ಸಿಂಧನೂರು: ದಲಿತರು, ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ ನೀಡಿದ್ದ ಅನುದಾನ ಹೆಚ್ಚು. ಬಿಜೆಪಿ ಸರಕಾರ ಇದ್ದ ಅನುದಾನವನ್ನೇ ಕಡಿತ ಮಾಡಿದ್ದು, ಈ ಬಗ್ಗೆ ಸಚಿವ ಬಿ.ಶ್ರೀರಾಮುಲು ಅವರೇ ಉತ್ತರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆಗ್ರಹಿಸಿದರು.
ನಗರದ ಕಾಕತೀಯ ಕ್ಲಬ್‌ನಲ್ಲಿ ಬುಧವಾರ ಮಾದಿಗರು ಹಾಗೂ ಛಲವಾದಿ ಸಮುದಾಯದ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶೇಷ ಘಟಕ ಯೋಜನೆ ಜಾರಿಗೊಳಿಸಿ ವಾರ್ಷಿಕ 30 ಸಾವಿರ ಅನುದಾನವನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿತ್ತು. ನರೇಗಾವನ್ನು ಜಾರಿಗೊಳಿಸಿದ್ದು, ನಮ್ಮದೇ ಸರಕಾರ.
ಕಲ್ಯಾಣ ಕರ್ನಾಟಕಕ್ಕೆ 371 ಜೆ ಸೌಲಭ್ಯವನ್ನು ಕಲ್ಪಿಸಿದ್ದರಲ್ಲೂ ಕಾಂಗ್ರೆಸ್‌ನ ಪಾತ್ರವಿದೆ. ಆದರೆ, ಈ ಬಿಜೆಪಿಯವರಿಂದ ದಲಿತರು, ಹಿಂದುಳಿದ ವರ್ಗಕ್ಕೆ ಯಾವುದೇ ಕೊಡುಗೆ ಲಭಿಸಿಲ್ಲ. ಸಿದ್ದರಾಮಯ್ಯ ಸರಕಾರದಲ್ಲಿ ಪ್ರತಿ ವರ್ಷ 30 ಸಾವಿರ ಕೋಟಿ ರೂ.ನಂತೆ ಖರ್ಚು ಮಾಡಲಾಗಿತ್ತು. ಈಗಿನ ಬಿಜೆಪಿ ಸರಕಾರ ಪರಿಶಿಷ್ಟರ ಕಲ್ಯಾಣಕ್ಕೆ 26 ಸಾವಿರ ಕೋಟಿ ರೂ. ಮೀಸಲಿಟ್ಟು, 4 ಸಾವಿರ ಕೋಟಿ ರೂ.ಗಳನ್ನು ಕಡಿತಗೊಳಿಸಿದೆ. ತಮ್ಮದೇ ಇಲಾಖೆಯಲ್ಲಿ ಅನುದಾನ ಕಡಿತವಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಯಾಕೆ ಪ್ರಶ್ನೆ ಎತ್ತಿಲ್ಲ? ಎಂಬುದಕ್ಕೆ ಅವರೇ ಉತ್ತರ ನೀಡಬೇಕು ಎಂದರು.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಮಾತನಾಡಿ, ಪರಿಶಿಷ್ಟ ವರ್ಗದ ಎಡ ಮತ್ತು ಬಲ ಸಮುದಾಯಕ್ಕೆ ಸೇರಿದ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಗೆ ಪಾಠ ಕಲಿಸಲು ನಿರ್ಧರಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿಯಲ್ಲಿ ಸಾಕಷ್ಟು ಅನುದಾನ ನೀಡಲು ಅವಕಾಶವಿದ್ದರೂ ಬಿಜೆಪಿ ಸರಕಾರ ಆ ಕೆಲಸ ಮಾಡಿಲ್ಲ. ಸಬ್ಸಿಡಿ
ಯೋಜನೆಯಲ್ಲಿ ತಾಲೂಕಿನಗೆ 1 ಲಕ್ಷ ರೂ., ಒಬ್ಬರೇ ಫಲಾನುಭವಿಗೆ ನೀಡಲು ಅನುಮತಿ ಕೊಟ್ಟಿರುವುದೇ ಈ ಸರಕಾರದ ಸಾಧನೆ. ಬಿಜೆಪಿ ಸರಕಾರ ಯಾವತ್ತೂ
ದಲಿತರಿಗಾಗಿ ಇಲ್ಲ. ನಮಗೋಸ್ಕರ ಇರುವ ಸರಕಾರ, ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ ಮಾತನಾಡಿದರು. ಮುಖಂಡರಾದ ಹನುಮಂತಪ್ಪ ಮುದ್ದಾಪುರ, ಎಚ್.ಎನ್.ಬಡಿಗೇರ್, ಶೇಖರಪ್ಪ ಗಿಣಿವಾರ, ಅಲ್ಲಮಪ್ರಭು ಪೂಜಾರ್, ಹನುಮಂತಪ್ಪ ಗೋಮರ್ಸಿ, ನರಸಪ್ಪ ಕಟ್ಟಿಮನಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ವೈ. ಅನಿಲ್ ಕುಮಾರ್ ಇದ್ದರು.