ಇವತ್ತು ಆನ್‌ಲೈನ್ ಎನ್ನುವುದು ಜನಸಾಮಾನ್ಯರ ಜೀವನದಲ್ಲೂ ಹಾಸುಹೊಕ್ಕಾಗಿದೆ. ಕಣ್ಮುಂದೆ ಮಾಯಾಲೋಕ ಸೃಷ್ಟಿಸುವ ಇಂಥ ಅಂತರ್ಜಾಲದಲ್ಲಿ, ಎಚ್ಚರ ತಪ್ಪಿ ಸಿಲುಕಿದರೆ ಏನಾಗಬಹುದು ಅನ್ನೋದನ್ನ ತೆರೆಮೇಲೆ ಹೇಳಲು ಹೊರಟಿದೆ “ಗ್ರೇ ಗೇಮ್ಸ್’ ಚಿತ್ರ.
ಇಂಟರ್ ನೆಟ್, ಆನ್‌ಲೈನ್, ಅತಿಯಾದ ತಂತ್ರಜ್ಞಾನದ ಅವಲಂಬನೆ, ಅದರಿಂದಾಗುವ ಪರಿಣಾಮಗಳ ಸುತ್ತ ಈ ವಾರ ತೆರೆಕಂಡಿರುವ “ಗ್ರೇ ಗೇಮ್ಸ್’ ಚಿತ್ರದ ಕಥೆ ಸಾಗುತ್ತದೆ. ಈ ಕಥೆಗೊಂದು ಕ್ರೈಮ್ ಹಿನ್ನೆಲೆಯನ್ನು ನೀಡಲಾಗಿದೆ.
ಈ ಮೂಲಕ ಚಿತ್ರವನ್ನು ಸಸ್ಪೆನ್ಸ್-ಥ್ರಿಲ್ಲರ್ ಹಾದಿಯತ್ತ ತಿರುಗಿಸಿದ್ದಾರೆ. ಇಂದಿನ ಜನರೇಶನ್ ಸೈಬರ್ ಚಟುವಟಿಕೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವಂಥ ಅನೇಕ ಘಟನೆಗಳು ಸಿನಿಮಾದಲ್ಲಿದ್ದು, ಸಮಾಜಕ್ಕೊಂದು ಮೆಸೇಜ್ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಇಲ್ಲಿ ಅನೇಕ ಪಾತ್ರಗಳು ಬಂದು ಹೋಗುತ್ತವೆ. ಪ್ರತಿ ಪಾತ್ರಕ್ಕೂ ಒಂದು ಹಿನ್ನೆಲೆ, ಘಟನೆ ಇದೆ. ಈ ಮೂಲಕ ಚಿತ್ರ ಆಗಾಗ ಮಗ್ಗುಲು ಬದಲಿಸುತ್ತಾ ಸಾಗುತ್ತದೆ. ಚಿತ್ರದಲ್ಲಿ ಕ್ರೈಂ, ತನಿಖೆ ಎಲ್ಲವೂ ಇದೆ. ಆದರೆ, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಜೊತೆಗೆ ನಿರೂಪಣೆ ಇನ್ನೊಂದಿಷ್ಟು ಬಿಗಿಯಾಗಿರಬೇಕು ಎಂದೆನಿಸದೇ ಇರದು. ಚಿತ್ರದಲ್ಲಿ ವಿಜಯ ರಾಘವೇಂದ್ರ ಮನಶಾಸ್ತ್ರಜ್ಞನಾಗಿ ಕಾಣಿಸಿಕೊಂಡಿದ್ದಾರೆ.
ನವನಟ ಜಯ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಭಾವನಾ, ಶ್ರುತಿ ಪ್ರಕಾಶ್, ಅಶ್ವಿನ್ ಹಾಸನ್, ರವಿಭಟ್ ಸೇರಿದಂತೆ ಇತರರು ನಟಿಸಿದ್ದಾರೆ.
– ಆರ್.ಪಿ