ಕೊಪ್ಪ: ಹರಿಹರಪುರ ಶ್ರೀಮಠದ ಶ್ರೀ ಲಕ್ಷ್ಮೀನರಸಿಂಹ ಮತ್ತು ಶಾರದಾ ಪರಮೇಶ್ವರಿ ದೇವಸ್ಥಾನಗಳ ಮಹಾಕುಂಭಾಭಿಷೇಕ ಭಕ್ತಸಾಗರದ ಜಯಘೋಷದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 8-20ಕ್ಕೆ ಶುಭ ವೃಷಭ ಲಗ್ನದಲ್ಲಿ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ದರ್ಮಪೀಠದ ಪ|ಪೂ| ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಮಹಾಕುಂಭಾಭಿಷೇಕ ನೆರವೇರಿತು.
ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಮತ್ತು ಶ್ರೀ ಶಾರದಾ ಪರಮೇಶ್ವರಿ ದೇವಸ್ಥಾನಗಳ ಪುನಃಪ್ರತಿಷ್ಠೆ, ಮಹಾಕುಂಭಾಭಿಷೇಕ, ಮಹಾದ್ವಾರದ ಕುಂಭಾಭಿಷೇಕ ನೆರವೇರಿತು. ಕುಂಭಾಭಿಷೇಕದ ಸಂದರ್ಭ ದೇವಸ್ಥಾನ ಹಾಗೂ ಮಹಾದ್ವಾರದ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳ ಸಡಗರ ಪರಾಕಾಷ್ಠೆ ತಲುಪಿತ್ತು. ಜಯಘೋಷಗಳನ್ನು ಹಾಕುತ್ತಾ ಕುಣಿದಾಡಿದರು. ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾ ದಿಗಳು ಆಗಮಿಸಿದ್ದರು. ಅಕ್ಕಪಕ್ಕದ ಜಿಲ್ಲೆಗಳಿಂದ ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾ ದಿಗಳನ್ನು ಕಾಲು ತೊಳೆದು ಅಕ್ಷತೆ ನೀಡುವ ಮೂಲಕ ಸ್ವಾಗತಿಸಲಾಯಿತು. ಭಕ್ತಾ ದಿಗಳಿಗೆ ಮಠದ ವತಿಯಿಂದ ಪಾನಕ, ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು.
ತಮಿಳುನಾಡಿನಿಂದ ಆಗಮಿಸಿದ್ದ ಬ್ರಹ್ಮಾತ್ಮಾನಂದ ಸ್ವಾಮೀಜಿ, ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ದಂಪತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ದಂಪತಿ, ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಮೈಸೂರು ನಗರಪಾಲಿಕೆ ಅಧ್ಯಕ್ಷ ರಾಜೀವ್, ಎಸ್.ಎನ್. ರಾಮಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಶಿ, ಬ್ರಾಹ್ಮಣ ಮಹಸಭಾದ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ, ಮಠದ ಆಡಳಿತಾ ಧಿಕಾರಿ ಬಿ.ಎಸ್. ರವಿಶಂಕರ್, ರಾಘವೇಂದ್ರ ಭಟ್ ಮತ್ತಿತರ ಗಣ್ಯರು ಇದ್ದರು.