Advertisement

ದಾಸೋಹಕ್ಕೆ ಅನುದಾನ: 18 ಕೋ.ರೂ. ಬಿಡುಗಡೆಗೆ ಒಪ್ಪಿಗೆ

09:58 AM Feb 06, 2020 | sudhir |

ಬೆಂಗಳೂರು: ಮೂರು ತಿಂಗಳುಗಳಿಂದ ಸ್ಥಗಿತವಾಗಿದ್ದ ಅನ್ನದಾಸೋಹ ಯೋಜನೆಗೆ ರಾಜ್ಯ ಸರಕಾರ 18 ಕೋ.ರೂ. ಅನುದಾನ ಬಿಡುಗಡೆ ಮಾಡಿದೆ.
ಮಠಗಳು, ಇತರ ಧಾರ್ಮಿಕ ಕೇಂದ್ರಗಳ ಸಹಿತ ಖಾಸಗಿ ಸಂಘ- ಸಂಸ್ಥೆಗಳು ನಡೆಸುತ್ತಿದ್ದ ವೃದ್ಧಾಶ್ರಮ, ಅನಾಥಾ ಶ್ರಮ, ನಾರಿನಿಕೇತನ, ಹಾಸ್ಟೆಲ್‌ಗ‌ಳು, ನಿರಾಶ್ರಿತರು, ಭಿಕ್ಷುಕರ ಕೇಂದ್ರಗಳಲ್ಲಿ ಇರುವವರಿಗಾಗಿ ಉಚಿತ ಅಕ್ಕಿ ಮತ್ತು ಗೋಧಿ ನೀಡುವ ಅನ್ನದಾಸೋಹ ಯೋಜನೆಗೆ 3 ತಿಂಗಳುಗಳಿಂದ ಅನುದಾನ ಬಿಡುಗಡೆಯಾಗಿರಲಿಲ್ಲ.

Advertisement

ಕಾಂಗ್ರೆಸ್‌ ಆಕ್ರೋಶ
ದಾಸೋಹ ಯೋಜನೆಯನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಮಂಗಳವಾರ ಯು.ಟಿ.ಖಾದರ್‌ ಪತ್ರಿಕಾಗೋಷ್ಠಿ ನಡೆಸಿ ಅನುದಾನ ಸ್ಥಗಿತ ವಿಚಾರ ಬಹಿರಂಗಗೊಳಿಸಿದ್ದರು. ಬಿಜೆಪಿ ಸರಕಾರಕ್ಕೆ ಬಡವರ ಬಗ್ಗೆ ಕರುಣೆ ಇಲ್ಲ ಎಂದಿದ್ದರು.

ಈ ವಿಚಾರ ಬೆಳಕಿಗೆ ಬರುತ್ತಲೇ ಎಚ್ಚೆತ್ತುಕೊಂಡ ಬಿಜೆಪಿ ಸರಕಾರ, ಯೋಜನೆಗೆ ತತ್‌ಕ್ಷಣ 18 ಕೋ.ರೂ. ಬಿಡುಗಡೆ ಮಾಡಲು ನಿರ್ಧರಿಸಿದೆ. ಅನ್ನದಾಸೋಹ ಯೋಜನೆಯಡಿ 32,700 ಮಕ್ಕಳಿಗೆ 351 ಕಲ್ಯಾಣ ಸಂಸ್ಥೆಗಳ ಮೂಲಕ ಉಚಿತ ಅಕ್ಕಿ, ಗೋಧಿಯನ್ನು ವರ್ಷದ ಅವಧಿಗೆ ವಿತರಿಸಲು ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ಸಚಿವೆ ವಿರುದ್ಧ ಸಿಎಂ ಗರಂ?
ಈ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಅನುದಾನ ಸ್ಥಗಿತ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ಆಹಾರ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಖಾದರ್‌ ಆರೋಪಕ್ಕೆ ಪತ್ರಕರ್ತರ ಬಳಿ ಪ್ರತಿಕ್ರಿಯಿಸಿದ್ದ ಜೊಲ್ಲೆ, ಆರೋಪವನ್ನು ನಿರಾಕರಿಸಿ ದ್ದರು. ಬಿಜೆಪಿ ಸರಕಾರ ಸಂಸ್ಥೆಗಳಿಗೆ ಅಕ್ಕಿ, ಗೋಧಿ ವಿತರಣೆಯನ್ನು ನಿಲ್ಲಿಸಿಲ್ಲ. ಹಿಂದಿನ ಸರಕಾರದ ಕಾಲದಲ್ಲೇ ಪೂರೈಕೆ ನಿಲ್ಲಿಸಲಾಗಿತ್ತು ಎಂದು ಖಾದರ್‌ಗೆ ತಿರುಗೇಟು ನೀಡಿದ್ದರು.

