ಕನ್ನಡದಲ್ಲಿ ಹಾರರ್-ಥ್ರಿಲ್ಲರ್ ಚಿತ್ರಗಳಿಗೆ ಅದರದ್ದೇ ಆದ ಸಿದ್ಧಸೂತ್ರವಿದೆ, ಅದನ್ನು ಯಾರೂ ಮೀರುವಂತಿಲ್ಲ ಎಂದು ಬಹುತೇಕ ಹಾರರ್-ಥ್ರಿಲ್ಲರ್ ಚಿತ್ರಗಳ ನಿರ್ದೇಶಕರು ಭಾವಿಸಿದಂತಿದೆ. ಅದೇನೆಂದರೆ, ಯಾವುದೋ ಅಪರಿಚಿತ ಜಾಗಕ್ಕೆ ನಿಗೂಢ ರಹಸ್ಯವನ್ನು ಭೇದಿಸುವುದಕ್ಕೊ (ಬಲಿಯಾಗುವುದಕ್ಕೊ) ನಾಲ್ಕೈದು ಮಂದಿ ಹೋಗುವುದು. ಅಲ್ಲಿರುವ ಅಗೋಚರ ಶಕ್ತಿಗಳಿಗೆ ಎದುರಾಗುವುದು. ಆಮೇಲೆ ಅದರಿಂದ ಹೊರಬರಲು ತಿಣುಕಾಡುವುದು.
ತೆರೆಮೇಲೆ ಒಂದಷ್ಟು ಜನ ಉಸಿರು ಬಿಗಿ ಹಿಡಿದು ಹೋರಾಡುತ್ತಿದ್ದರೆ, ತೆರೆಮುಂದೆ ಒಂದಷ್ಟು ಜನ ಉಸಿರು ಬಿಗಿ ಹಿಡಿದು ನೋಡುವುದು. ಕೊನೆಗೆ ಕೆಣಕಿ ಕೆಡಬೇಡಿ ಎಂಬ ಮಹತ್ತರ ಸಂದೇಶ. ಈ ವರ್ಷ ತೆರೆಗೆ ಬಂದ ಅರವತ್ತಕ್ಕೂ ಹೆಚ್ಚು ಹಾರರ್-ಥ್ರಿಲ್ಲರ್ ಚಿತ್ರಗಳಲ್ಲಿ ಒಂದೆರಡನ್ನು ಹೊರತುಪಡಿಸಿದರೆ, ಉಳಿದೆಲ್ಲ ಚಿತ್ರಗಳಲ್ಲಿ ಕಿಂಚಿತ್ತೂ ಬದಲಾಗದ ನಿರೂಪಣೆ ಶೈಲಿ ಇದು. ಇನ್ನು ಈ ವಾರ ಕೂಡ ಇದೇ ಶೈಲಿಯ ಹಾರರ್-ಥ್ರಿಲ್ಲರ್ ಚಿತ್ರ ಅಜ್ಜ ತೆರೆಗೆ ಬಂದಿದೆ.
ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ತಂಡ ಗ್ರಾಮೀಣ ಸೇವೆಗಾಗಿ ಹಳ್ಳಿಯೊಂದಕ್ಕೆ ಹೋಗುತ್ತದೆ. ಅಲ್ಲಿನ ನಿಗೂಢ ಬಂಗಲೆಯೊಳಗೆ ಅಲ್ಲಿ ಅಜ್ಜ-ಮೊಮ್ಮಗಳು ಇಬ್ಬರೇ ಯಾರ ಕಣ್ಣಿಗೂ ಕಾಣದಂತೆ ವಾಸಿಸುತ್ತಿರುತ್ತಾರೆ. ಇಂಥ ಬಂಗಲೆಯೊಳಗೆ ಈ ವಿದ್ಯಾರ್ಥಿಗಳು ಪ್ರವೇಶಿಸುತ್ತಾರೆ. ಆ ನಂತರ ಚಿತ್ರದಲ್ಲಿ ವಿಚಿತ್ರ ಘಟನೆಗಳು ಶುರುವಾಗುತ್ತಾ ಹೋಗುತ್ತದೆ. ಅಂತಿಮವಾಗಿ ಈ ನಾಲ್ವರು ಹುಡುಗರು ಜೋಪಾನವಾಗಿ ಬಂಗಲೆಯಿಂದ ಹೊರಬಂದು ನಿಟ್ಟುಸಿರು ಬಿಡುತ್ತಾರಾ?
ಇಲ್ಲವಾ? ಎಂಬುದೇ ಅಜ್ಜ ಚಿತ್ರದ ಕಥಾಹಂದರ. ಕಾದಂಬರಿ ಆಧರಿತ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ಚಿತ್ರದ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಹೊಸತನವಿಲ್ಲ. ಹೊಸ ಬಗೆಯ ನಿರೂಪಣಾ ಶೈಲಿ ಇದ್ದರೆ “ಅಜ್ಜ’ ಕೊಂಚ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದ. ಆದರೆ, ನಿರ್ದೇಶಕರು ಮಾತ್ರ ಹಾರರ್ ಸಿನಿಮಾದ ಸಿದ್ಧಸೂತ್ರವನ್ನು ಬಿಟ್ಟು ಹೊರಬರುವ ಮನಸ್ಸು ಮಾಡಿಲ್ಲ. ಹಾಗಾಗಿ, ಹಾರರ್ ಸಿನಿಮಾಗಳನ್ನು ನೋಡಿ ಪಂಟರ್ ಆಗಿರುವ ಕನ್ನಡ ಪ್ರೇಕ್ಷಕನಿಗೆ ಅಜ್ಜನಲ್ಲಿ ಹೊಸತನ ಕಾಣುವುದಿಲ್ಲ.
ನೋಡುಗರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತೇವೆ ಎಂದು ಹೋಗಿ ಕೊನೆಗೆ ತಾವೇ ಮುಗ್ಗರಿಸುವ ಸರದಿ ಈ ಚಿತ್ರದಲ್ಲೂ ಮುಂದುವರೆದಿದೆ. ಚಿತ್ರದಲ್ಲಿ ಅಜ್ಜನಾಗಿ ಹಿರಿಯ ನಟ ದತ್ತಣ್ಣ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಪ್ರತಿಭೆಗಳು ತಮ್ಮ ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಪರದಾಡಿರುವುದು ಚಿತ್ರದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ. ಉಳಿದಂತೆ ಚಿತ್ರದ ಛಾಯಾಗ್ರಹಣ, ಸಂಕಲನ, ಇನ್ನಿತರ ತಾಂತ್ರಿಕ ಕೆಲಸಗಳೂ ಅಷ್ಟಾಗಿ ಗಮನ ಸೆಳೆಯುವುದಿಲ್ಲ.
ಚಿತ್ರ: ಅಜ್ಜ
ನಿರ್ದೇಶನ: ವೇಮಗಲ್ ಜಗನ್ನಾಥ್ ರಾವ್
ನಿರ್ಮಾಣ: ಕೆ.ಪಿ ಚಿದಾನಂದ್
ತಾರಾಗಣ: ದತ್ತಣ್ಣ, ಪೃಥ್ವಿಶ್ರೀ, ರಾಜ್ ಪ್ರವೀಣ್, ಅಶ್ವಿನಿ, ಮಾಧುರಿ, ದೀಪಕ್ ರಾಜ್, ನಾಗೇಶ್ ಮಯ್ಯ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್