Advertisement

ಅಜ್ಜಿ, ಯಾಕಿಷ್ಟು ಕಷ್ಟ ಪಡ್ತಿದ್ದೀರಾ? 

09:07 AM Jan 02, 2018 | |

ಅಂದು ಭಾನುವಾರ. ಮೆಸ್‌ಗೆ ರಜೆಯಿದ್ದ ಕಾರಣ ಹೊರಗಡೆ ಊಟ ಮಾಡಿದರಾಯಿತೆಂದು ನಿರ್ಧರಿಸಿ ಹೋಟೆಲಿಗೆ ಹೊರಟಿದ್ದೆ. ಆಗ ಒಬ್ಬಳು ವೃದ್ಧೆ ಸುಡು ಸುಡು ಬಿಸಿಲಿನಲ್ಲಿಯೂ ಬುಟ್ಟಿಯಲ್ಲಿ ಬಾಳೆಹಣ್ಣುಗಳನ್ನಿಟ್ಟಕೊಂಡು ಕುಳಿತಿದ್ದನ್ನು ಗಮನಿಸಿದೆ. ಆ ಅಜ್ಜಿಯನ್ನು ನೋಡಿ ಅಯ್ಯೋ ಅನಿಸಿತು. ಒಂದು ಕ್ಷಣ ಯೋಚಿಸಿ ಹೊಟೇಲಿನಲ್ಲಿ ಕರಿದ ತಿಂಡಿ ತಿನ್ನುವ ಬದಲು ಈ ಅಜ್ಜಿಯ ಬಳಿ ಬಾಳೆಹಣ್ಣು ಖರೀದಿಸಿ ತಿಂದರಾಯ್ತು. ಹೊಟ್ಟೆಯೂ ತುಂಬುತ್ತದೆ, ಜೊತೆಗೆ ಅಜ್ಜಿಯ ಬಳಿ ವ್ಯಾಪಾರ ಮಾಡಿದ ಹಾಗೂ ಆಗುತ್ತದೆ ಎಂದುಕೊಂಡು ಬಾಳೆಹಣ್ಣು ಕೊಂಡು ಅಜ್ಜಿಯ ಇತ್ಯೋಪರಿ ವಿಚಾರಿಸುತ್ತಾ ಅಲ್ಲೇ ನಿಂತೆ. 

Advertisement

“ಈ ವಯಸ್ಸಲ್ಲಿ ಮನೆಯಲ್ಲಿ ಇರಬಹುದಲ್ಲಾ, ಯಾಕಿಷ್ಟು ಕಷ್ಟಪಡ್ತಿದ್ದೀರಾ? ಮಕ್ಕಳು ಮೊಮ್ಮಕ್ಕಳು ಯಾರು ಇಲ್ಲವಾ?’ ಎಂದು ಮಾತಿಗೆಳೆದೆ. ಅದಕ್ಕವರು “ಮಕ್ಕಳೆಲ್ಲ ರೆಕ್ಕೆ ಬಲಿತ ಹಕ್ಕಿ ಥರ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ. ಊರಲ್ಲಿ ಒಂಟಿ ಜೀವ ನಾನು. ಬೆಳಿಗ್ಗೆ ಬೇಗನೆ ಎದ್ದು ಬಸ್ಸು ಹಿಡಿದು ಸಂಜೆವರೆಗೂ ಹಣ್ಣು ಮಾರಾಟ ಮಾಡ್ತೀನಿ. ಆವತ್ತಿನ ತುತ್ತಿನ ಚೀಲ ತುಂಬುತ್ತೆ. ಅಷ್ಟು ಸಾಕು, ಜೀವನಕ್ಕೆ ಏನು ತೊಂದರೆಯಿಲ್ಲ’ ಎಂದಳು. ಇದನ್ನು ಕೇಳಿದೊಡನೆ ಮನಸ್ಸು  ಭಾರವೆನಿಸಿ ಕಣ್ಣು ನೀರಾಡಿತು. 

ಆ ದಿನ ಪೂರ್ತಿ ಅಜ್ಜಿಯ ಮಾತುಗಳೇ ನನ್ನನ್ನು ಕಾಡಿದವು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅವರ ಪ್ರೀತಿ ಸಿಗದೆ ಅದೆಷ್ಟೋ ಜನರು ಪರಿತಪಿಸುತ್ತಿದ್ದಾರೆ. ಮತ್ತು ಉದ್ಯೋಗವಿಲ್ಲ ಎಂದು ದಿನನಿತ್ಯ ಬಡಬಡಿಸುವ ಯುವಕರಿಗೆ ಸಿನಿಮಾ ನಟರು, ರಾಜಕಾರಣಿಗಳ ಬದಲು ದಣಿವರಿಯದೆ ಬೆವರು ಸುರಿಸಿ ದುಡಿಯುತ್ತಿರುವ ಇಂಥ ಸಾಮಾನ್ಯ ಹಿರಿಜೀವಗಳ ಸ್ವಾವಲಂಬಿ ಬದುಕು ನಮಗೆ ಸ್ಪೂರ್ತಿಯಾಗಬೇಕು. ಇವರಿಂದಲೇ ಕಲಿಯುವುದು ಸಾಕಷ್ಟಿದೆ ಅಲ್ಲವೇ?

ಅಂಬಿ ಎಸ್‌. ಹಯ್ನಾಳ್‌

Advertisement

Udayavani is now on Telegram. Click here to join our channel and stay updated with the latest news.

Next