Advertisement

ದ್ರಾಕ್ಷಿ ಸೌಂದರ್ಯವರ್ಧಕ

03:45 AM Feb 10, 2017 | Team Udayavani |

ದ್ರಾಕ್ಷಿಯನ್ನು ಬಾಹ್ಯ ಲೇಪಗಳ ವಿವಿಧ ರೂಪದಲ್ಲಿ ಬಳಸಿದಾಗಲೂ, ಜ್ಯೂಸ್‌, ಪೇಯ ಪಾನೀಯಗಳ ರೂಪದಲ್ಲಿ ಸೇವಿಸಿದಾಗಲೂ ಸೌಂದರ್ಯವರ್ಧನೆ ಹಾಗೂ ಸೌಂದರ್ಯರಕ್ಷಣೆ ಉಂಟಾಗುತ್ತದೆ. ಮನೆಯಲ್ಲೇ, ವಿವಿಧ ರೂಪದಲ್ಲಿ ದ್ರಾಕ್ಷೆಯೆಂಬ ಸೌಂದರ್ಯ ಖಜಾನೆಯ ಬಳಕೆಯನ್ನು ಅರಿಯೋಣ.

Advertisement

ಒಣ ಚರ್ಮ, ನೆರಿಗೆಯುಳ್ಳ ಚರ್ಮ, ಶುಷ್ಕ , ಕಾಂತಿಹೀನ ಚರ್ಮಗಳಿಗೆ ದ್ರಾಕ್ಷಿ-ಬೆಣ್ಣೆ ಹಣ್ಣಿನ ಲೇಪ ಬಲು ಪರಿಣಾಮಕಾರಿ.
ವಿಧಾನ: ದ್ರಾಕ್ಷಿ ತಾಜಾ-20, ಬೆಣ್ಣೆ ಹಣ್ಣಿನ ತಿರುಳು 3 ಚಮಚ ತೆಗೆದುಕೊಂಡು ಎರಡನ್ನೂ ಚೆನ್ನಾಗಿ ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್‌ ತಯಾರಿಸಬೇಕು.

ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.ವಾರಕ್ಕೆ 2-3 ಬಾರಿ ಬಳಸಿದರೆ ಶೀಘ್ರ ಪರಿಣಾಮಕಾರಿ.

ಆ್ಯಂಟಿ ಏಜಿಂಗ್‌ ಮಾಸ್ಕ್
ದ್ರಾಕ್ಷಿಯಲ್ಲಿರುವ ದ್ರವ್ಯ ಹಾಗೂ ಪೋಷಕಾಂಶಗಳು, ಮೊಟ್ಟೆ ಹಾಗೂ ನೆಲ್ಲಿರಸದೊಂದಿಗೆ ಬಳಸಿದಾಗ ಯೌವ್ವನಕಾರಕ ಗುಣಗಳನ್ನು ಉಂಟುಮಾಡುತ್ತದೆ. ಅರ್ಥಾತ್‌ ವಯೋಸಹಜ ಬದಲಾವಣೆಗಳಾದ ನೆರಿಗೆ, ಒಣಚರ್ಮ, ಚರ್ಮ ಸಡಿಲವಾಗುವುದು ಮೊದಲಾದ ಲಕ್ಷಣಗಳನ್ನು ತಡೆಗಟ್ಟಿ ಮೊಗದ ಚರ್ಮಕ್ಕೆ ಉತ್ತಮ “ಟೋನರ್‌’ ಆಗಿ ಕಾರ್ಯವೆಸಗುತ್ತದೆ.

ವಿಧಾನ: ದ್ರಾಕ್ಷಿಯ ತಿರುಳು 5 ಚಮಚ, ಮೊಟ್ಟೆಯ ಬಿಳಿ ಭಾಗ 5 ಚಮಚ. ಇವೆರಡನ್ನೂ ಚೆನ್ನಾಗಿ ಮಸೆದು ಪೇಸ್ಟ್‌ ತಯಾರಿಸಬೇಕು. ಇದಕ್ಕೆ 4 ಚಮಚ ನೆಲ್ಲಿಕಾಯಿರಸ ಅಥವಾ ನಿಂಬೆರಸ ಬೆರಸಬೇಕು. ಇದನ್ನು ಮುಖದ ಚರ್ಮಕ್ಕೆ ಮೃದುವಾಗಿ ಮಾಲೀಶು ಮಾಡುತ್ತಾ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು.

Advertisement

ಇದನ್ನು ವಾರಕ್ಕೆ ಎರಡು ಬಾರಿ ಬಳಸಿದರೆ, ಪರಿಣಾಮಕಾರಿ. ಇದೇ ರೀತಿ ಲೇಪಿಸುವಾಗ ಕುತ್ತಿಗೆ ಕೈಕಾಲುಗಳಿಗೂ ಲೇಪಿಸಿದರೆ ಉತ್ತಮ ಪರಿಣಾಮ ಉಂಟಾಗುತ್ತದೆ.

