ದೇವನಹಳ್ಳಿ: ದ್ರಾಕ್ಷಿ ಬೆಳೆಯನ್ನು ಜೀವನಾ ಧಾರವಾಗಿ ನಂಬಿಕೊಂಡಿರುವ ರೈತರ ಪಾಲಿಗೆ ಇತ್ತೀಚೆಗೆ ಬೆಳಗಿನ ಜಾವ ಬೀಳುತ್ತಿರುವ ದಟ್ಟ ಮಂಜಿನ ಹನಿಗಳು ಕಂಟಕವಾಗಿ ಪರಿಣಮಿಸುತ್ತಿವೆ. ದಿನನಿತ್ಯ ಔಷಧಿ ಸಿಂಪಡಣೆ ಮಾಡಿ ಬೆಳೆಗಳನ್ನು ಸಂರಕ್ಷಿಕೊಳ್ಳಬೇಕಾದ ಅನಿವಾರ್ಯತೆ ತಾಲೂಕಿನ ಅನ್ನದಾತರಿಗೆ ಬಂದೊದಗಿದೆ.
ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಿದರೆ, ಒಂದು ವೇಳೆ ದ್ರಾಕ್ಷಿಗೆ ಬೆಲೆ ಇಲ್ಲದಿದ್ದಾಗ, ಅದರಲ್ಲಿ ಶೇಖರಣೆ ಮಾಡಿಟ್ಟುಕೊಂಡು ಬೆಲೆಗಳು ಏರಿಕೆ ಯಾದಾಗ ಮಾರಾಟ ಮಾಡಿಕೊಳ್ಳಲು ಅವಕಾಶ ವಾಗುತ್ತದೆ. ಎಲ್ಲಾ ಬೆಳೆಗಳಿಗೂ ಸರ್ಕಾರ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸುತ್ತಿದೆ.
ಈ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿ ರೈತ ಕುಟುಂಬಗಳ ಪಾಲಿಗೆ ಜೀವನಾಧಾರವಾಗಿರುವ ದ್ರಾಕ್ಷಿ ಬೆಳೆಗಳನ್ನು ಪರಿಗಣಿಸಿ, ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತರು ಬೆಳೆದ ದ್ರಾಕ್ಷಿಯನ್ನು ಸರ್ಕಾರರೇ ಖರೀದಿ ಮಾಡಿ, ವೈನ್ ತಯಾರಿಕಾ ಘಟಕಗಳಿಗೆ ರವಾನೆ ಮಾಡುವಂತಹ ಕೆಲಸವಾಗ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಮಂಜಿನ ಹನಿಗಳಿಂದ ದ್ರಾಕ್ಷಿ ಬೆಳೆಗೆ ರೋಗ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ತೀವ್ರವಾಗಿ ಕುಸಿದಿರುವ ಅಂತರ್ಜಲ ಮಟ್ಟದಿಂದಾಗಿ ರೈತರು, ತರಕಾರಿ ಬೆಳೆಗಳನ್ನು ಕೈಬಿಟ್ಟಿದ್ದಾರೆ. ಪರ್ಯಾಯವಾಗಿ ಹನಿ ನೀರಾವರಿ ಅಳವಡಿಸಿಕೊಂಡು ವಾಣಿಜ್ಯ ಬೆಳೆಯಾದ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. ಬೆಂಗಳೂರು ಬ್ಲೂ, ದಿಲ್ ಕುಶ್, ಸೋನಾಕ ಸೇರಿದಂತೆ ಹಲವಾರು ತಳಿಯ ಬೆಳೆಗಳನ್ನು ಬೆಳೆಯುತ್ತಿರುವ ರೈತರು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅಂಟಿಕೊಂಡಿದ್ದ ರೋಗಗಳನ್ನು ಹತೋಟಿಗೆ ತರಲು ಹರಸಾಹ ಸಪಟ್ಟಿದ್ದರು. ಇದೀಗ, ಬೆಳಗಿನ ಜಾವ ಮತ್ತು ಸಂಜೆ ವೇಳೆ ಬೀಳುತ್ತಿರುವ ಮಂಜಿನ ಹನಿಗಳಿಂದಾಗಿ ದ್ರಾಕ್ಷಿ ಬೆಳೆ ಮತ್ತಷ್ಟು ರೋಗಗಳಿಗೆ ತುತ್ತಾಗುವಂತಾಗಿದೆ.
