Advertisement

ಪೂರಕ ನಾಲೆಗೆ ಅನುದಾನ ಬಿಡುಗಡೆ ಆಗಿಲ್ಲ

01:20 PM Jul 25, 2017 | |

ಚಿತ್ರದುರ್ಗ: ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸ್ಪಷ್ಟಪಡಿಸಿದರು.

Advertisement

ಫಿಡರ್‌ ಚಾನಲ್‌, ತಾಲೂಕು ಕೇಂದ್ರ ಹಾಗೂ ಧರ್ಮಪುರ ಹೋಬಳಿಯ ಹಳ್ಳಿಗಳಿಗೆ ತುಂಗಭದ್ರಾ ಹಿನ್ನೀರು ಯೋಜನೆ ಅಡಿ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಸೋಮವಾರ ಧರ್ಮಪುರದಲ್ಲಿ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ರೈತ ಮುಖಂಡರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಮಾಡಲು 70 ಕೋಟಿ ರೂ. ಬಿಡುಗಡೆಯಾಗಿರುವ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಆದರೆ ಸರ್ಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.

ಹೋರಾಟಗಾರರ ಮನವಿಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಫಸಲ್‌ ಬಿಮಾ ವಿಮೆ ಬಿಡುಗಡೆ ಸೇರಿದಂತೆ ಮತ್ತಿತರ ಸ್ಥಳೀಯ ಮಟ್ಟದಲ್ಲಿ ನಿವಾರಣೆ ಆಗಲಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ನ್ಯಾಯವಾದಿ ಶಿವು ಯಾದವ್‌ ಮಾತನಾಡಿ, ಹಿರಿಯೂರು ಕ್ಷೇತ್ರದ ಶಾಸಕ ಡಿ. ಸುಧಾಕರ್‌ ಅವರು 70 ಕೋಟಿ ರೂ.
ಬಿಡುಗಡೆಯಾಗಲಿದ್ದು, ಶೀಘ್ರ ಪೂರಕ ಕಾಲುವೆ ನಿರ್ಮಾಣವಾಗಲಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಹಣ ಬಿಡುಗಡೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಬರೀ ಸುಳ್ಳು ಭರವಸೆಗಳ ಮೂಲಕ ಕ್ಷೇತ್ರದ ಜನರನ್ನು ವಂಚಿಸಲಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡುವ ಬದಲು ಯೋಜನೆಗೆ ಇರುವ ಅಡ್ಡಿ ಆತಂಕ ದೂರ ಮಾಡಿ ಕೆರೆಗೆ ನೀರು ತರಲು, ತಾಲೂಕು ಕೇಂದ್ರ ಘೋಷಣೆ ಮಾಡಲು ಮತ್ತು ತುಂಗಾ ಭದ್ರಾ ಹಿನ್ನೀರು ಯೋಜನೆ ಅಡಿ ಕುಡಿಯುವ ನೀರು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಾಕೀತು ಮಾಡಿದರು. ಹರಿಯಬ್ಬೆಯ ಕೆ. ಬಸವಾನಂದ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದಲೇ ಹೋಬಳಿಯಲ್ಲಿ ಒಂದೊಂದು ಗ್ರಾಮದ ರೈತರು ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಹೋರಾಟ ನಡೆಸಲಿದ್ದಾರೆ. ಆಯಾ ಗ್ರಾಮಗಳ ಸರತಿ ಹೋರಾಟ ಇದ್ದಾಗ ಮನೆಗೊಬ್ಬರಂತೆ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next