ಮುಂಬಯಿ: ಇದು ಕೋಟ್ಯಧಿಪತಿಯಾಗುವ “ಅದೃಷ್ಟದ ಹರಳು’ ಕೊಟ್ಟು, ಲಕ್ಷ ಲಕ್ಷ ಕಳೆದುಕೊಂಡ “ನತದೃಷ್ಟ ಜ್ಯೋತಿಷಿ’ಯ ಕಥೆ!
ನತದೃಷ್ಟ ಎಂದ ಕೂಡಲೇ ಪಾಪ, ಈತ ಹಣವನ್ನೇನಾದರೂ ಕಳೆದುಕೊಂಡಿರ ಬಹುದೇ ಎಂದು ಯೋಚಿಸಲೇಬೇಡಿ. ಏಕೆಂದರೆ, ಈತನೇ ಅದೃಷ್ಟದ ಹರಳಿನ ಕಥೆ ಕಟ್ಟಿ, ಗ್ರಾಹಕರ ಆಯೋಗಕ್ಕೆ ದಂಡ ಪೀಕಿದ್ದಾನಷ್ಟೇ.
ಆಗಿದ್ದಿಷ್ಟು, ಇಲ್ಲಿನ ಆಭರಣ ಅಂಗಡಿಯೊಂದು 2013ರಲ್ಲಿ 80 ವರ್ಷದ ವೃದ್ಧ “ಸ್ವರ್ಣ ಸ್ಪರ್ಷ’ದ ಜಾಹೀರಾತು ನೋಡಿ “ನೀಲಿ ಹರಳು’ ಖರೀದಿಸಿದ್ದರು. ಇದಾದ ಬಳಿಕ ಈ ಅಂಗಡಿಯ ಜೋತಿಷಿಗಳೇ ಮೊಬೈಲ್ ಸಂದೇಶ ಕಳುಹಿಸಿ, “ನೀಲಿ ಹರಳು ಸರಿಯಾಗಲ್ಲ, ವಾಪಸ್ ಬಂದು ಫುಕ್ರಜ್ ಮತ್ತು ಮಾಣಿಕ್ ಹರಳು ಖರೀದಿಸಿ’ ಎಂದು ಹೇಳಿ 2.90 ಲಕ್ಷ ರೂ. ಪಡೆದು ಆ “ಅದೃಷ್ಟದ ಹರಳು’ ಕೊಟ್ಟು ಕಳುಹಿಸಿದ್ದರು. ಒಂದು ಬಾರಿಯಲ್ಲ, ಮೂರು ಬಾರಿ ಕೋಟ್ಯಧಿಪತಿ ಆಗುತ್ತೀರಿ, ನಿಮ್ಮ ಅದೃಷ್ಟ ಖುಲಾಯಿಸಿತು ಹೋಗಿ ಎಂದು ಹೇಳಿದ್ದರಂತೆ. ಪಾಪ, ಈ ಹರಳು ಖರೀದಿಸಿದ ವ್ಯಕ್ತಿ ಒಂದು ವರ್ಷ ಕಾದರೂ ಯಾವುದೇ ಅದೃಷ್ಟ ಬರಲೇ ಇಲ್ಲ. ಹೀಗಾಗಿ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಶೇಷವೆಂ ದರೆ ಇಲ್ಲಿ ವಾದಿಸಿದ್ದ ಈ ಅಂಗಡಿ, ಆ ವೃದ್ಧ ನಿಬಂಧನೆ ಪಾಲಿಸಿರಲಿಲ್ಲ. 30 ದಿನದ ಒಳಗೆ ನೀಲಿ ಹರಳು ವಾಪಸ್ ಕೊಡು ಎಂದಿದ್ದೆವು. ಆದರೂ ಕೊಟ್ಟಿರಲಿಲ್ಲ, ಹೀಗಾಗಿಯೇ ಅದೃಷ್ಟ ಖುಲಾಯಿಸಲಿಲ್ಲ ಎಂದಿದ್ದರು. ಆದರೆ, ಕೇಳದ ಕೋರ್ಟ್ 3.20 ಲಕ್ಷ ರೂ. ಪರಿಹಾರ ಕೊಡುವಂತೆ ಸೂಚಿಸಿದೆ. ಅಂದರೆ 2.90 ಲಕ್ಷ ರೂ.ಗೆ ಬಡ್ಡಿ, 25 ಸಾವಿರ ಪರಿಹಾರ, 5 ಸಾವಿರ ಕೋರ್ಟ್ ವೆಚ್ಚ ಸೇರಿದೆ.