ಸರ್ಕಾರವೇ ದ್ರಾಕ್ಷಿ ಬೆಳೆ ಖರೀದಿಸಲಿ: ರೈತರು ರೇಷ್ಮೆ ಗೂಡು ಬೆಳೆದರೆ ಕೆಎಸ್‌ಎಂಬಿನವರು ಖರೀದಿ ಮಾಡಿಕೊಳ್ಳುತ್ತಾರೆ. ರಾಗಿ ಬೆಳೆದರೆ ಕೃಷಿ ಅಧಿಕಾರಿಗಳು ವೈಜ್ಞಾನಿಕ ಬೆಲೆ ನಿಗದಿಪಡಿಸಿ ರಾಗಿ ಖರೀದಿ ಮಾಡುತ್ತಾರೆ. ಅದೇ ಪ್ರಕಾರ, ದ್ರಾಕ್ಷಿಯನ್ನೂ ಖರೀದಿ ಮಾಡಬೇಕು. ಮಹಾರಾಷ್ಟ್ರದ ಸಾಂಗ್ಲಿ ಮುಂತಾದ ಕಡೆಗಳಿಂದ ಆಮದು ಮಾಡಿಕೊಳ್ಳುವ ಉದ್ದೇಶ ದಿಂದ, ಈ ಭಾಗದಲ್ಲಿನ ರೈತರು ಬೆಳೆಯುವ ದ್ರಾಕ್ಷಿಗೆ ರಾಸಾಯನಿಕ ಔಷಧಿಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ ಎಂಬ ನೆಪ ಹೇಳಲಾಗುತ್ತದೆ. ನಮ್ಮ ಭಾಗದ ರೈತರು ಬೆಳೆಯುವ ದ್ರಾಕ್ಷಿಯನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ನಂತರ ವರದಿಯಾಧರಿಸಿ ಖರೀದಿ ಮಾಡಲಿ. ಒಟ್ಟಾರೆ, ಸರ್ಕಾರ ಇಲ್ಲಿನ ದ್ರಾಕ್ಷಿ ಬೆಳೆ ಖರೀದಿ ಮಾಡಬೇಕು. ಆಗ ಮಾತ್ರ ನಮಗೆ ನ್ಯಾಯಸಿಗುತ್ತದೆ ಎಂಬುದು ರೈತರ ಅಳಲಾಗಿದೆ.
ಹಣಕಾಸು ಸೌಲಭ್ಯ ಒದಗಿಸಲಿ: ರೈತರು ಕಟಾವು ಮಾಡಿ, ಶೇಖರಣೆ ಮಾಡಿಟ್ಟುಕೊಳ್ಳುವ ದ್ರಾಕ್ಷಿಯನ್ನು ಮಾರಾಟ ಮಾಡುವವರಿಗೂ ಅವಕಾಶ ನೀಡಬೇಕು. ಮುಂದಿನ ಬೆಳೆಗೆ ಬಂಡವಾಳ ಹೂಡಿಕೆಗೆ ಹಣಕಾಸು ಸೌಲಭ್ಯ ಒದಗಿಸುವಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡಬೇಕು. ದ್ರಾಕ್ಷಿ ಫಸಲು ಮಾರಾಟ ಮಾಡಿದ ನಂತರ ರೈತರಿಂದ ಹೂಡಿಕೆ ಬಂಡವಾಳ ವಾಪಸ್ ಪಡೆಯಲಿ ಎನ್ನುತ್ತಾರೆ ರೈತ ಜಯರಾಮ್.
ತಾಲೂಕಿನ 1,620 ಹೆಕ್ಟೇರ್‌ನಲ್ಲಿ ರೈತರು ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ದ್ರಾಕ್ಷಿ ಬೆಳೆಗಾರರಿಗೆ ತಾಂತ್ರಿಕತೆ ಬಗ್ಗೆ ಮಾಹಿತಿ ಸಹ ನೀಡುತ್ತಿದ್ದೇವೆ. ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಮಾರುಕಟ್ಟೆ ವ್ಯವಸ್ಥೆ ತೋಟಗಾರಿಕಾ ಇಲಾಖೆಗೆ ಬರುವುದಿಲ್ಲ.
ಮಂಜುನಾಥ್, ಸಹಾಯಕ ನಿರ್ದೇಶಕರು, ತಾಲೂಕು ತೋಟಗಾರಿಕಾ ಇಲಾಖೆ
ಎಸ್. ಮಹೇಶ್