ಕಾಂತಿವರ್ಧಕ ದ್ರಾಕ್ಷಿ ಲೇಪ
ದ್ರಾಕ್ಷಿಯಲ್ಲಿ ಮೊಗದ ಕಾಂತಿಯನ್ನು ವರ್ಧಿಸುವ ಗುಣವಿದ್ದು , ಇದನ್ನು ಕಿತ್ತಾಳೆಯ ಸಿಪ್ಪೆಯ ಪುಡಿಯೊಂದಿಗೆ ಬಳಸಿದಾಗ ಹಿತಕಾರಿ.

ಆರೇಂಜ್‌ಪೀಲ್‌ ಹುಡಿ ಅಥವಾ ನೆರಳಲ್ಲಿ ಒಣಗಿಸಿ ಹುಡಿ ಮಾಡಿದ ಕಿತ್ತಾಳೆಯ ಸಿಪ್ಪೆಯ  ಪುಡಿ 1 ಚಮಚಕ್ಕೆ, 5 ಚಮಚ ದ್ರಾಕ್ಷಿಯ ರಸವನ್ನು ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ ಮಾಸ್ಕ್ ಮಾಡಬೇಕು. 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ತದನಂತರ ಮಂಜುಗಡ್ಡೆಯ ಸಣ್ಣ ಬಿಲ್ಲೆಗಳನ್ನು ಮುಖದ ಮೇಲಿರಿಸಿ ಮೃದುವಾಗಿ ಮಾಲೀಶು ಮಾಡಿ ತೊಳೆಯಬೇಕು.

ಇದರಿಂದ ಚರ್ಮದ ಕಾಂತಿ ವರ್ಧಿಸುತ್ತದೆ. ಜೊತೆಗೆ ಚರ್ಮ ಮೃದುವಾಗುತ್ತದೆ.

ಗುಲಾಬಿ ವರ್ಣದ ಅಧರಗಳಿಗಾಗಿ
ಒಣದ್ರಾಕ್ಷೆಯನ್ನು (6) ರಾತ್ರಿ ತೊಳೆದು ನೀರಿನಲ್ಲಿ ನೆನೆಸಿಡಬೇಕು. ಮರುದಿನ ಅರೆದು ಪೇಸ್ಟ್‌ ತಯಾರಿಸಿ ಅದಕ್ಕೆ 2 ಚಮಚ ಬೀಟ್‌ರೂಟ್‌ನ ರಸ ಬೆರೆಸಬೇಕು.

ಇದನ್ನು ಚೆನ್ನಾಗಿ ಬೆರೆಸಿ ತುಟಿಗಳಿಗೆ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ತೊಳೆಯಬೇಕು. ತುಟಿಗಳ ಬಣ್ಣ ಹಾಗೂ ಕಾಂತಿ ವರ್ಧಿಸುತ್ತದೆ.

ಮೊಗದ ಕಾಂತಿ, ಅಂದ ವರ್ಧಿಸುವ ದ್ರಾಕ್ಷಿಯ ಫೇಶಿಯಲ್‌ 
ಮನೆಯಲ್ಲಿಯೇ ದ್ರಾಕ್ಷಿ ಹಾಗೂ ಬಾದಾಮಿ ಬಳಸಿ ಫೇಶಿಯಲ್‌ ಮಾಡಬಹುದು.15 ಒಣದ್ರಾಕ್ಷಿ , 8 ಬಾದಾಮಿಗಳನ್ನು ತೊಳೆದು ನೀರಲ್ಲಿ ನೆನೆಸಿಡಬೇಕು. ತದನಂತರ ಇದನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಇದನ್ನು ಪುಟ್ಟ ಬ್ರಶ್‌ನಿಂದ ಅಥವಾ ತುದಿ ಬೆರಳುಗಳಿಂದ ಮಾಲೀಶು ಮಾಡುತ್ತಾ (ವರ್ತುಲಾಕಾರದಲ್ಲಿ) ಇಡೀ ಮೊಗಕ್ಕೆ ಲೇಪಿಸಬೇಕು.

ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಬೇಕು. ಈ ಎಲ್ಲಾ ಬಾಹ್ಯ ಲೇಪ ಬಳಸುವ ಸಮಯದಲ್ಲಿ ಅಭ್ಯಂತರವಾಗಿ ದ್ರಾಕ್ಷಿಯ ಜ್ಯೂಸ್‌/ಪೇಯ ಅಥವಾ ಪಾನೀಯಗಳನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಬೆಳಿಗ್ಗೆ ಬಳಸಿದರೆ ಪಿತ್ತದೋಷ ನಿವಾರಣೆಯೂ ಉಂಟಾಗಿ ಸೌಂದರ್ಯ ವರ್ಧನೆ ಶೀಘ್ರವಾಗಿ ಉಂಟಾಗುತ್ತದೆ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next