Advertisement

ಕುಡಿವ ನೀರಿನ ಯೋಜನೆ ಪೂರ್ಣಗೊಳಿಸದಿದ್ದರೆ ಅನುದಾನ ಕಡಿತ

01:12 PM Apr 16, 2022 | Team Udayavani |

ಚಿಕ್ಕಮಗಳೂರು: ಅಮೃತ್‌ ಕುಡಿಯುವ ನೀರು ಯೋಜನೆ ಏ.30ರೊಳಗೆ ಪೂರ್ಣಗೊಳಿಸದಿದ್ದರೆ ಅನುದಾನ ಕಡಿತಗೊಳಿಸಲಾಗುವುದು ಎಂದು ಶಾಸಕ ಸಿ.ಟಿ. ರವಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

Advertisement

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಮೃತ್‌ ಕುಡಿಯುವ ನೀರು ಯೋಜನೆ ಮತ್ತು ಒಳಚರಂಡಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಮೃತ್‌ ಯೋಜನೆಯಡಿ ನೀರು ಸರಬರಾಜು ಮಾಡಲು 23 ಡಿಎಂಎ (ಡಿಸ್ಟ್ರಿಕ್ಟ್ ಮೀಟರಿಂಗ್‌ ಏರಿಯಾ) ಗುರುತಿಸಲಾಗಿದ್ದು, ಇಲ್ಲಿಯವರೆಗೆ ಕೇವಲ 16 ಡಿಎಂಎ ಗಳು ಮಾತ್ರ ಪೂರ್ಣಗೊಂಡಿವೆ. 7ಡಿಎಂಎ ಕಾಮಗಾರಿಗಳನ್ನು ಏ.30ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅನುದಾನ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು. ಅಮೃತ್‌ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಕಾಮಗಾರಿಗೆ 102 ಕೋಟಿ ರೂ. ಅನುದಾನ ನೀಡಲಾಗಿದೆ. ಡಿಎಂಎ ಕಾಮಗಾರಿಗಳು ವಿಳಂಬವಾಗುತ್ತಿವೆ. ಕಳಪೆ ಗುಣಮಟ್ಟದ ಮೀಟರ್‌ ಬಾಕ್ಸ್‌ ಮತ್ತು ನಲ್ಲಿಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಬದಲಿಸುವಂತೆ ಸೂಚಿಸಿದರು.

ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳನ್ನು ಜಂಜಿನಿಯರ್‌ಗಳ ಸಮ್ಮುಖದಲ್ಲಿ ಜಂಟಿ ತಪಾಸಣೆ ನಡೆಸಿ, ನ್ಯೂನತೆಗಳನ್ನು ಸರಿಪಡಿಸುವಂತೆ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ಮತ್ತು ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್‌ ಅವರಿಗೆ ತಿಳಿಸಿದರು.

ಅಮೃತ್‌ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ ಸರ್ವೇ ಕಾರ್ಯ ವರದಿ ಬಂದ ನಂತರ ಕಾಮಗಾರಿ ಕಳಪೆಯಾಗಿದ್ದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್‌ ಸಿದ್ಧನಾಯಕ್‌ ಮಾತನಾಡಿ, 63 ಸಂಪರ್ಕ ರಸ್ತೆಗಳಲ್ಲಿ ಔಟ್‌ಫಾಲ್‌ ಸಂಪರ್ಕ ನೀಡಲು ಗುತ್ತಿಗೆದಾರ ಕಾರ್ಯ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗುತ್ತಿದೆ. 30 ಸಂಪರ್ಕ ರಸ್ತೆಗಳಲ್ಲಿ ಕಾಮಗಾರಿ ಬಾಕಿ ಉಳಿದಿದೆ ಎಂದರು.

ಜೂನ್‌ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಅದರೊಳಗೆ ಔಟ್‌ಫಾಲ್‌ ಸಂಪರ್ಕ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ಗುತ್ತಿಗೆದಾರರನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಿ ರಾಜ್ಯದ ಯಾವ ಕಾಮಗಾರಿಗಳ ಗುತ್ತಿಗೆಯೂ ಸಿಗದ ಹಾಗೆ ಮಾಡಲಾಗುವುದು ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದರು.

ಒಳಚರಂಡಿ ಹಾಗೂ ನೀರು ಸರಬರಾಜು ಕಾಮಗಾರಿಗಳಿಗೆ ಪದೇ ಪದೇ ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡಬೇಡಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಮಲ್ಲೇಶ್‌ ನಾಯಕ್‌, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು, ಇಂಜಿನಿಯರ್‌, ಗುತ್ತಿಗೆದಾರರು ಹಾಗೂ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next