ಹಣ್ಣುಕೂದಲ ಅಜ್ಜಿಯೊಬ್ಬಳು ಕಣ್ಣುತುಂಬ ಪ್ರೀತಿ ತುಂಬಿಕೊಂಡು ಸುಕ್ಕು ಕೈಗಳಲಿ ಜೋಲಿತೂಗುತ್ತ ಜೋಗುಳ ಹಾಡುತ್ತಿದ್ದಾಳೆ. ಅವಳ ಕೊರಳೊಳಗಿಂದ ಹೊರಚಿಮ್ಮಿದ ಲಯಬದ್ಧ ಪ್ರಾಸಪದಗಳೇ ರೆಕ್ಕೆಬಿಚ್ಚಿ ಹಾರಿ ಟೊಂಗೆ ಟೊಂಗೆಯ ಮೇಲೆ ಗೊಂಚಲು ಗೊಂಚಲು ಗಿಣಿಹಕ್ಕಿಗಳಾಗಿ ಟಿಂಗಿrಂಗ್‌ತಂತಿಯ ನುಡಿಸುತ್ತಿವೆ. ಪಿಕುಪಿಕು ಪಿಕಳಾರಗಳು ಪಕಪಕ ನಗುತ್ತಿವೆ, ಟಿಟ್ಟಿಟ್ಟಿ ಟಿಟ್ಟಿಭಗಳು ತಕತಕ ಕುಣಿಯುತ್ತ ನಕ್ಷತ್ರ ತೊಟ್ಟಿಲನ್ನು ತೂಗುತ್ತಿವೆ. ಮರಗಳ ಮೈಯಿಂದ ಬಣ್ಣದ ಹೂಗಳನ್ನು ಬಿಡಿಸಿ ತಂಗಾಳಿಯು ಬೊಗಸೆಯಲ್ಲಿ ಆಗಸಕ್ಕೆ ಎಸೆಯುತ್ತಿದೆ.ಮೋಡದ ಮರೆಯಲ್ಲಿ ಇಣುಕುತ್ತ ನಗುತ್ತಿದ್ದಾನೆ ಚಂದಕ್ಕಿಮಾಮ. ಸೀರೆಯ ಜೋಲಿಯನ್ನು ಚಿಗುರುಬೆರಳುಗಳಲ್ಲಿ ಎಳೆಯುತ್ತ ಇಣುಕಿ ದುಂಡುಮುಖದ ಇ ಕೆನ್ನೆಯ ಸುಳಿಯಲ್ಲಿ ಸುರುಳಿಹೂವನ್ನು ಅರಳಿಸುತ್ತಿದೆ ಚಂದಮಗು.
ಅದು ಪಕಳೆ ಬೆರಳುಗಳಲ್ಲಿ ಮುಚ್ಚಿ ಟ್ಟ ಗುಟ್ಟೇನು? ಬಣ್ಣದ ಚಿಟ್ಟೆಯನ್ನೇ ಬಚ್ಚಿಟ್ಟಿರಬಹುದೇ? ರಸಗೆಂಪು ತುಟಿಯಲ್ಲಿ ಕಿಟಿಕಿಟಿ ನಗುತ್ತಿದೆ! ಕಪ್ಪು$ಕಾಡಿಗೆ ಕಂಗಳ ದಿಟ್ಟಿಯಲೇ ಕರಿದುಂಬಿಗಳನ್ನು ತಂದಿಟ್ಟಿದೆಯೇ? ಕೇದಗೆ ಗರಿಯಂಥ ಕೈಗಳನೆತ್ತಿ ದೇವರ ಪಲ್ಲಕಿ ಹೊರುತ್ತಿರಬಹುದೇ? ಪುಟಪುಟ್ಟ ಅಂಗಾಲುಗಳಲ್ಲಿ ಪಿಟಿಪಿಟಿ ಹೆಜ್ಜೆಯಿಡುತ್ತ ಕನಸಲ್ಲೆ ತೇರನು ಎಳೆಯುತ್ತಿದೆಯೇ! ಮೊಗ್ಗು ತುಟಿಗಳ್ಳೋ ಗಿಳಿಕೊಕ್ಕು! ಫೂ ಫೂವೆಂದು ಹಕ್ಕಿಪುಕ್ಕವನ್ನು