ಬೆಂಗಳೂರು: ಸಿಲ್ಕ್ಬೋರ್ಡ್ ಮಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ರಾಗಿಗುಡ್ಡ ಜಂಕ್ಷನ್‌ನಿಂದ ಸಿಲ್ಕ್ಬೋರ್ಡ್‌ವರೆಗೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌ಗೆ ಹಣಕಾಸು ನೆರವು ನೀಡಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ.
ಶುಕ್ರವಾರ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ನೇತೃತ್ವದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ಮೇಲ್ಸೇತುವೆ ನಿರ್ಮಾಣಕ್ಕಾಗಿ ಬಿಬಿಎಂಪಿಯಿಂದ ಬಿಎಂಆರ್‌ಸಿಎಲ್‌ಗೆ 100 ಕೋಟಿ ರೂ. ನೀಡಲು ಒಪ್ಪಿಗೆ ದೊರೆತಿದೆ.
ಬಿಎಂಆರ್‌ಸಿಎಲ್ ವತಿಯಿಂದ ಆರ್.ವಿ.ರಸ್ತೆಯಿಂದ ಸಿಲ್ಕ್ಬೋರ್ಡ್‌ರವರೆಗಿನ 19 ಕಿಲೋ ಮೀಟರ್ ಉದ್ದದ ಮೆಟ್ರೋ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು, ಅದರೊಡನೆ ರಾಗಿಗುಡ್ಡದಿಂದ ಸಿಲ್ಕ್ಬೋರ್ಡ್‌ವರೆಗೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮೇಟ್ರೋ ಕಾಮಗಾರಿಯೊಂದಿಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
2016-17ನೇ ಸಾಲಿನಲ್ಲಿ ಸರ್ಕಾರ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸುವುದಾಗಿ ಘೋಷಿಸಿತ್ತು. ನಾಲ್ಕು ಪಥದ 4 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಯೋಜನೆ ಇದಾಗಿದ್ದು, ಕಾಮಗಾರಿಗೆ ಒಟ್ಟು 330 ಕೋಟಿ ರೂ. ವೆಚ್ಚವಾಗಲಿದೆ. ಇದರೊಂದಿಗೆ ಮೇಟ್ರೋ ಮೇಲ್ಸೇತುವೆಗೆ 470 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಪಾಲಿಕೆಯಿಂದ 100 ಕೋಟಿ ರೂ. ನೀಡುವಂತೆ ಸಚಿವ ಸೂಚನೆಯ ಮೇರೆಗೆ ಪಾಲಿಕೆಯ ಅಧಿಕಾರಿಗಳು ಹಣಕಾಸು ನೆರವು ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.
ಜಯನಗರ ಈಸ್ಟ್ ಎಂಡ್ ಜಂಕ್ಷನ್‌ನಲ್ಲಿ ಸದ್ಯ ಒಂದು ಮೇಲ್ಸೇತುವೆಯಿದ್ದು, ರಾಗಿಗುಡ್ಡ ಜಂಕ್ಷನ್‌ನಿಂದ ಸಿಲ್ಕ್ಬೋರ್ಡ್ ವರೆಗೆ ಮೇಲ್ಸೇತುವೆ ನಿರ್ಮಿಸುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸುಗಮವಾಗಲಿದೆ. ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಉಪಸ್ಥಿತರಿದ್ದರು.