Advertisement

ಗಲ್ಫ್ ಮರುಭೂಮಿಯಲ್ಲಿ 2 ವರ್ಷ ನರಕಯಾತನೆ: ʼಆಡುಜೀವಿತಂʼ ಸಿನಿಮಾದ ನಿಜವಾದ ಹೀರೋ ಇವರೇ…

05:04 PM Mar 25, 2024 | ಸುಹಾನ್ ಶೇಕ್ |

ಚೆನ್ನಾಗಿ ದುಡಿಯಬೇಕು, ದುಡಿದು ಕುಟುಂಬವನ್ನು, ಅಪ್ಪ – ಅಮ್ಮನನ್ನು ಸಾಕಬೇಕೆನ್ನುವ ಕನಸು ಬಹುತೇಕರದು ಆಗಿರುತ್ತದೆ. ಇದೇ ಆಸೆಯಲ್ಲಿ ಕೆಲವೊಬ್ಬರು ದುಡಿಮೆಗಾಗಿ ಗಲ್ಫ್‌ ರಾಷ್ಟ್ರಕ್ಕೆ ಪಯಣ ಬೆಳೆಸುತ್ತಾರೆ. ಒಂದಷ್ಟು ಸಾಲ, ಇನ್ನೊಂದಿಷ್ಟು ಉಳಿತಾಯದ ಹಣದ ಸಹಾಯದಿಂದ ವೀಸಾ, ಟಿಕೆಟ್‌ ಪಡೆದು ಅಪರಿಚಿತ ದೇಶಕ್ಕೆ ಜವಾಬ್ದಾರಿಗಳ ಮೂಟೆಯನ್ನು ಇಟ್ಟುಕೊಂಡು ಪಯಣ ಬೆಳೆಸುತ್ತಾರೆ.

Advertisement

ಇತ್ತೀಚೆಗೆ‌ ಮಾಲಿವುಡ್ ಪೃಥ್ವಿರಾಜ್‌ ಸುಕುಮಾರನ್‌ ಅವರ ಬಹು ನಿರೀಕ್ಷಿತ ʼ ಆಡುಜೀವಿತಂʼ ಎನ್ನುವ ಸಿನಿಮಾವೊಂದರ ಟ್ರೇಲರ್‌ ವೊಂದು ರಿಲೀಸ್‌ ಆಗಿದೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ.

ಈತನ ನಿಜ ಜೀವನದ ಕಥೆಯನ್ನು ಕೇಳಿದರೆ, ಒಮ್ಮೆ ನಾವು – ನೀವು ನಿಂತಲೇ ಧಸಕ್ಕೆಂದು ಕುಸಿದು ಬೀಳುವಂತೆ ಭಾವುಕರಾಗುತ್ತೇವೆ.

ಯಾರು ಈ ನಜೀಬ್..‌ ಅದು 1993 ರ ಸಮಯ ಕೇರಳದ ಬಹುತೇಕರಂತೆ ಸರಿಯಾದ ಉದ್ಯೋಗವಿಲ್ಲದೆ, ಕುಟುಂಬವನ್ನು ಸಾಗಿಸುವ ನಿಟ್ಟಿನಲ್ಲಿ ಆಲಪ್ಪುಳದ ಹರಿಪಾದ್‌ ನಲ್ಲಿರುವ ಅರಟ್ಟುಪುಳ ಎಂಬ ಗ್ರಾಮದ ನಜೀಬ್‌ ವಿದೇಶಕ್ಕೆ ಹೊರಡಲು ನಿರ್ಧರಿಸುತ್ತಾರೆ. ನಜೀಬ್‌ ಅವರ ಹಳ್ಳಿಯಲ್ಲಿನ ಪರಿಚಯಸ್ಥರೊಬ್ಬರು ಮುಂಬೈನಲ್ಲಿ ವೀಸಾ ವ್ಯವಸ್ಥೆ ಮಾಡುವ ಏಜೆಂಟ್‌ಗೆ ನಜೀಬ್‌ನನ್ನು ಪರಿಚಯಿಸುತ್ತಾರೆ. ವೀಸಾಕ್ಕಾಗಿ ನಜೀಬ್‌ ಅವರು, 55,000 ರೂ. ಹಣ ಹೊಂದಿಸಲು ಐದು ಸೆಂಟ್ಸ್ ಜಮೀನು ಮಾರಾಟ ಮಾಡುತ್ತಾರೆ.

