Advertisement

ಆರೋಗ್ಯಕ್ಕೆ ದಾಖಲೆ ಅನುದಾನದ ಭಾಗ್ಯ

11:22 PM Feb 01, 2021 | Team Udayavani |

ಕಳೆದ ವರ್ಷವಿಡೀ ಕೊರೊನಾ ಸೋಂಕು ಅಟ್ಟಹಾಸ ಮೆರೆದು ಜನರಿಗೆ ಅನಿರೀಕ್ಷಿತ “ಆರೋಗ್ಯ ಬಿಕ್ಕಟ್ಟು’ ಉಂಟುಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ನಲ್ಲಿ ಹಿಂದೆಂದೂ ಕಂಡರಿಯದಷ್ಟು ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಈ ಮೂಲಕ “ಆರೋಗ್ಯ’ಕ್ಕೆ ಭಾಗ್ಯ ದೊರೆತಿದ್ದು, ಪ್ರಸಕ್ತ ಆಯವ್ಯಯದಲ್ಲಿ ಈ ವಲಯವು ಸಿಂಹಪಾಲನ್ನು ಗಿಟ್ಟಿಸಿಕೊಂಡಿದೆ.

Advertisement

ದೇಶವಾಸಿಗಳ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗಾಗಿ 2021-22ನೇ ಸಾಲಿಗೆ ಬರೋಬ್ಬರಿ 2,23,846 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ. 2020-21ರಲ್ಲಿ ಆರೋಗ್ಯ ವಲಯಕ್ಕೆ 94,452 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಲಾಗಿತ್ತು. ಅಂದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಅನುದಾನದ ಮೊತ್ತ ಶೇ.137ರಷ್ಟು ಹೆಚ್ಚಳವಾಗಿದೆ.

ಹಲವಾರು ದಶಕಗಳಿಂದಲೂ ಆರೋಗ್ಯ ಸೇವಾ ಮೂಲಸೌಕರ್ಯವನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದವು. ಆದರೆ, ಈಗ ಸರ್ಕಾರವು ಈ ಕ್ಷೇತ್ರಕ್ಕೆ ಒತ್ತು ನೀಡಿರುವುದು ವಿಶೇಷ.

ಆರೋಗ್ಯ ಕ್ಷೇತ್ರಕ್ಕೆ ನೀಡಿರುವ 2.23 ಲಕ್ಷ ಕೋಟಿ ರೂ.ಗಳಡಿ “ಪ್ರಧಾನಮಂತ್ರಿ ಸ್ವಸ್ಥ ಭಾರತ್‌ ಯೋಜನೆ’ಯನ್ನು ಘೋಷಿಸಲಾಗಿದೆ. ಇದಕ್ಕಾಗಿ ಮುಂದಿನ 6 ವರ್ಷಗಳ ಅವಧಿಗೆ 64,180 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯಡಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸೇವಾ ವ್ಯವಸ್ಥೆಗಳ ಸಾಮರ್ಥ್ಯ ವೃದ್ಧಿ, ಪ್ರಸ್ತುತ ಇರುವಂಥ ರಾಷ್ಟ್ರೀಯ ಸಂಸ್ಥೆಗಳನ್ನು ಬಲಿಷ್ಠಗೊಳಿಸುವಿಕೆ, ಹೊಸ ಮತ್ತು ಮುಂಬರುವಂಥ ರೋಗಗಳ ಪತ್ತೆ-ಶಮನದತ್ತ ಗಮನ ಕೊಡುವ ಹೊಸ ಸಂಸ್ಥೆಗಳ ಸ್ಥಾಪನೆಯ ಕೆಲಸ ನಡೆಯಲಿದೆ.