ಊದುತ್ತಿದೆಯೆ, ಮಗ್ಗಿ ಹೇಳುತ್ತಿದೆಯೇ? ಅಲ್ಲ , ಈ ಮಾತಿನಮಲ್ಲಿ ಪಾರಿಜಾತ ಹೂವು ದೇವರ ಜತೆಯೇ ಮಾತಾಡುತ್ತಿದೆಯೋ ಏನು ಕತೆ ! ಗಾಳಿಗೆ ಮುಚ್ಚಿ ಹೋಗುವ ಕಣ್ಣೆವೆಯೆಸಳನ್ನು ಕಿವಿಹೂಗಳನ್ನು ಬಲವಂತವಾಗಿ ಅರಳಿಸುತ್ತ ಅಜ್ಜಿಯ ಜೋಗುಳದ ಹಾಡಿಗೆ ಸ್ವರವನ್ನು ಸೇರಿಸಿ “ಆ ಊ’ ರಾಗವೆಳೆಯುತ್ತಿರುವ ಮಗುವಿನ ಕೊರಳಲ್ಲೇ ಇಂಪಾದ ಕೊಳಲಿರಲು ಮನೆಯೇ ನಂದಗೋಕುಲ ವಲ್ಲವೇ? ಕಲ್ಪನೆಯ ನಕ್ಷತ್ರಗಳಿವೆ ಅಜ್ಜಿಯ ಅಕ್ಷಯ ಸಂಚಿಯ ತುಂಬ.
ಮಗು ಉಸಿರಾಡುವುದೇ ಜೋಗುಳದಿಂದ ! ಲಾಲಿಯ ಹಾಡಿದು ಲಾಲೀಸಿ ಕೇಳಾನ, ಹಾಲ ಹಂಬಲವ ಮರೆತಾನಾಕಂದಯ್ಯ ತೋಳಬೇಡ್ಯಾನ ತಲೆದಿಂಬ ಎನ್ನುತ್ತಾರೆ ಜನಪದರು. ಲಾಲಿ ಹಾಡಿಗೆ ಮೈಮರೆತ ಮಗು ಹಾಲನ್ನೇ ಮರೆತು ತೋಳಿನಲ್ಲೇ ಮಲಗಿತಂತೆ! ಲೋಕದ ಎಲ್ಲ ಭಾಷೆಗಳಲ್ಲೂ ಜೋಗುಳ ಲಲ್ಲೆಮಿಗಳಿವೆ, ಆಟದ ಹಾಡುಗಳಿವೆ, ಶಿಶುಪ್ರಾಸಗಳಿವೆ. ಅರ್ಥವಾಗದಿದ್ದರೂ ಅದರೊಳಗಿನ ಗುಂಗು, ಲಯ, ನಾದ, ಸ್ವರ, ಪ್ರಾಸ, ಅನುಕರಣಾವ್ಯಯ ಮಗುವಿಗೆ ಇಷ್ಟವಾಗುತ್ತದೆ. ಕ್ರಮೇಣ ಶಬ್ದಗಳನ್ನು ಹೆಕ್ಕುತ್ತ ಪೋಣಿಸುತ್ತ ಭಾಷೆ ಕಲಿಯುತ್ತದೆ. ಮಗುವನ್ನು ಹಿಂದೆ ಮುಂದೆ ತೂಗುತ್ತ “ಆನೆ ಬಂತೊಂದಾನೆ’ ಮಾಡುತ್ತಾಳೆ; ಬೆರಳುಗಳನ್ನು ಅದರ ಕಣ್ಮುಂದೆ ತಿರುವುತ್ತ “ತಾರಮ್ಮಯ್ಯ ತಂದುತೋರಮ್ಮಯ್ಯ’, “ತೋಳು ಕೈಯ ತೋಳು’ ಹಾಡುತ್ತಾಳೆ; ಮಗು ಹೇನು ತೆಗೆಯಲು ಬಿಡದಿದ್ದರೆ ಲಯಬದ್ಧವಾಗಿ “ತಟುಪ್ಪೆ ತಾರ್ಕುಪ್ಪೇ, ಅಕ್ಕನ ಮಕ್ಕಳು, ಇಲಿಗುಬ್ಬಿ ಇಲಿಗುಬ್ಬಿ, ಸೀತಮ್ಮದೇವ್ರು ಅಡುಗೆ ಮಾಡ್ತಾರೆ, ರಾಮೆªàವ್ರು ಊಟಕ್ಕೆ ಬರ್ತಾರೆ, ಬನ್ನಿ ಬನ್ನಿ! ಕಳ್ಳನ ಮನೆಯಲ್ಲಿ, ಎಳ್ಳೆಣ್ಣೆ ಬಿಚ್ಚಿಟ್ಟು, ಕಳ್ಳರುಕಾಕರೂ ಪೋಕರು, ಓಡಿ ಬನ್ನಿ ಓಡಿ ಬನ್ನಿ!’ ಎಂದು ಹಾಡುತ್ತ ಉಗುರಲ್ಲಿ ಶ್! ಎಂದು ಹೇನನ್ನುಗೀರಿ, ರಾತ್ರಿ ನಿದ್ದೆಯಲ್ಲಿಯೇ ಸಮುದ್ರಕ್ಕೆ ಎಳ್ಕೊಂಡು ಹೋಗ್ತವೇ ನೋಡು! ಪದಗಳಲ್ಲೇ ಹಿಡಿದಿಟ್ಟು ತಲೆಬಾಚುತ್ತಾಳೆ ಅಜ್ಜಿ. ಹೆಗಲಲ್ಲಿ ಹೊತ್ತು ಊರು ಸುತ್ತಿಸುತ್ತ ಲೋಕವನ್ನೇ ಕೊಡಿಸುತ್ತಾನೆ ಅಜ್ಜ.
ಹಿಂದೆ ಒಂದೇ ಸೂರಿನಡಿಯಲ್ಲಿ ಐವತ್ತು ಅರುವತ್ತು ಮಂದಿ ಕೂಡಿಬಾಳುತ್ತಿದ್ದರು. ನಮ್ಮ ತಂದೆ-ತಾಯಿ ಮಾತ್ರವಲ್ಲ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ. ಬೇರೆ ಬೇರೆ ಮನೆಗಳಿಂದ ಮದುವೆಯಾಗಿ ಬಂದ ಹೆಂಗಸರೆಲ್ಲ ಹೊಂದಿಕೊಂಡು ಬದುಕುತ್ತಿದ್ದರು, ಹಂಚಿತಿನ್ನುತ್ತಿದ್ದರು. ನೂರು ಕೇಜಿ ತೂಕವನ್ನು ಹತ್ತುಮಂದಿ ಹಂಚಿಕೊಂಡು ಹೊತ್ತರೆ ಹಗುರವಲ್ಲವೆ? ಇದರಿಂದ ಪ್ರತಿಯೊಬ್ಬನ ಕುಂದುಕೊರತೆಯನ್ನು ಸಹಿಸುವ ಸಹನೆ ಸಹಿಷ್ಣುತೆ ಕಲಿತರು. ಮಗುವಿಗೆ ಎಣೆ°ತಿಕ್ಕಿ ಮೀಯಿಸಿ ಹೊರರೂಪದೊಂದಿಗೆ ಒಳರೂಪವನ್ನೂ ತಿದ್ದಿ ತೀಡುತ್ತಿದ್ದಳು ಅಜ್ಜಿ , ಕತೆಗಳು ಮಕ್ಕಳ ಕಲ್ಪನೆಗಳನ್ನು ಅರಳಿಸುತ್ತಿದ್ದವು. ಎಲ್ಲರ ಪ್ರೀತಿ ಪಡೆಯುತ್ತಿದ್ದ ಮಕ್ಕಳು ಇಡೀಜಗತ್ತನ್ನೇ ಪ್ರೀತಿಸಲು ಕಲಿಯುತ್ತಿದ್ದರು. ನಾನು ನನ್ನದು ಎಂಬ ಸ್ವಾರ್ಥಕ್ಕಾಗಿ ಬದುಕುವುದು ಆದಷ್ಟು ಕಡಿಮೆಯಾಗಿ ಬೇರೆಯವರಿಗಾಗಿ ಬದುಕುವ ಸಾಮಾಜಿಕ ಜವಾಬ್ದಾರಿ ಮನೆಯಲ್ಲೇ ಶುರುವಾಯಿತು.