ಎಂಟು ತಿಂಗಳ ಗರ್ಭಿಣಿ ಪತ್ನಿ ಹಾಗೂ ಮಗ ಹಾಗೂ ಕುಟುಂಬವನ್ನು ಬಿಟ್ಟು, ದುಡಿಮೆಗಾಗಿ ಅರಬ್‌ ದೇಶದತ್ತ ನಜೀಬ್‌ ಪಯಣ ಬೆಳೆಸುತ್ತಾರೆ. ಹೋಗಿ ಹಣ ಸಂಪಾದಿಸಿ ಮತ್ತೆ ಬರುತ್ತೇನೆ ಎನ್ನುವ ಆಶಭಾವದೊಂದಿಗೆ ಪತ್ನಿಯ ಬಿಗಿದಪ್ಪುಗೆ, ಅಪ್ಪ – ಅಮ್ಮನ ಭಾವನಾತ್ಮಕ ಕ್ಷಣವನ್ನು ಮರೆತು ವಿದೇಶಕ್ಕೆ ಪಯಣ ಬೆಳೆಸುತ್ತಾರೆ.

Advertisement

ಸೂಪರ್‌ ಮಾರ್ಕೆಟ್‌ ನಲ್ಲಿ ಸೇಲ್ಸ್‌ ಮ್ಯಾನ್‌ ಕೆಲಸಕ್ಕೆಂದು ವೀಸಾವನ್ನು ಪಡೆದಿದ್ದ ನಜೀಬ್‌, ಸೌದಿಯ ಏರ್‌ ಪೋರ್ಟ್‌ ನಿಂದ ಪಯಣ ಬೆಳೆಸುತ್ತಾರೆ. ಆದರೆ ಎರಡು ದಿನ ನಿರಂತರವಾಗಿ ಪಯಣ ಬೆಳೆಸಿದ ವೇಳೆ ಅವರೊದಿಗೆ ಅವರ ಅರಬ್‌ ಮಾಲೀಕ ಹಾಗೂ ಆತನ ಸಹೋದರ ಬಿಟ್ಟರೆ ಬೇರೆ ಯಾರನ್ನೂ ಕೂಡ ನಜೀಬ್‌ ನೋಡಲಿಲ್ಲ. ಎರಡು ದಿನದ ನಿರಂತರ ಪಯಣ ಬಳಿಕ ನಜೀಬ್‌ ರನ್ನು ಸೌದಿಯ ಯಾವುದೋ ಹಳ್ಳಿಯ ವಿಶಾಲವಾದ, ಒಬ್ಬನೇ ಒಬ್ಬ ಮನುಷ್ಯನಿಲ್ಲದ ಮರುಭೂಮಿಯಲ್ಲಿ ಬಿಡಲಾಗುತ್ತದೆ. ನಜೀಬ್‌ ಗೆ ತಾನು ಸಿಕ್ಕಿಹಾಕ್ಕಿಕೊಂಡಿದ್ದೇನೆ ಎನ್ನುವ ಅಂಶ ಅರಿವಿಗೆ ಬರುತ್ತದೆ.

‌ನಿತ್ಯ ನರಕಯಾತನೆ.. ಬದುಕಿಯೂ ಸತ್ತಂತೆ ಇದ್ದ ದಿನಗಳು..

