Advertisement

ಅನುದಾನ ಮಂಜೂರಾದರೂ ರಸ್ತೆ ನಿರ್ಮಿಸಿಲ್ಲ:ಕೆಡವಿದ ಮೆಟ್ಟಿಲ ಮೇಲೆ ನಡಿಗೆ

11:01 AM Jul 09, 2018 | |

ಕುಂಜತ್ತಬೈಲ್‌: ಇಲ್ಲಿನ ನಿವಾಸಿಗಳು ವಾಹನ ಹಿಡಿಯಬೇಕಾದರೆ ಮೆಟ್ಟಿಲು ಹತ್ತಿ ಇಳಿದು ನಡೆಯಬೇಕು. ಸ್ವಂತ ವಾಹನವಿದ್ದರೂ ಮನೆ ಅಂಗಳಕ್ಕೆ ಕೊಂಡೊಯ್ಯಲಾಗುತ್ತಿಲ್ಲ. ರಸ್ತೆಯಂತೂ ಈ ಭಾಗದ ಜನ ಮರೀಚಿಕೆ. ವಿಪರ್ಯಾ ಸವೆಂದರೆ ಜನ ನಡೆದಾಡಲು ಇದ್ದ ಮೆಟ್ಟಿಲುಗಳನ್ನೂ ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ಕುಂಜತ್ತಬೈಲ್‌ನ ಬಸವನಗರ ಆಸುಪಾಸಿನ ನಿವಾಸಿಗಳು ರಸ್ತೆಯಂತಹ ಕನಿಷ್ಠ ಮೂಲ ಸೌಕರ್ಯದಿಂದಲೂ ವಂಚಿತರಾಗಿ ದಿನಗಳೆಯುತ್ತಿದ್ದಾರೆ. ಆದರೆ ಗಮನಕ್ಕೆ ಬಂದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ.

Advertisement

ಜನಪ್ರತಿನಿಧಿ ನಿರ್ಲಕ್ಷ್ಯ
ಹಲವು ವರ್ಷಗಳಿಂದ ಇಲ್ಲಿ ಇರುವ ಮೆಟ್ಟಿಲುಗಳೇ ಈ ಭಾಗದ ಜನರಿಗೆ ನಡೆದಾಡಲು ಇರುವ ಏಕೈಕ ದಾರಿ. ಜ್ಯೋತಿನಗರ, ಬಸವನಗರ, ರಾಮನಗರ ಸಂಪರ್ಕಿಸುವಂತೆ ರಸ್ತೆ ನಿರ್ಮಾಣಕ್ಕಾಗಿ ಕೆಲವು ವರ್ಷಗಳ ಹಿಂದೆಯೇ ಅನುದಾನ ಮಂಜೂರಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ರಸ್ತೆ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಹಳೆಯ ಕಾಲದಲ್ಲಿ ನಿರ್ಮಾಣವಾಗಿರುವ ಮೆಟ್ಟಿಲುಗಳ ಮೂಲಕವೇ ಹತ್ತಿಳಿದು ಸುತ್ತು ಬಳಸಿಕೊಂಡು ಜನ ಊರು ತಲುಪುತ್ತಾರೆ. ರಸ್ತೆ ನಿರ್ಮಾಣವಾದರೆ ಈ ಭಾಗಗಳಿಗೆ ಕೇವಲ 200 ಮೀಟರ್‌ ಉದ್ದದ ದಾರಿಯಾಗಿದೆ. 

ಅಗೆದ ಮೆಟ್ಟಿಲುಗಳನ್ನು ಬಿಟ್ಟು ಹೋದರು
ಪೈಪ್‌ಲೈನ್‌ ಅಳವಡಿಕೆ ಮಾಡಿರುವುದರಿಂದ ಇಲ್ಲಿನ ಮೆಟ್ಟಿಲುಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ನೀರಿನ ಸಮಸ್ಯೆ ಸರಿಪಡಿಸಲು ಮೆಟ್ಟಿಲುಗಳನ್ನು ಅಗೆದ ಅಧಿಕಾರಿಗಳು ಅದನ್ನು ಹಾಗೇ ಬಿಟ್ಟು ಹೋಗಿದ್ದಾರೆಯೇ ಹೊರತು ಜನರಿಗೆ ನಡೆದಾಡಲು ವ್ಯವಸ್ಥೆ ಮಾಡಿಕೊಟ್ಟಿಲ್ಲ. ‘ನಡೆದಾಡಲೂ ಅಸಾಧ್ಯವಾಗಿರುವ ಈ ಮೆಟ್ಟಿಲುಗಳಲ್ಲಿ ಈಗಾಗಲೇ ಹಲವು ಮಂದಿ ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಜಿ ಶಾಸಕ ಮೊಯಿದಿನ್‌ ಬಾವಾ ಹಾಗೂ ಉಪ ಮೇಯರ್‌ ಮಹಮ್ಮದ್‌ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ಪ್ರಕಾಶ್‌ ಆರೋಪಿಸುತ್ತಾರೆ.

ರಸ್ತೆ ನಿರ್ಮಿಸುವ ಬಗ್ಗೆ ಅಧ್ಯಯನಕ್ಕೆ ಸೂಚನೆ
ಕುಂಜತ್ತಬೈಲ್‌ ಬಸವನಗರದಲ್ಲಿ ಮೆಟ್ಟಿಲು ಅಗೆದಿರುವುದನ್ನು ಸರಿ ಪಡಿಸಲು ಈ ಹಿಂದೆ ಕಾಂಟ್ರಾಕ್ಟರ್‌ ಮುಂದಾಗಿದ್ದರು. ಆದರೆ ಅಲ್ಲಿನ ನಿವಾಸಿಗಳು ನಮಗೆ ಮೆಟ್ಟಿಲು ಬೇಡ; ರಸ್ತೆಯೇ ಬೇಕು ಎಂದು ಒತ್ತಾಯ ಮಾಡಿದ್ದರು. ಅಗಲ ಕಿರಿದಾಗಿರುವುದರಿಂದ ಅಲ್ಲಿ ರಸ್ತೆ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಅಲ್ಲದೆ ಸುಮಾರು ನಾಲ್ಕೂವರೆ ತಿಂಗಳು ಕಾಲ ಚುನಾವಣಾ ನೀತಿ ಸಂಹಿತೆ ಇದುದ್ದರಿಂದ ಇಲ್ಲಿ ಕೆಲಸ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಎಸ್‌ಎಫ್‌ಸಿ ಫಂಡ್‌ನಿಂದ ಹಣ ಮಂಜೂರಾತಿಗಾಗಿ ಕಳೆದ ತಿಂಗಳ 16ನೇ ತಾರೀಕಿಗೆ ಪಾಲಿಕೆಗೆ ಬರೆದಿದ್ದೇನೆ. ಅಲ್ಲದೆ ರಸ್ತೆ ನಿರ್ಮಾಣದ ಸಾಧ್ಯತೆಗಳನ್ನು ಅಧ್ಯಯನ ನಡೆಸಿ ವರದಿ ಮಾಡುವಂತೆ ಇನ್ಛ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಫೌಂಡೇಶನ್‌ಗೆ ತಿಳಿಸಿದ್ದೇನೆ.
-ಮಹಮ್ಮದ್‌, ಉಪ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next