Advertisement

ಗ್ರಾಪಂಗಳು ರಾಜ್ಯಕ್ಕೆ ಮಾದರಿಯಾಗಲಿ: ಲತಾ

07:17 AM Jun 09, 2019 | Lakshmi GovindaRaj |

ಚಾಮರಾಜನಗರ: ಜಿಲ್ಲೆಯ ಗ್ರಾಪಂಗಳು ರಾಜ್ಯಕ್ಕೆ ಮಾದರಿಯಾಗಲು ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರ ಶ್ರಮ ಅತ್ಯವಶ್ಯಕ ಎಂದು ಜಿಪಂ ಸಿಇಒ ಕೆ.ಎಸ್‌.ಲತಾ ಕುಮಾರಿ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ, ಜಿಪಂ ವತಿಯಿಂದ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪಂಚಾಯ್ತಿ ಅಧ್ಯಕ್ಷರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ಸಹಭಾಗಿತ್ವ ಮುಖ್ಯ: ಗ್ರಾಮಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಗ್ರಾಪಂ ಅಧ್ಯಕ್ಷರ ಮತ್ತು ಸದಸ್ಯರ ಸಹಭಾಗಿತ್ವ ಮುಖ್ಯ. ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಯೋಜನೆಗಳ ಮಾಹಿತಿಯನ್ನು ಗ್ರಾಪಂ ಅಧ್ಯಕ್ಷರಿಗೆ ನೀಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೈಜೋಡಿಸಿ: ಗ್ರಾಮೀಣ ಸಮಸ್ಯೆಗಳನ್ನು ಪಂಚಾಯ್ತಿ ಜನ ಪ್ರತಿನಿಧಿಗಳು ಅರಿತು ಗ್ರಾಮೀಣಾಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಗ್ರಾಮಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಕರ್ತವ್ಯ ಗ್ರಾಪಂ ಅಧ್ಯಕ್ಷರಿಗೆ ಇರುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಶೇ.52ರಷ್ಟು ಅರಣ್ಯದಿಂದ ಕೂಡಿದೆ. ಉಳಿದ ಭೂ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಸಾಕ್ಷರತೆ ಪ್ರಮಾಣವೂ ಶೇ.61 ರಷ್ಟಿದೆ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮೊದಲ ಹಂತದಲ್ಲಿ ಯೋಜನೆಗಳಿಂದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ನೀರನ್ನು ಮಿತವಾಗಿ ಬಳಸಿ: ಜಲಸಾಕ್ಷರತೆ, ನೀರಿನ ಪ್ರಜ್ಞಾವಂತ ಬಳಕೆ, ಜಲ ಮೂಲಗಳ ಪುನಶ್ಚೇತನ ಮತ್ತು ನಿರ್ಮಾಣ ಹಾಗೂ ಹಸಿರೀಕರಣ ಜಲಾಮೃತ ಯೋಜನೆ ಉದ್ದೇಶವಾಗಿದ್ದು ಜಿಲ್ಲೆಯ ಜನರು ಈ ಯೋಜನೆಯನ್ನು ಅಳವಡಿಸಿಕೊಂಡು ಮುಂದುವರಿಯಬೇಕಾಗಿದೆ. ಕುಡಿಯುವ ನೀರನ್ನು ಮಿತವಾಗಿ ಬಳಸಿ ವಿವಿಧ ಜಲ ಮೂಲಗಳನ್ನು ಉಳಿಸಬೇಕಾಗಿದೆ ಎಂದು ಸಲಹೆ ನೀಡಿದರು.

Advertisement

ರಸ್ತೆ ಅಭಿವೃದ್ಧಿ, ಕೃಷಿ ಹೊಂಡ, ಜಾಬ್‌ ಕಾರ್ಡ್‌ ಬಳಕೆ, ಅಂಗನವಾಡಿ ನಿರ್ಮಾಣ, ಶೌಚಾಲಯ, ಶಾಲಾ ಸುತ್ತುಗೋಡೆ, ಆಟದ ಮೈದಾನ, ರಾಜೀವ್‌ ಗಾಂಧಿ ಸೇವಾ ಕೇಂದ್ರ, ಬಹು ಕಮಾನ್‌ ತಡೆಗೋಡೆ, ದನದ ಕೊಟ್ಟಿಗೆ, ವಸತಿ ನಿರ್ಮಾಣ, ಬೋರ್‌ವೆಲ್‌ ಮರು ಪೂರ್ಣ ಘಟಕ, ಜಮೀನು ಅಭಿವೃದ್ಧಿ, ಆನೆ ಕಂದಕ, ಗೋಕಟ್ಟೆ ಅಭಿವೃದ್ಧಿ ಕಾಮಗಾರಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿವೆ. ಗ್ರಾಪಂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಮೈಸೂರಿನ ಎಸ್‌ಐಆರ್‌ಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಹನುಮಂತ ಜಕ್ಕಣ್ಣ ಮಾತನಾಡಿ, ಯಾವುದೇ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳ್ಳಲು ಹಾಗೂ ಕಾರ್ಯರೂಪಕ್ಕೆ ತರಲು ಸಂಬಂಧಪಟ್ಟ ಯೋಜನೆಗಳ ಮಾಹಿತಿ ಮುಖ್ಯ. ಈ ಕುರಿತು ಮೊದಲು ಗ್ರಾಪಂ ಜನಪ್ರತಿನಿಧಿಗಳು ಯೋಜನೆಗಳ ಸಂಪೂರ್ಣ ಮಾಹಿತಿ ತಿಳಿಯಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಜಿಪಂ ಉಪ ಕಾರ್ಯದರ್ಶಿ ಹನುಮನರಸಯ್ಯ, ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ ಪಾಂಡೆ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು, ಜೀತ ಪದ್ಧತಿ ಹಾಗೂ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಪಂಚಾಯ್ತಿ ಮಟ್ಟದಲ್ಲಿ ಬಾಲ್ಯ ವಿವಾಹದ ವಿರುದ್ಧ ಆಂದೋಲನ ನಡೆಸಬೇಕು. ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶ.
-ಲತಾ ಕುಮಾರಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next