ಗಜೇಂದ್ರಗಡ: ಕೃಷ್ಣಾ ಬಿ ಸ್ಕೀಂನ 3ನೇ ಹಂತದ ಯೋಜನೆಗೆ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ 5,600 ಕೋಟಿ ರೂ. ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಲ್ಲದೇ, ಮಳೆಗಾಲದೊಳಗೆ ಯೋಜನೆ ವ್ಯಾಪ್ತಿಯ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕೃಷ್ಣಾ ಬಿ ಸ್ಕೀಂ 3ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಕೂಡ್ಲೆಪ್ಪ ಗುಡಿಮನಿ ಆಗ್ರಹಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊಪ್ಪಳ ಏತ ನೀರಾವರಿ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 5600 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಅಲ್ಲದೇ, ಕೆರೆ ತುಂಬಿಸಲು 500 ಕೋಟಿ ಅನುದಾನ ಘೋಷಣೆ ಮಾಡಿದೆ. ಬಜೆಟ್‌ನಲ್ಲಿ ಜನರ ಓಲೈಕೆ ಮಾಡಲು ಅನುದಾನ ಮೀಸಲಿರಿಸಿರುವುದು ಸ್ವಾತಂತ್ರÂ ನಂತರದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಕೇವಲ ಘೋಷಣೆ ಆಗದೇ ಈ ಅನುದಾನವನ್ನು ಸದ್ಬಳಕೆ ಮಾಡಬೇಕು. ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ಈ ಭಾಗದ ಕೆರೆಗಳನ್ನು ತುಂಬಿಸುವುದಲ್ಲದೇ, ನೀರಾವರಿ ಯೋಜನೆ ಜಾರಿಗೊಳಿಸಲು ಕ್ಷೇತ್ರದ ಜನಪ್ರತಿನಿಧಿ ಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಒತ್ತಾಯಿಸಿದರು. ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಕೊಪ್ಪಳ ಏತ ನೀರಾವರಿ ಯೋಜನೆ ರಾಷ್ಟ್ರೀಯ ಮಟ್ಟದ ನೀರಾವರಿ ಯೋಜನೆ ಇದಾಗಿದ್ದು, ಕೊಪ್ಪಳ ಏತ ನೀರಾವರಿಯಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಒಳಗೊಂಡಿದೆ. ಲಕ್ಷಾಂತರ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ. ಪ್ರಸಕ್ತ ಬಜೆಟ್‌ನಲ್ಲಿ 5,600 ಕೋಟಿ ಅನುದಾನ ಮೀಸಲಿರಿಸಿರುವುದು ಸ್ವಾಗತಾರ್ಹ.
ಬರದ ಪ್ರದೇಶಕ್ಕೆ ಯಾವುದೇ ಜಲಮೂಲಗಳಿಲ್ಲ. ನೀರಿಗಾಗಿ ಹಪಹಪಿಸುತ್ತಿದ್ದೇವೆ. ಆದರೆ ಕೊಪ್ಪಳ ಏತ ನೀರಾವರಿ ಯೋಜನೆ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಂಜೀವಿನಿಯಾಗಿದೆ. ದೊಡ್ಡ ಮಟ್ಟದ ಯೋಜನೆಗೆ ಇನ್ನೂ ಹೆಚ್ಚು ಅನುದಾನ ಕಾಯ್ದಿರಿಸಬೇಕಿತ್ತು. ಆ ಮೂಲಕ ಯೋಜನೆ ತ್ವರಿತಗತಿಯ ಕೆಲಸಕ್ಕೆ ಸಹಕಾರಿಯಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಕೃಷ್ಣಾ ನೀರು ಪಡೆದುಕೊಳ್ಳಬೇಕೆಂದು ಯೋಜನೆಯ ನೀರು ಬರುವ ಮೊದಲೇ ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಈಗಾಗಲೇ ರೂಪುರೇಶ ಹಮ್ಮಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೃಷ್ಣಾ ನದಿ ನೀರಿನ ಬಳಕೆಯಲ್ಲಿ ವಿಫಲವಾಗಿದೆ ಎಂದು ದೂರಿದರು.
ಈ ವೇಳೆ ಆನಂದ ಕುಲಕರ್ಣಿ, ಶಿವಾನಂದ ಬೆನಹಾಳ, ಕನಕಪ್ಪ ಮಡಿವಾಳರ, ವಿರೇಶ ಬೆನಹಾಳ, ಮೆಹಬೂಬ ಹವಾಲ್ದಾರ, ಗಣೇಶ ರಾಠೊಡ ಉಪಸ್ಥಿತರಿದ್ದರು.