ಸೇಲ್ಸ್‌ ಮ್ಯಾನ್‌ ಕೆಲಸಕ್ಕೆಂದು ಕರೆಸಿಕೊಂಡ ನಜೀಬ್ ಗೆ ತಾನು ಕರುಣೆಯಿಲ್ಲದ ಪಾಪಿಗಳ ಕೈಯಲ್ಲಿ ಸಿಲುಕಿಕೊಂಡಿದ್ದೇನೆ ಎನ್ನವುದು ಗೊತ್ತಾಗುತ್ತದೆ. ಕೊನೆಯೇ ಇಲ್ಲದ ಬಿಸಿಲ ಬೇಗೆಯ ಮರುಭೂಮಿಯಲ್ಲಿ ಅರಬ್‌ ಮಾಲೀಕ ಹಾಗೂ ಆತನ ಸಹೋದರ ತಮ್ಮ 700 ಆಡುಗಳನ್ನು ಮೇಯಿಸುವ ಕೆಲಸಕ್ಕೆ ನಜೀಬ್‌ ನನ್ನು ಬಳಸಿಕೊಳ್ಳುತ್ತಾರೆ. ಅದು ಸಂಬಳವಿಲ್ಲದೆ ಕೆಲಸ. ಊಟ, ನೀರು ಯಾವುದನ್ನು ನೀಡದ ಕೆಲಸ. ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು ಕೂಡ ನಜೀಬ್‌ ಗೆ ಅಲ್ಲಿನ ಮಾಲಕರು ಅನುವು ಮಾಡಿಕೊಡುವುದಿಲ್ಲ. ಅರಬ್‌ ಭಾಷೆಯನ್ನು ಅರಿಯದ ನಜೀಬ್‌ ನನ್ನು ಪ್ರಾಣಿಗಿಂತ ಕೀಳಾಗಿ ಕಾಣುತ್ತಾರೆ. ನಿತ್ಯ ಹೊಡೆಯುವುದು,ಕಿರುಕುಳ ನೀಡುವುದು ಸಾಮಾನ್ಯವಾಗಿತ್ತು.

ಊಟಕ್ಕೆಂದು ನೀಡುತ್ತಿದ್ದ್ದ್ದು ಕುಬೂಸ್ (ಅರೇಬಿಕ್‌ ಬ್ರೆಡ್)‌ ಮಾತ್ರ. ಅದು ಕೂಡ ಹಳಸಿ ಇರುತ್ತಿತ್ತು. ಇದನ್ನು ಹಾಗೆಯೇ ತಿನ್ನಲು ಆಗುತ್ತಿರಲಿಲ್ಲ. ಅದಕ್ಕಾಗಿ ನಜೀಬ್‌  ಆಡುಗಳ ಹಾಲನ್ನು ಉಪಯೋಗಿಸುತ್ತಿದ್ದರು. ವರ್ಷಾನುಗಟ್ಟಲೇ ಸ್ನಾನ ಮಾಡದೆ ಇರುತ್ತಿದ್ದ ಆಡುಗಳು ವಾಸನೆ ಬರುತ್ತಿದ್ದವು. ಈ ಕಾರಣದಿಂದ ಆಡುಗಳ ಹಾಲು ಕೂಡ ವಾಸನೆಯಿಂದ ಕೂಡಿರುತ್ತಿತ್ತು. ಇದ್ದ ಬಟ್ಟೆ, ವೀಸಾ, ಪಾಸ್‌ ಪೋರ್ಟ್‌ ಎಲ್ಲವನ್ನು ಕಿತ್ತುಕೊಂಡು ಇರಿಸುತ್ತಾರೆ.

ಮಾಲೀಕರು ಮರುಭೂಮಿಯಲ್ಲಿ ಸಣ್ಣ ಶೆಡ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನಜೀಬ್‌ನನ್ನು ಹೊರಗೆ ಮಲಗಲು ಹೇಳುತ್ತಿದ್ದರು.