ಇಂತಹ ಬದುಕಲ್ಲಿ ತೃಪ್ತಿಯಿತ್ತು. ಪ್ರೀತಿಯ ಬೆಲೆ ಹೆಚ್ಚಿಸಿ ಸ್ವಾರ್ಥದ ತೀವ್ರತೆಯನ್ನು ಕಡಿಮೆ ಮಾಡಿತ್ತು ಕೂಡುಕುಟುಂಬ. ಯಾವಾಗ ಈ ಅವಿಭಕ್ತ ಕುಟುಂಬದ ಬುಡಕ್ಕೇ ಕೊಡಲಿ ಬಿತ್ತೋ, ಮನುಷ್ಯ ಪ್ರೀತಿಯ ಬದಲು ಸ್ವಾರ್ಥಕಲಿತ, ಕೊಡುವ ಬದಲು ಬಯಸಲು ಕಲಿತ.
ಪುಟಗಳ ಎಡೆಯಲ್ಲಿ ನವಿಲುಗರಿ ಹಪ್ಪಳದೆಲೆಯಿಟ್ಟು “ಮರಿ ಹಾಕಿತೇ?’ ಎಂದು ನೋಡುತ್ತಿದ್ದ ಕಾಲವನ್ನು ದಾಟಿ “ನೋಟುಗಳು ಮರಿ ಹಾಕಿತೇ?’ ಎಂದು ನೋಡುವ ಯಂತ್ರಕಾಲದ ತುತ್ತತುದಿಯಲ್ಲಿ ನಿಂತಿದ್ದೇವೆ. ನನ್ನ ಒಬ್ಬ ಮಗ ಅಮೆರಿಕದಲ್ಲಿದ್ದಾನೆ, ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿದ್ದಾನೆ ಎಂಬುದನ್ನೂ ದಾಟಿ ಗುರುಗ್ರಹದಲ್ಲೊಬ್ಬ ಶನಿಗ್ರಹದಲ್ಲಿ ಇನ್ನೊಬ್ಬನೆನ್ನುವ ಕಾಲವೂ ಬರಬಹುದು. ಆಸ್ತಿಯೊಡನೆ ಮಕ್ಕಳು ಅಪ್ಪ-ಅಮ್ಮನನ್ನೂ ಹಂಚಿಕೊಳ್ಳುತ್ತಿದ್ದಾರೆ, ಕತ್ತೆಚಾಕರಿ ಮಾಡುತ್ತ ಮಕ್ಕಳುಮರಿಗಳನ್ನು ನೋಡಿಕೊಳ್ಳುವ ಅಮ್ಮನಿಗೇ ಮಕ್ಕಳ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಉತ್ಸವಮೂರ್ತಿಗಳಂತೆ ಎರಡು ತಿಂಗಳಿಗೊಮ್ಮೆ ಮನೆ ಬದಲಾಯಿಸುತ್ತಿರುತ್ತಾರೆ ಅಪ್ಪ-ಅಮ್ಮ. ಶ್ರವಣಕುಮಾರನ, ರಾಮನ ಪಿತೃಭಕ್ತಿಯ ಕತೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದಿ ಬೆಳೆದ ಸಂಸ್ಕೃತಿ ನಮ್ಮದು. ಈಗ ನಿರ್ಗತಿಕರಾಗಿ ಹಾದಿಬೀದಿಗಳಲ್ಲಿ ಬಿದ್ದುಕೊಂಡಿರುವ ವೃದ್ಧರನ್ನು ಕಂಡೂ ಏನೂ ಮಾಡಲಾಗದ ಸ್ಥಿತಿಯಲ್ಲಿ ನಿಂತಿದ್ದೇವೆ. ವಿದೇಶಗಳಲ್ಲಿ ವೃದ್ಧರ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸುತ್ತವೆಯಂತೆ. ನಮ್ಮ ದೇಶದಲ್ಲಿ ಮಕ್ಕಳೇ ಕೈಬಿಟ್ಟರೆ ಎಲ್ಲಿ ಹೋಗಬೇಕವರು?
ವೃದ್ಧಾಶ್ರಮಗಳು ಮುದುಕರ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದೆ ಎಂಬುದು ಗೌರವದ ಸಂಗತಿಯಾದರೂ ಅವುಗಳ ಸಂಖ್ಯೆ ನಾಯಿಕೊಡೆಗಳಂತೆ ಹೆಚ್ಚುತ್ತಿವೆ ಎನ್ನುವುದು ದೇಶದ ಅನಾರೋಗ್ಯದ ಸೂಚನೆಯಲ್ಲವೆ? ಕಣ್ಣಾಮುಚ್ಚೆ ಆಡಿಸುತ್ತಿದ್ದ ಹೆತ್ತವರನ್ನು ಕಣ್ಣುಕಟ್ಟಿ ಆಶ್ರಮಕ್ಕೆ ಬಿಡುತ್ತಿದ್ದೇವೆ, ಬೆನ್ನ ಮೇಲೆ ಮಗುವನ್ನು ಉಪ್ಪಿನಮೂಟೆ ಮಾಡಿ ಆಡಿಸುತ್ತಿದ್ದ ಮುಪ್ಪಿನ ಉದ್ದಿನಮೂಟೆಗಳು ಕಣ್ಮುಂದೆಯೇ ಉರುಳಿ ಬೀಳುತ್ತಿವೆ. ವಿದ್ಯಾವಂತರಾಗುವುದೆಂದರೆ ಸಂಸ್ಕಾರಹೀನರಾಗುವುದೇ? ಮೊನ್ನೆ ಮೊನ್ನೆ ವ್ರದ್ಧಾಶ್ರಮವೊಂದರಲ್ಲಿ ಅಜ್ಜಿಯೊಬ್ಬರು ಜೋಗುಳ ಹಾಡುತ್ತ ಸೀರೆಯ ಜೋಲಿಯನ್ನು ಜೋಜೋ ತೂಗುತ್ತಿದ್ದರು. ಅದರೊಳಗೆ ಹೆಣ್ಣುಗೊಂಬೆಯೊಂದು ಗಾಳಿಗೆ ಕಣ್ಣೆವೆಗಳನ್ನು ಮುಚ್ಚಿತೆರೆಯುತಿತ್ತು. ಅಜ್ಜ ಹೊರಬಾಗಿಲಲ್ಲಿ ಸೂಟ್‌ಕೇಸ್ ಹಿಡಿದು ನಿನ್ನೆಯಂತೆ ಇಂದು ಕೂಡ ಯಾರನ್ನೋ ಕಾಯುತ್ತಿದ್ದರು.
ಕಾತ್ಯಾಯಿನಿ ಕುಂಜಿಬೆಟ್ಟು