Advertisement

ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳಿಗೆ ಅನುದಾನ ತಾರತಮ್ಯ

10:25 AM Apr 08, 2022 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯರು ಗೆದ್ದಿರುವ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ. ಜೊತೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಪಾಲಿಕೆಯಲ್ಲಿ ಆಡಳಿತ ಇಲ್ಲ. ಏಳು ತಿಂಗಳ ಹಿಂದೆ ಚುನಾವಣೆ ನಡೆಸಿದರೂ ಇದುವರೆಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಧಿಕಾರ ನೀಡದೇ ಸತಾಯಿಸುತ್ತಿದ್ದಾರೆ. ಅದರ ಜೊತೆಯಲ್ಲಿ ಕಾಂಗ್ರೆಸ್‌ ಗೆದ್ದಿರುವ ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ್‌ 59ರ ವಿವಿಧ ಕಾಮಗಾರಿಗಳು ಹಾಗೂ ಅಲ್ಲಿನ ಅವ್ಯವಸ್ಥೆ ಕುರಿತು ಒಂದು ದಿನ ಪಾಲಿಕೆ ಮುಂಭಾಗದಲ್ಲಿ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಪಾಲಿಕೆ ಆಯುಕ್ತರು ವಾರ್ಡ್‌ 59ರಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳಿಗೆ ಮುಂದಾಗಿದ್ದಾರೆ. ಇದೇ ರೀತಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಸದಸ್ಯರಿರುವ ವಾರ್ಡ್‌ಗಳಲ್ಲಿ ಸಮಸ್ಯೆಗಳು ಮುಂದುವರಿದಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಪ್ರತಿ 15 ದಿನಕ್ಕೊಮ್ಮೆ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ, ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯ ಸಂದಿಲ್‌ಕುಮಾರ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಹಲವಾರು ಸಮಸ್ಯೆಗಳಿವೆ. ಬೆಳಗ್ಗೆ 5:30ರಿಂದ ವಾರ್ಡ್‌ಗಳಲ್ಲಿ ಸಂಚರಿಸಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ನಿಮಗೆ ಅಧಿಕಾರವೇ ಇಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದೇ ರೀತಿ ವಾರ್ಡ್‌ 53, 55, 59 ಸೇರಿದಂತೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ವಾರ್ಡ್‌ಗಳಲ್ಲಿ ಸಮಸ್ಯೆಗಳು ಮುಂದುವರಿದಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಆರಿಫ್‌ ಭದ್ರಾಪುರ, ಸುವರ್ಣಾ ಕಲ್ಲಕುಂಟ್ಲ, ಶ್ರುತಿ ಚಲವಾದಿ ಇದ್ದರು.

Advertisement

ಏಳು ತಿಂಗಳಿಂದ ಅಧಿಕಾರವಿಲ್ಲದೇ ಇರುವುದು, ಮಹಾಪೌರ-ಉಪಮಹಾಪೌರ ಆಯ್ಕೆ ಮಾಡದೇ ಕಾಲಹರಣ ಮಾಡುತ್ತಿರುವುದರ ಸಾಧಕ-ಬಾಧಕ ತಿಳಿದುಕೊಂಡು ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸಲಾಗುವುದು. ಕಳೆದ ಹಲವು ತಿಂಗಳಿಂದ ಉದ್ಘಾಟನೆಗೆ ಕಾಯುತ್ತಿರುವ ಬೆಂಗೇರಿ ಮಾರುಕಟ್ಟೆ ಕೂಡಲೇ ಉದ್ಘಾಟನೆ ಮಾಡಬೇಕು. ಇಲ್ಲದಿದ್ದಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು.  -ರಜತ್‌ ಉಳ್ಳಾಗಡ್ಡಿಮಠ, ಅಧ್ಯಕ್ಷ, ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌

ಹುಬ್ಬಳ್ಳಿ: ಇಲ್ಲಿನ 59ನೇ ವಾರ್ಡ್‌ನ ಅಭಿವೃದ್ಧಿಗೆ ನಿರ್ಲಕ್ಷé ತೋರಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಅವರ ಭೇಟಿ ನೀಡಿ ಪರಿಶೀಲಿಸಿದರು.

