ಚಿಕ್ಕಮಗಳೂರು: ಶಿಥಿಲಗೊಂಡಿರುವ ಶಾಲಾ ಕಟ್ಟಡ ಪುನರ್ ನಿರ್ಮಾಣಕ್ಕೆ ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ. ಈಗಾಗಲೇ 8,500 ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರಕಾರ ಈಗಾಗಲೇ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸರಕಾರದ ಕಾರ್ಯಕ್ರಮಗಳಿಗೂ ಅನುದಾನವಿದೆ. ಶಾಲೆಗಳ ಕಟ್ಟಡ ನಿರ್ಮಾಣಕ್ಕೂ ಅನುದಾನವಿದೆ. ವಿಪಕ್ಷದವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಮುಖ್ಯಮಂತ್ರಿಗಳು ಮತ್ತು ಉಸ್ತುವಾರಿ ಸಚಿವರು ನಡೆಸುತ್ತಿರುವುದು ಜನತಾ ದರ್ಶನವಲ್ಲ ಬೋಗಸ್ ದರ್ಶನ ಎಂಬ ಆರ್.ಅಶೋಕ್ ಹೇಳಿಕೆ ಸರಿಯಲ್ಲ. ಹಿಂದುತ್ವ ಹಾಗೂ ಭಾವನಾತ್ಮಕ ಅಂಶಗಳನ್ನು ಕೆರಳಿಸುವುದನ್ನು ಮಾಡಿದ್ದರಿಂದ ಜನರು ಬಿಜೆಪಿಯನ್ನು ಮನೆಗೆ ಕಳಿಸಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿ ಕಾರಿಗಳು ಗ್ರಾಮಗಳಿಗೆ ತೆರಳಿ ಜನತಾ ದರ್ಶನ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಸರಕಾರದ ಧ್ಯೇಯವಾಗಿದೆ ಎಂದರು.
ಸಚಿವ ಮಧು ಹೆಸರಲ್ಲಿ ನಕಲಿ ಫೇಸ್‌ಬುಕ್ ಗ್ರೂಪ್: ದೂರು
ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಗ್ರೂಪ್ ರಚಿಸಿ ಅದರಲ್ಲಿ ಸಚಿವರ ಹಾಗೂ ಕಾಂಗ್ರೆಸ್ ವಿರುದ್ಧವಾದ ಫೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್ ದೂರು ನೀಡಿದ್ದಾರೆ. ನ.27ರಂದು ನಕಲಿ ಐಡಿ ಪ್ರಕರಣ ಬೆಳಕಿಗೆ ಬಂದಿದೆ. ಸಚಿವರ ಹೆಸರಿನಲ್ಲಿ “ಶ್ರೀ ಮಾನ್ಯ ಮಧು ಬಂಗಾರಪ್ಪಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ ಎಂಬ ಹೆಸರಿನ ನಕಲಿ ಫೇಸ್‌ಬುಕ್ ಗ್ರೂಪ್ ಸೃಷ್ಟಿಸಲಾಗಿದ್ದು, ಡಿಪಿಯಲ್ಲಿ ಮಧು ಬಂಗಾರಪ್ಪ ಫೋಟೋ ಹಾಕಲಾಗಿದೆ.
ಇದರಲ್ಲಿ 58 ಸಾವಿರ ಫಾಲೋವರ್ಸ್ ಇದ್ದಾರೆ. ಅಲ್ಲದೆ ಈ ಫೇಸ್‌ಬುಕ್ ಗ್ರೂಪ್‌ನಲ್ಲಿ “ಕುಂದಾಪುರ ವಿರಾಟ್’ ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರು ಅಚ್ಛೇ ದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದ ಪೋಸ್ಟ್‌ವೊಂದನ್ನು ಹಾಕಿ ಸಚಿವರಿಗೆ ಕೆಟ್ಟ ಹೆಸರು ತರಲು ಕುತಂತ್ರ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಐಟಿ ಆಕ್ಟ್ ಅಡಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.