Advertisement

ಮಾರ್ಚ್‌ ಅಂತ್ಯಕ್ಕೆ ಅನುದಾನ ಬಿಡುಗಡೆ

09:05 PM Feb 23, 2020 | Lakshmi GovindaRaj |

ಗೌರಿಬಿದನೂರು: ಬ್ರಾಹ್ಮಣ ಜನಾಂಗದ ಆರ್ಥಿಕ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಾಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ರಾಜ್ಯದ್ಯಂತ ಪ್ರವಾಸ ಮಾಡಿದ್ದು, ಮಾರ್ಚ್‌ 31ರೊಳಗೆ ವಿವಿಧ ಯೋಜನೆ ಜಾರಿಗೆ ತಂದು ಹಣ ಬಿಡುಗಡೆ ಮಾಡಲಾಗುವುದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್‌.ಎಸ್‌.ಸಚ್ಚಿದಾನಂದ ಮೂರ್ತಿ ತಿಳಿಸಿದರು.

Advertisement

ತಾಲೂಕಿನ ವಿಧುರಾಶ್ವತದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ವಿಪ್ರ ಜನಾಂಗದ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಕಾರದಿಂದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾದ ನಂತರ ರಾಜ್ಯದ್ಯಂತ ಸಂಚರಿಸಿ ಬ್ರಾಹ್ಮಣ ಸಮುದಾಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದೇನೆ.

100 ಕೋಟಿ ಅನುದಾನಕ್ಕೆ ಮನವಿ: ಬಹುತೇಕ ಎಲ್ಲರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇದಕ್ಕೆ ತ್ರಿಮತಸ್ಥ ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲದಿರುವುದೇ ಪ್ರಮುಖ ಕಾರಣವಾಗಿದ್ದು ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ, ಮಹಿಳೆಯರ ಸ್ವಉದ್ಯೋಗಕ್ಕೆ ಹಾಗೂ ವೃದ್ಧಾಶ್ರಮಗಳಿಗೆ ಮೊದಲ ಹಂತದಲ್ಲಿ ಆರ್ಥಿಕ ಸಹಾಯ ಮಾಡುವಂತಹ ಯೋಜನೆ ರೂಪಿಸಲಾಗಿದ್ದು, ಮಾರ್ಚ್‌ ಅಂತ್ಯದೊಳಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸರ್ಕಾರ ನಮ್ಮ ನಿಗಮಕ್ಕೆ ಮೊದಲ ಹಂತವಾಗಿ 25 ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ಆಯವ್ಯಯದಲ್ಲಿ 100 ಕೋಟಿ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಲಾಗುವುದು. ಅವಿವಾಹಿತರಾಗಿರುವ ಪುರೋಹಿತರಿಗೆ ವಿವಾಹವಾಗುತ್ತಿಲ್ಲ. ಇಂತಹವನ್ನು ಮದುವೆಯಾಗುವ ವಧುವಿಗೆ 4 ಲಕ್ಷ ಹಣ ನೀಡಲಾಗುವುದು ಎಂದರು.

ಫ‌ಂಡ್‌ ಸಂಗ್ರಹ: ಬ್ರಾಹ್ಮಣರಲ್ಲಿ ಉದ್ಯೋಗಸ್ಥರಾಗಿ ಅನುಕೂಲವಾಗಿರುವವರು ತಮ್ಮ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಬರುತ್ತಿದೆ. ಬ್ರಾಹ್ಮಣತ್ವದ ಮೌಲ್ಯಗಳನ್ನು ಉಳಿಸುವುದರ ಜೊತೆಗೆ ನಮ್ಮ ಸಂಸ್ಕಾರ ಸಂಪ್ರದಾಯಗಳನ್ನು ಮೊದಲು ಮಕ್ಕಳಿಗೆ ಕಲಿಸಬೇಕು ಎಂದರು. ನಮ್ಮ ಜನಾಂಗದ ಸಾಫ್ಟ್ವೇರ್‌ ಕಂಪನಿಗಳ ಮಾಲೀಕರಿಂದ ಫ‌ಂಡ್‌ ಸಂಗ್ರಹಿಸಿ ಆ ಹಣದಿಂದ ಬ್ರಾಹ್ಮಣ ಜನಾಂಗದ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