ಮಿಷನ್‌ ಪೋಷಣ್‌ 2.0
ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ “ಮಿಷನ್‌ ಪೋಷಣ್‌ 2.0′ ಘೋಷಿಸಿದೆ. ಇದಕ್ಕೆ 24,435 ಕೋಟಿ ಮೀಸಲಿರಿ ಸಲಾಗಿದೆ. ಪೂರಕ ಪೌಷ್ಟಿಕ ಕಾರ್ಯಕ್ರಮ ಹಾಗೂ ಪೋಷಣ್‌ ಅಭಿಯಾನ್‌ ವಿಲೀನಗೊಳಿಸಿ “ಮಿಷನ್‌ ಪೋಷಣ್‌ 2.0′ ಜಾರಿಯಾಗಲಿದೆ. ಗರ್ಭಿಣಿ, ಬಾಣಂತಿ, ಯುವತಿಯರಲ್ಲಿ ಪೌಷ್ಟಿಕ ವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಪೋಷಣ್‌ 2.0 ಯೋಜನೆಯಲ್ಲಿ ಐಸಿಡಿಎಸ್‌, ಅಂಗನವಾಡಿ ಕೇಂದ್ರಗಳು, ಪೋಷಣ್‌ ಅಭಿಯಾನ, ಯುವತಿಯರಿಗೆ ಸಂಬಂಧಿಸಿದ ಯೋಜನೆಗಳು ಒಳಗೊಂಡಿರಲಿವೆ. ವಿಶೇಷವಾಗಿ 112 ಜಿಲ್ಲೆಗಳಲ್ಲಿನ ಪೌಷ್ಟಿಕಾಂಶ ಫ‌ಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ನೀಡಲಾಗಿರುವ 24,435 ಕೋಟಿ ರೂ.ಗಳ ಪೈಕಿ, 20,105 ಕೋಟಿ ರೂ.ಗಳನ್ನು ಸಕ್ಷಮ ಅಂಗನವಾಡಿ ಮತ್ತು ಪೋಷಣ್‌ 2.0ಗೆ ಮೀಸಲಿಡಲಾಗಿದೆ.

Advertisement

ಇದನ್ನೂ ಓದಿ:ಸ್ವಸ್ಥ ಭಾರತಕ್ಕಾಗಿ ಆತ್ಮನಿರ್ಭರ ಯೋಜನೆ

ಲಸಿಕೆ ಅನುದಾನ: ಲಾಭವೇನು?
ಕೊರೊನಾ ಲಸಿಕೆಯ ವೆಚ್ಚವಾಗಿ ಸರ್ಕಾರ ಘೋಷಿಸಿರುವ 35 ಸಾವಿರ ಕೋಟಿ ರೂ. ಅನುದಾನದಿಂದ ಅಂದಾಜು 150 ಕೋಟಿ ಡೋಸ್‌ಗಳನ್ನು ಖರೀದಿಸಬಹುದು. ಇದರಿಂದ 75 ಕೋಟಿ ಜನರಿಗೆ ಲಸಿಕೆ ವಿತರಿಸಬಹುದು. ಅಂದರೆ, ದೇಶದ 130 ಕೋಟಿ ಜನ ಸಂಖ್ಯೆಯ ಪೈಕಿ ಅರ್ಧದಷ್ಟು ಜನರು ಲಸಿಕೆ ಪಡೆದಂತಾಗುತ್ತದೆ. ಪ್ರಸ್ತುತ ಕೊವಿಶೀಲ್ಡ್‌ ಲಸಿಕೆಯನ್ನು ಸರ್ಕಾರ ಡೋಸ್‌ಗೆ 220 ರೂ. ದರದಲ್ಲಿ ಖರೀದಿಸುತ್ತಿದೆ. ಲಸಿಕೆಯ ಉದ್ದೇಶಕ್ಕಾಗಿ ಸರ್ಕಾರ 35 ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವ ಕಾರಣ, ಸೋಂಕಿನ ಅಧಿಕ ರಿಸ್ಕ್ ಇರುವವರಿಗಿಂತಲೂ ಹೆಚ್ಚಿನ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಲು ಸಾಧ್ಯ. ಆದರೆ, ಸರ್ಕಾರವು ಈ ವಿಚಾರದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next