ಬೆಂಗಳೂರು: ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ನಗರ ಮತ್ತು ಪಂಚಾಯತ್‌ರಾಜ್ ಸ್ಥಳೀಯ ಸಂಸ್ಥೆಗಳಿಗೆ
ರಾಜ್ಯ ಸರ್ಕಾರದಿಂದ ನೀಡುವ ಅನುದಾನವನ್ನು ಶೇ. 40ರಿಂದ ಶೇ. 48ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ
ನೀಡಿದೆ.
ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ನೀಡುವ ಅನುದಾನವನ್ನು ಶೇ. 42ರಿಂದ 48ಕ್ಕೆ ಹೆಚ್ಚಿಸಬೇಕು ಎಂಬ ನಾಲ್ಕನೇ ಹಣಕಾಸು ಆಯೋಗದ ಶಿಫಾರಸಿನಂತೆ ಗುರುವಾರ ಮುಖ್ಯಮಂತ್ರಿ
ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಕೃಷ್ಣಬೈರೇಗೌಡ, ನಗರ ಮತ್ತು ಪಂಚಾಯತ್‌ರಾಜ್ ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಕೆಲಸಗಳು, ಯೋಜನೆಗಳ ಜಾರಿ ಮುಂತಾದ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಶೇ. 42ರಷ್ಟು ಅನುದಾನ ನೀಡುತ್ತಿತ್ತು. ಅದನ್ನು ಶೇ. 42ರಿಂದ ಶೇ. 48ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ನಾಲ್ಕನೇ ಹಣಕಾಸು ಆಯೋಗ ನೀಡಿರುವ ಇತರೆ ಹಲವು ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಬಗ್ಗೆಯೂ ಸಂಪುಟ ಸಭೆ ನಿರ್ಧರಿಸಿದೆ ಎಂದು ಹೇಳಿದರು.