ಕತ್ತಲಾದ ಕೂಡಲೆ ಮಿಡತೆ ತನ್ನ ಮುಂಗಾಲಿನಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ “ಚಿರ್ಪ್ ಚಿರ್ಪ್’ ಎಂದು ಸದ್ದು ಮಾಡುತ್ತಿತ್ತು. ಆ ಸದ್ದು ಎಷ್ಟು ಜೋರಾಗಿರುತ್ತಿತ್ತೆಂದರೆ ಮೈಲಿ ದೂರದವರೆಗೂ ಕೇಳುತ್ತಿತ್ತು. ಮಿಡತೆ ಕೂಗುವುದನ್ನು ಕಪ್ಪೆಗೆ ಸಹಿಸಿಕೊಳ್ಳಲಾಗಲಿಲ್ಲ.
ಬಹಳ ಹಿಂದಿನ ಮಾತು, ಕಪ್ಪೆ ಮತ್ತು ಮಿಡತೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದವು. ಒಂದು ದಿನ ಕಪ್ಪೆ “ಗೆಳೆಯ ನಾಳೆ ರಾತ್ರಿ ನಮ್ಮ ಮನೆಗೆ ಊಟಕ್ಕೆ ಬಂದುಬಿಡು. ನಾನು ನನ್ನ ಹೆಂಡತಿ ಸೇರಿ ನಿನಗೋಸ್ಕರ ಒಳ್ಳೆಯ ಆಡುಗೆ ಮಾಡಿರುತ್ತೇವೆ’ ಎಂದು ಮಿಡತೆಯನ್ನು ಊಟಕ್ಕೆ ಕರೆಯಿತು. ಮಿಡತೆ ಸಂತೋಷದಿಂದ ಔತಣಕೂಟಕ್ಕೆ ಬರಲು ಒಪ್ಪಿಕೊಂಡಿತು.
ಮರುದಿನ ರಾತ್ರಿ ಮಿಡತೆ ಕಪ್ಪೆಯ ಮನೆಗೆ ಔತಣಕ್ಕೆ ಬಂದಿತು. ಊಟಕ್ಕೆ ಕೂರುವ ಮೊದಲು ಕಪ್ಪೆ ತನ್ನ ಕಾಲನ್ನು ತೊಳೆದುಕೊಂಡಿತು ಹಾಗೂ ಮಿಡತೆಗೂ ಕಾಲು ತೊಳೆದು ಊಟಕ್ಕೆ ಕೂರಲು ಹೇಳಿತು. ಮಿಡತೆಗೆ ಹುಟ್ಟಿನಿಂದಲೇ ಒಂದು ಅಭ್ಯಾಸವಿತ್ತು. ಕತ್ತಲಾದ ಕೂಡಲೆ ಮಿಡತೆ ತನ್ನ ಮುಂಗಾಲಿನಿಂದ ಬಾಯಿಯನ್ನು ಒರೆಸಿಕೊಳ್ಳುತ್ತಾ “ಚಿರ್ಪ್ ಚಿರ್ಪ್’ ಎಂದು ಸದ್ದು ಮಾಡುತ್ತಿತ್ತು. ಆ ಸದ್ದು ಎಷ್ಟು ಜೋರಾಗಿರುತ್ತಿತ್ತೆಂದರೆ ಮೈಲಿ ದೂರದವರೆಗೂ ಕೇಳುತ್ತಿತ್ತು. ಮಿಡತೆ ಕೂಗುವುದನ್ನು ಕಪ್ಪೆಗೆ ಸಹಿಸಿಕೊಳ್ಳಲಾಗಲಿಲ್ಲ. ಅದು “ನೀನು ಕೂಗುವುದನ್ನು ನಿಲ್ಲಿಸುವೆಯಾ? ನೀನು ಹೀಗೆ ಕೂಗುತ್ತಿದ್ದರೆ ನನಗೆ ತಲೆನೋವು ಬರುತ್ತದೆ’ ಎಂದಿತು. ಆದರೆ ಮಿಡತೆಗೆ ಹುಟ್ಟಿನಿಂದಲೇ ಬಂದ ಅಭ್ಯಾಸವಾಗಿದ್ದರಿಂದ ಅದನ್ನು ಪೂರ್ತಿಯಾಗಿ ನಿಲ್ಲಿಸಲಾಗಲಿಲ್ಲ. ಊಟ ಮಾಡುವಾಗಲೂ ಅದು “ಚಿರ್ಪ್ ಚಿರ್ಪ್’ ಎಂದು ಸದ್ದು ಮಾಡುತ್ತಲೇ ಇತ್ತು. ಪ್ರತಿ ಬಾರಿ ಕೂಗಿದಾಗಲೂ ಕಪ್ಪೆ ಸುಮ್ಮನಿರುವಂತೆ ಸೂಚಿಸುತ್ತಿತ್ತು. ಇದರಿಂದಾಗಿ ಮಿಡತೆಗೆ ಸರಿಯಾಗಿ ಊಟ ಮಾಡಲಾಗಲಿಲ್ಲ. ಅದಕ್ಕೆ ತುಂಬಾ ಕೋಪ ಬಂದಿತು. ಊಟಕ್ಕೆ ಕರೆದು ಅತಿಥಿಯನ್ನು ಅವಮಾನಿಸುವುದು ತಪ್ಪು ಎನ್ನುವುದು ಮಿಡತೆಯ ಅಭಿಪ್ರಾಯವಾಗಿತ್ತು.
ಇನ್ನೊಂದು ದಿನ ಮಿಡತೆ, ಕಪ್ಪೆಯನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಆಮಂತ್ರಣ ನೀಡಿತು. ಅದರಂತೆ ಮರುದಿನ ಮಿಡತೆಯ ಮನೆಗೆ ಕಪ್ಪೆ ಔತಣಕ್ಕೆ ಬಂದಿತು. ಊಟ ಸಿದ್ದವಾಗಿತ್ತು. ಮಿಡತೆ ತನ್ನ ಕಾಲುಗಳನ್ನು ತೊಳೆದುಕೊಂಡಿತು. ಹಾಗೆಯೇ ಕಪ್ಪೆಗೂ ಕಾಲು ತೊಳೆದು ಕೊಳ್ಳಲು ಮಿಡತೆ ಹೇಳಿತು. ಕಪ್ಪೆ ಕಾಲು ತೊಳೆದುಕೊಂಡು ನೆಗೆಯುತ್ತಾ ಊಟದ ಟೇಬಲ್ ಬಳಿ ಬಂದಿತು. ಮಿಡತೆ “ನೆಗೆದುಕೊಂಡು ಬಂದಿದ್ದರಿಂದ ನಿನ್ನ ಮುಂಗಾಲು ಮತ್ತೆ ಕೊಳೆಯಾಗಿದೆ ನೀನು ಮತ್ತೂಮ್ಮೆ ಕಾಲು ತೊಳೆದುಕೊಂಡು ಬರುವುದು ಒಳಿತು’ ಎಂದಿತು ಮಿಡತೆ. ಕಪ್ಪೆ, ಮತ್ತೆ ಬಚ್ಚಲಿಗೆ ಹೋಗಿ ಕಾಲನ್ನು ತೊಳೆದುಕೊಂಡು ಮತ್ತೆ ಹಾರಿ ಟೇಬಲ್ ಬಳಿ ಬಂದು ಇನ್ನೇನು ಊಟಕ್ಕೆ ಕೈ ಹಾಕಬೇಕು! ಅಷ್ಟರಲ್ಲಿ ಕಪ್ಪೆಯನ್ನು ಮಿಡತೆ ಮತ್ತೆ ತಡೆಯಿತು. “ನಿನ್ನ ಕೊಳಕು ಕೈಗಳನ್ನು ತಟ್ಟೆಗೆ ಹಾಕಬೇಡ. ಅದು ಕೊಳೆಯಾಗಿದೆ. ಮತ್ತೂಮ್ಮೆ ಕೈಕಾಲು ತೊಳೆದುಕೊಂಡು ಬಾ’ ಎಂದಿತು. ಮಿಡತೆ ಮಾತು ಕೇಳಿ ಕಪ್ಪೆಯ ಕೋಪ ನೆತ್ತಿಗೇರಿತು. “ನೀನು ಊಟಕ್ಕೆ ಕರೆದು ನನ್ನನ್ನು ಅವಮಾನಿಸುತ್ತಿರುವೆ. ನಾನು ಊಟ ಮಾಡಬಾರದೆಂದೇ ಹೀಗೆಲ್ಲಾ ಮಾಡುತ್ತಿರುವೆ. ನಿನಗೆ ಗೊತ್ತು, ನಾನು ನೆಗೆಯಲು ಮುಂಗಾಲು ಮತ್ತು ಹಿಂಗಾಲನ್ನು ಬಳಸಲೇಬೇಕು. ಬಚ್ಚಲಿನಿಂದ ಊಟದ ಟೇಬಲ್ಲಿಗೆ ಬರುವಾಗ ಅದು ಸ್ವಲ್ಪ ಕೊಳೆ ಆಗಿಯೇ ಆಗುತ್ತದೆ. ಅದನ್ನು ನೀನು ಸಹಿಸಿಕೊಳ್ಳಬೇಕು’ ಎಂದಿತು. ಮಿಡತೆ, “ನಾನು ಮೊನ್ನೆ ನಿಮ್ಮ ಮನೆಗೆ ಬಂದಿದ್ದಾಗ ಸದ್ದು ಮಾಡಬಾರದೆಂದು ಹೇಳಿ ಹೇಳಿ ಅವಮಾನಿಸಿದೆ. ಆದರೆ ಕತ್ತಲಲ್ಲಿ ಸದ್ದು ಮಾಡುವುದು ನಾನೊಬ್ಬನೇ ಅಲ್ಲ. ಎಲ್ಲಾ ಮಿಡತೆಗಳೂ ಮಾಡುತ್ತವೆ. ಅದು ನಮ್ಮ ಹುಟ್ಟುಗುಣ. ಅದು ಗೊತ್ತಿದ್ದೂ ಅವಮಾನ ಮಾಡಿದೆಯಲ್ಲ, ಸರಿಯೇ?’ ಎಂದಿತು. ಕಪ್ಪೆ ಮತ್ತು ಮಿಡತೆ ನಡುವೆ ವಾದ ವಿವಾದ ಬೆಳೆಯಿತು. ಕಪ್ಪೆ ಕೋಪಗೊಂಡು ತನ್ನ ಉದ್ದ ನಾಲಗೆಯಿಂದ ಗಬಕ್ ಎಂದು ಮಿಡತೆಯನ್ನು ನುಂಗಿತು.
– ಪ್ರಕಾಶ್ ಕೆ. ನಾಡಿಗ್, ತುಮಕೂರು