ಮುಂಬೈ: ದೇಶದ ಜನಪ್ರಿಯ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಿಯ ಗ್ರಾಹಕರಿಗೆ ಅಚ್ಚರಿಯ ಸುದ್ದಿಯೊಂದನ್ನು ಹೊರಹಾಕಿದೆ. ಅದೇನೆಂದರೆ “ಜನಪ್ರಿಯ ಟಾಟಾ ಸಫಾರಿ” ಬ್ರ್ಯಾಂಡ್ ಮುಂಬರುವ ಎಸ್ ಯುವಿ ಸರಣಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರಂತೆ 2020ರ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಿದ್ದ ಏಳು ಸೀಟಿನ ಗ್ರಾವಿಟಾಸ್ ಎಸ್ ಯುವಿ ಯನ್ನೇ ನೂತನ ಟಾಟಾ ಸಫಾರಿಯಾಗಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ತಿಳಿಸಿದೆ.
ಕೋವಿಡ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ 2020ರಲ್ಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದ ಗ್ರಾವಿಟಾಸ್ ಎಸ್ ಯುವಿ ಕಾರನ್ನು ಬಿಡುಗಡೆಗೊಳಿಸಿರಲಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾವಿಟಾಸ್ ನೂತನ ಸಫಾರಿ ಮಾಡೆಲ್ ನಲ್ಲಿ ಮಾರುಕಟ್ಟೆಗೆ ಬರಲಿದೆ.
2021ರ ಜನವರಿಯಿಂದಲೇ ಬುಕ್ಕಿಂಗ್ ಆರಂಭವಾಗಲಿದ್ದು,ಎಸ್ ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್ ಗಳನ್ನು ಒಳಗೊಂಡಿದ್ದು, ಹ್ಯಾರಿಯರ್ ಮುಂದುವರಿದ ಭಾಗವಾಗಿರುವ ಗ್ರಾವಿಟಾಸ್ ಟಾಟಾ ಬ್ರ್ಯಾಂಡ್ ಆದ “ ಟಾಟಾ ಸಫಾರಿ” ಶ್ರೇಣಿಯಲ್ಲಿ ಲಭ್ಯವಾಗಲಿದೆ ಎಂದು ವಿವರಿಸಿದೆ.
ಇದನ್ನೂ ಓದಿ:ತೈಲ ಬೆಲೆ ಸತತ ಏರಿಕೆ: ಬೆಂಗಳೂರು ಸೇರಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ಟಾಟಾ ಸಫಾರಿ ಭಾರತದಲ್ಲಿ ಎರಡು ದಶಕಗಳ ಕಾಲದಿಂದ ಭರ್ಜರಿ ಜನಪ್ರಿಯತೆ ಪಡೆದಿತ್ತು. ಟಾಟಾ ಸಂಸ್ಥೆಯಿಂದ ನಿರ್ಮಿಸಲ್ಪಟ್ಟ ಎಸ್ ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಶ್ರೇಣಿಯ ಕಾರನ್ನು 1998ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ನಂತರ 2001ರಲ್ಲಿ ಟಾಟಾ ಸಫಾರಿ ಇಎಕ್ಸ್, 2003ರಲ್ಲಿ ಟಾಟಾ ಸಫಾರಿ ಲಿಮಿಟೆಡ್ ವರ್ಷನ್, ನಂತರ ಟಾಟಾ ಸಫಾರಿ ಎಕ್ಸ್ ಐ ಪೆಟ್ರೋಲ್ ಮತ್ತು 2005ರಲ್ಲಿ ಟಾಟಾ ಸಫಾರಿ ಡೈಕೊರ್ ಮಾದರಿಯನ್ನು ಬಿಡುಗಡೆ ಮಾಡಿತ್ತು.
ಭಾರತದಲ್ಲಿ ಹಲವು ವಿದೇಶಿ ಎಸ್ ಯುವಿಗಳ ಅಬ್ಬರದ ನಡುವೆಯೂ ಇಂದಿಗೂ ಟಾಟಾ ಸಫಾರಿ ಬಹು ಜನಪ್ರಿಯವಾಗಿದ್ದರಿಂದ ಇದೀಗ ಟಾಟಾ ಸಫಾರಿ ಗ್ರಾವಿಟಾಸ್ ಮೂಲಕ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.