ಬಟ್ಟೆ ಬದಲಾಯಿಸದೆ, ಸ್ನಾನ ಮಾಡದೆ ಕೂದಲು, ಗಡ್ಡ ಎಲ್ಲ ಬೆಳೆದು ನಜೀಬ್‌ ಹುಚ್ಚನಂತೆ ಕಾಣುತ್ತಿದ್ದರು. ತನ್ನ ಮೈ, ಆಡುಗಳ ಮೈಯ ವಾಸನೆಯಿಂದ ವಾಕರಿಕೆ ಬರುತ್ತಿತ್ತು. ಆದರೆ ಕೆಲ ಸಮಯದಲ್ಲಿ ಇದಕ್ಕೆ ನಜೀಬ್‌ ಒಗ್ಗಿಕೊಳ್ಳುತ್ತಾರೆ.

ಅರಬ್‌ ಮಾಲೀಕನ ಅಣ್ಣ ಆಡುಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ಕೊಂಡೊಯ್ಯಲು ಭೇಟಿ ನೀಡುತ್ತಿದ್ದರು ಮತ್ತು ಇಬ್ಬರೂ ನಜೀಬ್‌ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ನಜೀಬ್‌ ಓಡಿ ಹೋಗಬಾರದೆಂದು ಮಾಲೀಕರು ದುರ್ಬೀನುನಿಂದ ಆತನ ಚಲನವಲನವನ್ನು ಗಮನಿಸುತ್ತಿದ್ದರು.

ಇವತ್ತಲ್ಲ, ನಾಳೆ.. ನಾಡಿದ್ದು ಎಲ್ಲವೂ ಸರಿ ಆಗುತ್ತದೆನ್ನುವ ನಿರೀಕ್ಷೆಯಲ್ಲಿಯೇ ನಜೀಬ್‌ ಎರಡು ವರ್ಷ ನರಕಯಾತನೆಯಲ್ಲೇ ದಿನದೂಡುತ್ತಾರೆ. ತನ್ನ ಜೀವನ ಇಲ್ಲಿಗೆ ಮುಗಿಯಿತು ಎನ್ನುವ ಯೋಚನೆಯಲ್ಲಿದ್ದ ಅವರಿಗೆ ಅದೊಂದು ದಿನ ದೇವರು ಭರವಸೆಯ ಬೆಳಕನ್ನು ತೋರಿಸುತ್ತಾರೆ.

ಅದು 1995 ರ ಒಂದು ರಾತ್ರಿ. ಅರಬ್‌ ಮಾಲೀಕ ತನ್ನ ಅಣ್ಣನ ಮಗಳ ಮದುವೆಗೆಂದಿ ಶೆಡ್‌ ಬಿಟ್ಟು ಹೋಗುತ್ತಾನೆ. ಇದನ್ನು ನೋಡಿದ ನಜೀಬ್‌ ಜೀವದ ಹಂಗು ತೊರೆದು ನೀರಿಲ್ಲದೆ ಮೈಲುಗಟ್ಟಲೆ ಓಡುತ್ತಾರೆ. ನಜೀಬ್‌ ಓಡಿಹೋಗುವ ವೇಳೆ ದಾರಿಯಲ್ಲಿ ಅವರಿಗೆ ತನ್ನ ಹಾಗೆಯೇ ಇದೇ ಪರಿಸ್ಥಿತಿಯಲ್ಲಿರುವ ಇನ್ನೊಬ್ಬ ಮಲಯಾಳಿಯನ್ನು ನೋಡುತ್ತಾರೆ. ಆದರೆ ಆತನ ಮಾಲೀಕ ಆತನನ್ನು ನೋಡುತ್ತಾ ಇರಬಹುದೆನ್ನುವ ಭೀತಿಯಲ್ಲಿ ಅವರನ್ನು ಕರೆತರಲು ಸಾಧ್ಯವಾಗುವುದಿಲ್ಲ.