Advertisement

ಧ್ಯಾನ ಮಂದಿರದ ನಿರ್ಮಾಣಕ್ಕೆ 50 ಲಕ್ಷ ರೂ.: ವಿಧುರಾಶ್ವತ್ಥ ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಡಿ.ವಿ.ರಾಜೇಂದ್ರ ಪ್ರಸಾದ್‌ ಮಾತನಾಡಿ, ಹಲವು ವರ್ಷಗಳಿಂದ ಪೂಜಾ ಕೈಂಕರ್ಯ ನಡೆಸುತ್ತಾ ಬಂದಿರುವ ಬ್ರಹ್ಮಚೈತನ್ಯ ಮಂದಿರವು ಶಿಥಿಲವಾಗಿದ್ದು, ಹಳೆಯ ಕಟ್ಟಡದಲ್ಲಿ ಕಾರ್ಯಕ್ರಮ ನೆರವೇರಿಸುತ್ತಿದ್ದೇವೆ. ಈ ಮಂದಿರದಲ್ಲಿ ಬ್ರಹ್ಮಚೈತನ್ಯರ ಪಾದುಕೆಗಳು ಸಹಾ ಇದೆ.

ಧ್ಯಾನ, ಆರಾಧನೆ, ಭಜನೆ ನಡೆಸಲು ಧ್ಯಾನ ಮಂದಿರದ ಅಗತ್ಯತೆ ಇದೆ. ಆ ಧ್ಯಾನ ಮಂದಿರದ ನಿರ್ಮಾಣಕ್ಕೆ 50 ಲಕ್ಷ ರೂ. ಆಗಬಹುದು. ಇದಕ್ಕೆ ಮಂಡಳಿಯಿಂದ ಗರಿಷ್ಠ ಮಟ್ಟದ ಅನುದಾನ ಮಂಜೂರು ಮಾಡಬೇಕು. ಇದರಿಂದ ಈ ಕ್ಷೇತ್ರಕ್ಕೆ ಬರುವ ವಿಪ್ರ ಸಮುದಾಯದವರಿಗೆ ಎಲ್ಲಾ ರೀತಿಯಿಂದಲೂ ಸಹಾ ಅನುಕೂಲವಾಗುತ್ತದೆ ಎಂದರು. ವೈಧಿಕ ಭವನದ ಕಟ್ಟಡದ ನಿರ್ಮಾಣಕ್ಕೂ ಆರ್ಥಿಕ ಸಹಾಯ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ನಾಗಭೂಷಣರಾವ್‌ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್‌, ರಮೇಶ್‌, ಮಾಜಿ ಶಾಸಕಿ ಜ್ಯೋತಿರೆಡ್ಡಿ, ರವಿನಾರಾಯಣರೆಡ್ಡಿ, ಶೋಭಾ, ಚೈತ್ರಮದಕರಿ, ರಮೇಶ್‌ರಾವ್‌ಶೇಳ್ಕೆ, ಬಿ.ವಿ.ಗೋಪಿನಾಥ್‌, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್‌.ವಿ.ಅಶ್ವತ್ಥನಾರಾಯಣರಾವ್‌, ಕೆ.ವಿ.ಕೃಷ್ಣಮೂರ್ತಿ, ತ್ರಿವಿಕ್ರಮರಾವ್‌, ಸುಬ್ಬರಾವ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆ.ವರಾಹಮೂರ್ತಿ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು.

ಗೌರಿಬಿದನೂರು ತಾಲೂಕು ಸುಮಾರು 2 ದಶಕಗಳಿಂದಲೂ ಬರಪೀಡಿತ ಪ್ರದೇಶವಾಗಿದ್ದು, ವಿಪ್ರ ಸಮುದಾಯದವರು ತಮ್ಮ ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು, ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಒಂದು ಕುಟುಂಬಕ್ಕೆ ಒಂದು ಹಸು ಕೊಡಿಸಿದರೆ ಹೈನುಗಾರಿಕೆಯಿಂದ ಆರ್ಥಿಕ ಸಂಕಷ್ಟ ನಿರ್ಮೂಲನೆ ಸಾಧ್ಯ.
-ಡಿ.ವಿ.ರಾಜೇಂದ್ರ ಪ್ರಸಾದ್‌, ವಿಧುರಾಶ್ವತ್ಥ ಬ್ರಾಹ್ಮಣ ಸಂಘದ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next