ದಾವಣಗೆರೆ: ಕೋವಿಡ್-19 ವೈರಸ್ ಸೋಂಕಿನ ವಿರುದ್ಧ ಹಗಲಿರುಳೆನ್ನದೆ ಹೋರಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದ ಪುಷ್ಪವೃಷ್ಟಿಗೈದು, ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತಾ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದು ಎರಡು ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವವರಿಗೆ ಆತ್ಮಸ್ಥೈರ್ಯ ಹಾಗೂ ಚೈತನ್ಯ ತುಂಬಲಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಎಂತಹ ಪರಿಸ್ಥಿತಿ ಬಂದರೂ ನಾವು ನಿಭಾಯಿಸುತ್ತೇವೆ. ನಾವು ನಿಮ್ಮ ಜೊತೆಗಿದ್ದೇವೆ. ಯಾರೂ ಧೃತಿಗೆಡಬಾರದು ಎಂದು ಜಿಲ್ಲಾಧಿಕಾರಿ ಆರೋಗ್ಯ ಅಧಿಕಾರಿಗಳಿಗೆ ಹುರಿದುಂಬಿಸಿದರು. ಜಿಲ್ಲೆಯಲ್ಲಿ ಅತ್ಯಂತ ಪರಿಣಿತ ವೈದ್ಯರಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಈ ಕೋವಿಡ್-19 ವಿರುದ್ಧದ ಯುದ್ಧ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಮೇಯರ್ ಸಹ ಡೈನಾಮಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಂಬರುವ ಸವಾಲಿನ ದಿನಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಓಡಾಡಿ ಜನರಲ್ಲಿ ಆತ್ಮ ವಿಶ್ವಾಸ ತುಂಬಿ, ನಾವು ನಿಮ್ಮ ಜೊತೆಗಿದ್ದೇವೆ ಎಂದೇಳಬೇಕಿದೆ. ಇಷ್ಟು ದಿನದ ಕಾಲ ಬೇರೆ ಇತ್ತು. ಈಗಿನ ಕಾಲ ಬೇರೆಯಾಗಿದೆ. ನಾವು ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇವೆ ಎಂದು ಮೇಯರ್‌ಗೆ ಭರವಸೆ ನೀಡಿದರು.
ಮೇಯರ್ ಬಿ.ಜಿ. ಅಜಯಕುಮಾರ್ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗದುಕೊಂಡು ಪ್ರತಿದಿನ ಸಭೆ ನಡೆಸುವ ಮೂಲಕ ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್-19 ಸೋಂಕು ಪ್ರಕರಣ ವರದಿಯಾಗಿರಲಿಲ್ಲ. ಆದರೆ, ದುರಾದೃಷ್ಟವೋ, ಎಡವಲಾಯಿತೋ ಗೊತ್ತಿಲ್ಲ. ಈಗ ಕೋವಿಡ್-19 ಸೋಂಕು ವ್ಯಾಪಿಸಿದೆ. ಇದೊಂದು ಯುದ್ಧವಾಗಿದ್ದು, ಎದುರಿಸಲು ಸನ್ನದ್ಧರಾಗಿದ್ದೇವೆ ಎಂದರು.
ಮಹಾಭಾರತದಲ್ಲಿ ಕೌರವರ ವಿರುದ್ಧ ಯುದ್ಧ ಮಾಡಲು ಶ್ರೀಕೃಷ್ಣ ಸಾರಥಿಯಾದಂತೆ ಇಂದು ದೇಶದಲ್ಲಿ ಕೋವಿಡ್-19 ವೈರಸ್ ಓಡಿಸಲು ವೈದ್ಯರು, ನರ್ಸ್‌ಗಳು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸಾರಥಿಯಾಗಿದ್ದಾರೆ. ಇದೊಂದು ಸವಾಲಾಗಿ ಸ್ವೀಕರಿಸಿ ಕೋವಿಡ್-19 ಮುಕ್ತಗೊಳಿಸುವ ಮೂಲಕ ದಾವಣಗೆರೆ ಮಾದರಿ ಜಿಲ್ಲೆಯಾಗಿಸೋಣ ಎಂದು ಹೇಳಿದರು.
ಪಿಜಿ ವಿದ್ಯಾರ್ಥಿಗಳ ಸ್ಟೆçಫಂಡ್ ನೀಡಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸರಿಯಾದ ಊಟ ಸಿಗುತ್ತಿಲ್ಲ ಹಾಗೂ ವಿಶ್ರಾಂತಿಗಾಗಿ ಗುಂಡಿ ಕಲ್ಯಾಣ ಮಂಟಪ ವ್ಯವಸ್ಥೆ ಮಾಡಿಸುವ ಕುರಿತು ಕೇಳಿಕೊಂಡಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತದೊಂದಿಗೆ ಸೇರಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಮಾತನಾಡಿ, ಇದೊಂದು ಯುದ್ಧದ ಸಂದರ್ಭ. ಎಲ್ಲರೂ ಸನ್ನದ್ಧರಾಗೋಣ. ಇದಕ್ಕೆ ಜಿಲ್ಲೆಯ ನಾಗರಿಕರು ಸಹಕರಿಸಬೇಕು. ಕೋವಿಡ್ ಬಂದಾಗ ನೋಡೊಣಾ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ ಇದೊಂದು ಕಣ್ಣಿಗೆ ಕಾಣಲಾರದ ವೈರಸ್. ಹಾಗಾಗಿ ನಮ್ಮ ರಕ್ಷಣೆಯಲ್ಲಿ ನಾವಿರಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾಗರಾಜ್ ಮಾತನಾಡಿ, ನಮಗೆ ಚೈತನ್ಯ ತುಂಬಲು ಗೌರವ ಸಲ್ಲಿಸಿದ್ದಕ್ಕೆ ಧನ್ಯವಾದ. ಎಲ್ಲ ರೀತಿಯ ಬೆಂಬಲ ನೀಡುತ್ತಾ ಹೋದರೆ ಖಂಡಿತವಾಗಿಯೂ ಕೂಡ ಮಹಾಮಾರಿ ಕೊರೊನಾ ಹಿಮ್ಮೆಟ್ಟಿಸುವ ವಿಶ್ವಾಸ ನಮ್ಮಲಿದೆ. ಇಷ್ಟು ದಿನ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ನಮ್ಮ ಜೊತೆಯಲ್ಲೇ ಇದೆ. ಮುಂದೆಯೂ ಇನ್ನೂ ಹೆಚ್ಚಿನ ಬೆಂಬಲ ನಮಗೆ ನೀಡಬೇಕು ಎಂದು ಮನವಿ ಮಾಡಿದರು.