ನಾನು ಚಿಕ್ಕವಳಿದ್ದಾಗ ಅಜ್ಜನ ಹತ್ತಿರ ನೋಡಿರುವುದು ಯಾವಾಗಲೂ ಅವನ ಜತೆಗೇ ಇರುವ ಚೀಲ.
ಅದೊಂದು ಬಟ್ಟೆಯಿಂದ ಮಾಡಿದ ಕಪ್ಪು ಬಣ್ಣದ ಚೀಲ. ಕಪ್ಪು ಬಣ್ಣದ ಮೇಲೆ ಬಿಳಿ ಗೆರೆಗಳು, ಅಂತಸ್ತಿನ ಮೇಲೆ ಅಂತಸ್ತಿನಂತೆ ಚೀಲಕ್ಕೆ ಮೂರು ಖಾನೆಗಳು. ಆ ಖಾನೆಯೊಳಗೆ ಮತ್ತೂಂದು ಖಾನೆ. ಹಣವನ್ನು ಇಟ್ಟುಕೊಳ್ಳಲು ಚೀಲವೇ ಭದ್ರವಾದ ಖಜಾನೆ. ಹಣವನ್ನು ಇಟ್ಟುಕೊಳ್ಳಲು ಚೀಲವಿರುವಾಗ ಬ್ಯಾಂಕ್ ಯಾಕೆ ಬೇಕು ಎಂದು ಹೇಳುತ್ತಿದ್ದ. ಮಕ್ಕಳು ಕೊಟ್ಟ ಹಣವನ್ನು ಈ ಚೀಲದಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಇನ್ನೂ ಆ ಚೀಲದಲ್ಲಿ ಹಣದ ಜತೆ ವೀಳ್ಯದೆಲೆ, ಅಡಿಕೆ, ಸುಣ್ಣ ಮತ್ತು ಆಗಿನ ಕಾಲದ ಒಂದಾಣೆ, ನಾಲ್ಕಾಣೆ ಇರುತ್ತಿದ್ದವು. ಹೀಗೆ ಚೀಲದ ಮೂರು ಖಾನೆಯಲ್ಲಿ ಒಂದೊಂದು ವಸ್ತುವನ್ನು ಇಟ್ಟುಕೊಳ್ಳುತ್ತಿದ್ದ.
ಮೊಮ್ಮಕ್ಕಳು ಏನನ್ನಾದರೂ ಕೇಳಿದ ಕೂಡಲೇ ಅಜ್ಜ ಚೀಲದಿಂದ ನಾಲ್ಕಾಣೆ ಅಥವಾ ಒಂದಾಣೆಯನ್ನೋ ತೆಗೆದು ಕೊಡುತ್ತಿದ್ದ. ನಮಗೆ ಎಲ್ಲಿಲ್ಲದ ಸಂತೋಷ. ಆ ಚೀಲದ ಕೇಂದ್ರಸ್ಥಾನ ಅಜ್ಜನ ತಲೆದಿಂಬು. ಅಜ್ಜನಿಗೆ ನನ್ನ ಮೇಲೆ ತುಂಬಾ ಪ್ರೀತಿ. ಅಜ್ಜ ಅಂಗಡಿಗೆ ಹೋದಾಗ ತಂದ ತಿನಸುಗಳನ್ನು ಅವನ ಚೀಲದಲ್ಲಿ ಇಟ್ಟುಕೊಂಡು ಬಂದು ನನಗೆ ಕೊಡುತ್ತಿದ್ದ.
ನನಗೆ ಅಜ್ಜನ ಚೀಲದಲ್ಲಿ ಮತ್ತೆ ಏನೆಲ್ಲ ಇವೆ ಎಂದು ನೋಡಬೇಕೆಂಬ ಕುತೂಹಲ. ಒಂದು ದಿನ ಅಜ್ಜನ ಚೀಲವನ್ನು ನೋಡಿದೆ. ಚೀಲದ ಒಳಗೆ ಎಲೆ, ಅಡಿಕೆ, ಸುಣ್ಣದ ಜತೆ ಹಳೆಯದಾದ ಒಂದು ಕೈ ಗಡಿಯಾರ, ಅಜ್ಜನ ಫೋಟೋ, ಬೀಡಿಗಳು, ಸಣ್ಣ ಬಾಚಣಿಗೆ! ತಲೆಯಲ್ಲಿ ಕೂದಲು ಇಲ್ಲವಾದರೂ ಇರುವ ಸ್ವಲ್ಪ ಕೂದಲನ್ನು ಬಾಚಿಕೊಳ್ಳಲು ಬಾಚಣಿಗೆ ಇಟ್ಟುಕೊಳ್ಳುವುದು ಅಜ್ಜನ ಅಭ್ಯಾಸ.
ಅಜ್ಜ ಹೊರಗಡೆ ಎಲ್ಲಿ ಹೋಗುವುದಾದರೂ ತನ್ನ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನಿಗೆ ಆ ಚೀಲ ನಿಧಿ ಇದ್ದಂತೆ. ಎಷ್ಟೇ ಹೊಸ ಹೊಸ ತರಹದ ಚೀಲಗಳು ಬಂದರೂ ಅಜ್ಜನು ತಾನು ಹಲವಾರು ವರ್ಷಗಳಿಂದ ಬಳಸುತ್ತಿದ್ದ ಚೀಲವನ್ನೇ ತೆಗೆದುಕೊಂಡು ಹೋಗುತ್ತಿದ್ದ. ಯಾವುದನ್ನು ಮರೆತು ಬಿಟ್ಟು ಬಂದರೂ ಚೀಲವನ್ನು ಮಾತ್ರ ಯಾವತ್ತೂ ಮರೆತಿಲ್ಲ. ಅಜ್ಜನಿಗೆ ಆ ಚೀಲದ ಮೇಲೆ ಅಷ್ಟು ಪ್ರೀತಿ, ಕಾಳಜಿ. ಅಜ್ಜ ಮರಣಹೊಂದಿದ ಬಳಿಕ ಚೀಲವು ಅವನು ಮಲಗುವ ಜಾಗದಲ್ಲಿ ಅನಾಥವಾಗಿ ಬಿದ್ದಿತ್ತು. ನಾನು ಚೀಲವನ್ನು ತೆಗೆದುಕೊಂಡೆ. ನನಗೆ ಎಲ್ಲಿಲ್ಲದ ಸಂತೋಷ. ಅದರ ಜತೆ ಅಜ್ಜನಿಲ್ಲ ಎಂಬ ದುಃಖ. ಚೀಲವನ್ನು ತೆಗೆದುಕೊಂಡು ಬಂದು ನನ್ನ ಬಳಿಯಲ್ಲಿ ಇಟ್ಟುಕೊಂಡೆ ಅಜ್ಜನ ಚೀಲ ಇಂದಿಗೂ ನನ್ನಲ್ಲೇ ಇದೆ ಅಜ್ಜನ ನೆನಪಿಗೋಸ್ಕರ.
-ಪಲ್ಲವಿ ಹೆಗಡೆ
ಎಂ.ಎಂ., ಮಹಾವಿದ್ಯಾಲಯ ಶಿರಸಿ