎಂಬ ಇಬ್ಬರು ಸದಸ್ಯರಿಂದ ಆರಂಭವಾದ ಈ ತಂಡದಲ್ಲಿ ಪ್ರಸ್ತುತ ನೂರಾರು ಮಂದಿ ಇದ್ದಾರೆ.
ಮಳೆಗಾಲದಲ್ಲಿ ಪ್ರತಿ ವಾರ ಮರಗಳಿಗೆ ಕಾಯಕಲ್ಪ ನೀಡುವ ಸವಾಲು ಸ್ವೀಕರಿಸುವ ಸದಸ್ಯರು, ಮನೆ ಅಂಗಳ, ರಸ್ತೆ ಬದಿ, ಉದ್ಯಾನವನ, ಕೆರೆ ಅಂಗಳದಲ್ಲಿ ಮುರಿದು ಬಿದ್ದ ಮರಗಳನ್ನು ನಿಲ್ಲಿಸುತ್ತಾರೆ. ಮುರಿದ ರೆಂಬೆ, ಕೊಂಬೆಗಳನ್ನು ಬಿದಿರು ಹಾಗೂ ಹಗ್ಗದಿಂದ ಕಟ್ಟಿ ರಕ್ಷಿಸುತ್ತಾರೆ.
ತಾವು ಮರಗಳನ್ನು ರಕ್ಷಿಸುವ ಫೋಟೋಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಹಂಚಿಕೊಳ್ಳುವ ತಂಡದ ಸದಸ್ಯರು, ಆ ಮೂಲಕ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಕೆ.ಆರ್.ಪುರ ಕ್ಷೇತ್ರದ ಬಸವನಪುರ, ಸೀಗೆಹಳ್ಳಿ ಕೆರೆ, ಬನಶಂಕರಿ ಬಡಾವಣೆ, ವೈಟ್‌ಸಿಟಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿ ಸಕ್ರಿಯವಾಗಿರುವ ಈ ತಂಡ ಈವರೆಗೆ 100ಕ್ಕೂ ಹೆಚ್ಚು ಮರಗಳನ್ನು ರಕ್ಷಿಸಿದೆ.