ಹೊಟ್ಟೆಗೆ ಬರೆ
ದಾಸೋಹದಡಿ ತುಮಕೂರಿನ ಸಿದ್ಧಗಂಗಾ ಮಠ, ಮೈಸೂರಿನ ಸುತ್ತೂರು ಮಠ ಮತ್ತು ಆದಿಚುಂಚನಗಿರಿ ಮಠದ ಸುಮಾರು 25 ಸಾವಿರಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ನೂರಾರು ಖಾಸಗಿ ಸಂಘಸಂಸ್ಥೆಗಳ ಸಾವಿರಾರು ಬಡ ಮಕ್ಕಳು, ಅನಾಥರು, ವಿಧವೆಯರು, ನಿರ್ಗತಿಕರು, ವೃದ್ಧರಿಗೆ ಅನ್ನದಾನ ನಡೆಯುತ್ತಿತ್ತು. ಮುಖ್ಯವಾಗಿ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ರೋಗಿಗಳು ಮತ್ತು ಅವರ ಆರೈಕೆಗೆ ಬಂದವರ ಸಹಿತ ಪ್ರತಿ ತಿಂಗಳು ಕನಿಷ್ಠ ಸಾವಿರ ಮಂದಿಗೆ ಈ ಯೋಜನೆಯಡಿ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಸಂಬಂಧ ಹೇಳಿಕೆ ನೀಡಿದ್ದ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ದಾಸೋಹ ಅಕ್ಕಿ ವಿತರಣೆ ಸ್ಥಗಿತವಾಗಿರುವುದು ಸತ್ಯ. ಪುನರಾರಂಭಿಸುವುದಕ್ಕೆ ಸರಕಾರಕ್ಕೆ ಪತ್ರ ಬರೆದಿದ್ದೇವೆ, ಕೇಂದ್ರಕ್ಕೂ ಮನವಿ ಮಾಡಿದ್ದೇವೆ ಎಂದಿದ್ದರು.

Advertisement

ಸ್ಥಗಿತ ಏಕೆ?
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಭಾರೀ ಗೋಲ್‌ಮಾಲ್‌ ನಡೆದದ್ದರಿಂದ ಖಾಸಗಿ ಕಲ್ಯಾಣ ಸಂಸ್ಥೆಗಳನ್ನು ಬಿಟ್ಟು ಕೇವಲ ಸರಕಾರಿ ಸ್ವಾಮ್ಯದ ಸಂಘ-ಸಂಸ್ಥೆಗಳಿಗೆ ಮಾತ್ರ ಆಹಾರಧಾನ್ಯ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕದಲ್ಲಿ ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳಿಸಲಾಗಿದೆ.

ಬಡವರು, ನಿರ್ಗತಿಕರ ಬಗ್ಗೆ ಕರುಣೆ-ಮಾನವೀಯತೆ ಇಲ್ಲದ ಬಿಜೆಪಿ ಸರ್ಕಾರ ದಾಸೋಹ ಯೋಜನೆ ಸ್ಥಗಿತಗೊಳಿಸಿದೆ. ಸಿದ್ದರಾಮಯ್ಯ ಕಾಲದ ಈ ಯೋಜನೆ ಸ್ಥಗಿತಗೊಳಿಸಿದರೆ ಸುಮ್ಮನಿರಲ್ಲ.
– ಯು.ಟಿ. ಖಾದರ್‌, ಮಾಜಿ ಸಚಿವ

ಮಠಮಾನ್ಯಗಳಿಗೆ ಅನ್ನಭಾಗ್ಯದ ಅಕ್ಕಿ, ಗೋಧಿಯನ್ನು ಬುಧವಾರದಿಂದಲೇ ಪೂರೈಸಲಿದ್ದೇವೆ. ಈ ಹಿಂದಿನ ಪ್ರಮಾಣದಲ್ಲಿಯೇ ಪೂರೈಕೆಯಾಗಲಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ.
– ಬಿ.ಎಸ್‌.ಯಡಿಯೂರಪ್ಪ , ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next