ವಾರ್ಡ್‌ನ ಅಭಿವೃದ್ಧಿ ವಿಚಾರದಲ್ಲಿ ಪಾಲಿಕೆ ಹಾಗೂ ಶಾಸಕರು ನಿರ್ಲಕ್ಷé ತೋರಿದ್ದಾರೆ ಎಂದು ಸದಸ್ಯೆ ಸುವರ್ಣ ಕಲಕುಂಟ್ಲಾ ಹಾಗೂ ಕಾಂಗ್ರೆಸ್‌ ಮುಖಂಡ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಹೀಗಾಗಿ ಪಾಲಿಕೆ ಆಯುಕ್ತರು ವಾರ್ಡಿನ ಪ್ರಮುಖ ಪ್ರದೇಶಗಳಾದ ಶಿವಗಂಗಾ ಲೇಔಟ್‌ ನವೀನ ಲೇಔಟ್‌, ಚೇತನಾ ಕಾಲೊನಿ ಹಾಗೂ ಸಾಗರ ಕಾಲೋನಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ವಿದ್ಯುತ್‌ ದೀಪ, ಉದ್ಯಾನಗಳಲ್ಲಿ ಅನೈತಿಕ ಚಟುವಟಿಕೆಗಳು, ಪಾದಚಾರಿ ಮಾರ್ಗ ಅತಿಕ್ರಮಣವಾಗಿದ್ದು, ತೆರವುಗೊಳಿಸುವಂತೆ ಮನವಿ ಮಾಡಿದರು.

ಜನರ ಸಮಸ್ಯೆ ಆಲಿಸುತ್ತಿದ್ದ ಸಂದರ್ಭದಲ್ಲಿ ಉದ್ಯಾನದಲ್ಲಿ ಬೆಳೆದ ಕಸ, ಗಿಡ ಗಂಟಿಗಳನ್ನು ಪಾಲಿಕೆ ಸಿಬ್ಬಂದಿ ಟ್ರ್ಯಾಕ್ಟರ್‌ ತುಂಬುತ್ತಿದ್ದರು. ಇದನ್ನು ಗಮನಿಸಿದ ಜನರು, ನೀವು ಈ ಪ್ರದೇಶಕ್ಕೆ ಬರುತ್ತಿದ್ದೀರಿ ಎನ್ನುವ ಕಾರಣಕ್ಕೆ ಇಂದು ಸ್ವತ್ಛ ಮಾಡುತ್ತಿದ್ದಾರೆ ಎಂದು ದೂರಿದರು. 3 ದಶಕಗಳಿಂದ ಶಿವಗಂಗಾ ಲೇಔಟ್‌ನಲ್ಲಿ ವಾಸಿಸುತ್ತಿದ್ದರೂ ಅಗತ್ಯ ಒಳಚರಂಡಿ ವ್ಯವಸ್ಥೆಯಿಲ್ಲ. ಮಳೆಯಿಂದಾಗಿ ರಸ್ತೆ ಹದಗೆಟ್ಟು ಓಡಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವಿಧ ಸಮಸ್ಯೆಗಳನ್ನು ಆಯುಕ್ತರ ಮುಂದಿಟ್ಟರು. ಯಾವುದೇ ಸಮಸ್ಯೆಗಳಿದ್ದರು ನೇರವಾಗಿ ಕರೆ ಮಾಡಲು ಆಯುಕ್ತರು ಜನರಿಗೆ ತಿಳಿಸಿದರು.

ಎಸ್‌.ಸಿ. ಬೇವೂರ, ಸುವರ್ಣಾ ಕಲ್ಲಕುಂಟ್ಲಾ, ರಜತ್‌ ಉಳ್ಳಾಗಡ್ಡಿಮಠ, ವಿಶಾಲ ಧರ್ಮದಾಸ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next