ಎಷ್ಟೋ ಕಿ.ಮೀ ಓಡಿದ ಬಳಿಕ ರಸ್ತೆಯೊಂದು ಕಾಣುತ್ತದೆ. ಈ ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತ ಬಳಿಕ ಒಂದು ವಾಹನ ನಿಲ್ಲುತ್ತದೆ. ಅದನ್ನು ಒಬ್ಬ ಅರಬ್‌ ಚಲಾಯಿಸುತ್ತಿರುತ್ತಾನೆ. ಆ ಅರಬ್‌ ಬಳಿ ತನ್ನ ಕಷ್ಟವನ್ನು ಹೇಳಿಕೊಂಡ ನಜೀಬ್‌ ಅವರ ಸಹಾಯದಿಂದ ರಿಯಾದ್ ಗೆ ಬಂದು ಇಳಿಯುತ್ತಾರೆ.

ಅಲ್ಲಿಂದ ಮಲಯಾಳಿ ರೆಸ್ಟೋರೆಂಟ್ ವೊಂದನ್ನು ಹುಡುಕುತ್ತಾರೆ. ಅಲ್ಲಿನವರು ನಜೀಬ್‌ ಅವರಿಗೆ ಊಟ, ಬಟ್ಟೆಯನ್ನು ನೀಡುತ್ತಾರೆ. ಸ್ನಾನ, ಕ್ಷೌರ ಮತ್ತು ನನ್ನ ಕೂದಲನ್ನು ಕತ್ತರಿಸಿಕೊಂಡು ನಜೀಬ್‌ ʼಮರುಜನ್ಮʼ ಪಡೆಯುತ್ತಾರೆ.

ಇದಾದ ಬಳಿಕ ರಿಯಾದ್‌ ನಲ್ಲಿನ ಕೆಲವು ಸಂಬಂಧಿಕರನ್ನು ಭೇಟಿ ಆದರು. ನಜೀಬ್ ದೇಶದ ಕಾನೂನು ವ್ಯವಸ್ಥೆಗೆ ಶರಣಾದರು. ಇದು ಪಾಸ್‌ಪೋರ್ಟ್ ಮತ್ತು ವೀಸಾದಂತಹ ದಾಖಲೆಗಳನ್ನು ಕಳೆದುಕೊಂಡಿರುವ ಮತ್ತು ಏಜೆಂಟರಿಂದ ವಂಚನೆಗೊಳಗಾದ ಅವರಂತಹ ವಲಸಿಗರಿಗೆ ಏಕೈಕ ಆಯ್ಕೆಯಾಗಿದೆ.

ನಜೀಬ್‌ನನ್ನು 10 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು. ಕಠಿಣ ಪರಿಸ್ಥಿತಿಗಳಲ್ಲಿ ಇಂತಹ ಕ್ರೌರ್ಯಕ್ಕೆ ಒಳಗಾದ ವ್ಯಕ್ತಿಗೆ, ಜೈಲು ಆಹ್ಲಾದಕರವಾಗಿತ್ತು. “ಜೈಲಿನೊಳಗೆ ಜೀವನವು ಉತ್ತಮವಾಗಿತ್ತು, ಅಲ್ಲಿ ಆಹಾರ, ಶುಚಿತ್ವ ಮತ್ತು ನಾನು ಮಲಗಲು ಸಾಧ್ಯವಾಯಿತು” ಎಂದು ನಜೀಬ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಂತಿಮವಾಗಿ ನಜೀಬ್‌ ಮನೆಗೆ ಮರಳುತ್ತಾರೆ. ಮಗ ಸಫೀರ್‌ ಗೆ ಆಗ ಎರಡು ವರ್ಷ ಆಗಿರುತ್ತದೆ. ಮನೆಗೆ ಮರಳಿದ ಬಳಿಕ ನಜೀಬ್ ಮತ್ತೆ ದಿನಗೂಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಆ ಬಳಿಕ ನಜೀಬ್‌ ಅವರಿಗೆ ಅವರ ಸೋದರ ಮಾವನ ಬಹ್ರೇನ್‌ಗೆ ಉಚಿತ ವೀಸಾವನ್ನು ನೀಡುತ್ತಾರೆ.

ಕಾದಂಬರಿಯಾದ ನಜೀಬ್‌ ಬದುಕು: ಇಂದು ನಜೀಬ್‌ ಅವರ ಗಲ್ಫ್ ರಾಷ್ಟ್ರದಲ್ಲಿನ ನರಕಯಾತೆಯ ಬದುಕು ವಿಶ್ವದ ಬಹುತೇಕ ಜನರಿಗೆ ತಿಳಿದಿದೆ ಎಂದರೆ ಅದಕ್ಕೆ ಕಾರಣ ಬೆನ್ಯಾಮಿನ್ ಅವರ ಜನಪ್ರಿಯ ‘ಆಡುಜೀವಿತಂʼಕಾದಂಬರಿ. ಈ ಕಾದಂಬರಿ ವಿದೇಶಿ ಭಾಷೆ ಸೇರಿದಂತೆ 12 ಭಾಷೆಗಳಿಗೆ ಅನುವಾದಗೊಂಡಿದೆ.

ಬೆನ್ಯಾಮಿನ್ ಅವರು ಬರಹಗಾರರಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೊದಲು ಕೇರಳಕ್ಕೆ ಹಿಂದಿರುಗುತ್ತಾರೆ. ಈ ಮೊದಲು ಅವರು ಬಹ್ರೇನ್‌ನಲ್ಲಿ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಬೆನ್ಯಾಮಿನ್ ಅವರು ನಜೀಬ್ ಅವರ ಸೋದರಮಾವ ಸುನೀಲ್ ಸ್ನೇಹಿತರಾಗಿದ್ದರು. ‌

ವಲಸಿಗ ಕೇರಳೀಯರ ಜೀವನದ ಬಗ್ಗೆ ಬರೆಯಲು ಬೆನ್ಯಾಮಿನ್ ವ್ಯಕ್ತಿಯೊಬ್ಬರನ್ನು ಹುಡುಕುತ್ತಿದ್ದರು. ಆಗ ನಜೀಬ್‌ ಅವರ ಪರಿಚಯ ಸುನೀಲ್‌ ಮೂಲಕ ಆಗುತ್ತದೆ.

2008 ರಲ್ಲಿ ಪ್ರಕಟವಾದ ಈ ಕಾದಂಬರಿಯು ಬೆನ್ಯಾಮಿನ್ ಅವರನ್ನು ಮಲಯಾಳಂ ಸಾಹಿತ್ಯದಲ್ಲಿ ಒಬ್ಬ ಲೇಖಕನಾಗಿ ಪರಿವರ್ತಿಸಿತು.

ಈ ಕಾದಂಬರಿಗೆ 2009 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇಂಗ್ಲಿಷ್ ಅನುವಾದವು ಮ್ಯಾನ್ ಏಷ್ಯನ್ ಸಾಹಿತ್ಯ ಪ್ರಶಸ್ತಿ 2012 ರ ದೀರ್ಘ ಪಟ್ಟಿಯಲ್ಲಿ ಮತ್ತು ದಕ್ಷಿಣ ಏಷ್ಯಾ ಸಾಹಿತ್ಯ 2013 ರ DSC ಪ್ರಶಸ್ತಿಯ ಕಿರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಪುಸ್ತಕದ ಕಥೆಯನ್ನು ಆಧಾರಿಸಿ ಮಲಯಾಳಂನ ಹಿರಿಯ ನಿರ್ದೇಶಕ ಬ್ಲೆಸ್ಸಿ ಅವರು ʼಆಡುಜೀವಿತಂʼ ಸಿನಿಮಾವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ ಮತ್ತು ಚಿತ್ರವು ಮಾರ್ಚ್ 28 ರಂದು ಬಿಡುಗಡೆಯಾಗಲಿದೆ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next