Advertisement

ಕಸಾಯಿಖಾನೆಯಿಂದ ಮರಳಿದ ಎತ್ತಿಗೆ ಭರ್ಜರಿ ಬರ್ತ್‌ಡೇ

07:46 PM Jul 02, 2021 | Team Udayavani |

ಧಾರವಾಡ: ಕಸಾಯಿ ಖಾನೆಯಿಂದ ಮರಳಿ ಮನೆಗೆ ತಂದಿದ್ದ ಎತ್ತಿಗೆ ಭರ್ಜರಿ ಹುಟ್ಟುಹಬ್ಬ ಆಚರಿಸುವ ಮೂಲಕ ದೇವರಹುಬ್ಬಳ್ಳಿಯ ಯುವ ರೈತ ಎಲ್ಲರ ಗಮನ ಸೆಳೆದಿದ್ದಾನೆ.

Advertisement

10 ಕೆಜಿ ತೂಕದ ಕೇಕ್‌ನಲ್ಲಿ ಮೈಲಾರಿ ಎಂದು ಎತ್ತಿನ ಹೆಸರು ಬರೆಯಿಸಿ, ಮನೆ ಮುಂದೆ ಪೆಂಡಾಲ್‌ ಹಾಕಿಸಿ, ಇಡೀ ಗ್ರಾಮದ ಜನರಿಗೆ ಸಿಹಿ ಊಟ ನೀಡಿದ ನಾಗಪ್ಪ ಓಮಗಣ್ಣವರ ಎತ್ತಿನ ಹುಟ್ಟುಹಬ್ಬ ಆಚರಿಸಿದ್ದಾನೆ. ಗ್ರಾಮದ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಬಸವನ ಹುಟ್ಟು ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದು, ಬಂಧು-ಬಳಗವೆಲ್ಲ ಯುವ ರೈತನ ಆಸಕ್ತಿಯನ್ನು ಕೊಂಡಾಡಿದ್ದಾರೆ.

ಬರಗಾಲದ ಹಿನ್ನೆಲೆಯಲ್ಲಿ ಬೇರೆ ರೈತರಿಗೆ ಮಾರಿದ್ದ ಎತ್ತನ್ನು ಆ ರೈತ ಕಟುಕರಿಗೆ ಮಾರಿದ್ದ. ಆದರೆ ವಧಾಗಾರದ ಮುಂದೆ ನಿಂತಿದ್ದ ಎತ್ತು ತನ್ನ ಮಾಲೀಕ ಸಂತೆಯಲ್ಲಿ ನಿಂತಿದ್ದಾಗ ಗುರುತು ಹಿಡಿದು ಕೂಗಿ ಅಳಲಾರಂಭಿಸಿತ್ತು. ಎತ್ತಿನ ಸಂಕಟ ನೋಡಿದ ರೈತ ಸಾಲ ಮಾಡಿ ಕಟುಕರಿಗೆ ಹಣ ಹಿಂತಿರುಗಿಸಿ ಎತ್ತನ್ನು ಮರಳಿ ಮನೆಗೆ ತಂದು ಹುಟ್ಟುಹಬ್ಬವನ್ನು ಆಚರಿಸಿ ಗ್ರಾಮದ ರೈತರಿಂದ ಶಹಭಾಸ್‌ಗಿರಿ ಪಡೆದಿದ್ದಾನೆ. ಉಳವಿ, ಮೈಲಾರ ಮತ್ತು ಯಲ್ಲಮ್ಮನ ಗುಡ್ಡಕ್ಕೆ ಚಕ್ಕಡಿ ಬಂಡಿ ಹೂಡಿಕೊಂಡು ಪ್ರತಿವರ್ಷ ಜಾತ್ರೆಗೆ ಹೋಗುವ ಈ ಕುಟುಂಬ ಸದಸ್ಯರಿಗೆ ಎತ್ತುಗಳ ಮೇಲೆ ಎಲ್ಲಿಲ್ಲದ ಕಾಳಜಿ.

ಮೈಲಾರಿ ಎತ್ತು ಕೂಡ ಅವರ ಮನೆಯಲ್ಲಿ 12 ವರ್ಷಗಳ ಕಾಲ ದುಡಿದಿದೆ. ಗ್ರಾಮದ ಹಿರಿಯರು, ಮುತ್ತೈದೆಯರೆಲ್ಲ ಈ ಬಸವಣ್ಣನ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಎತ್ತಿಗೆ ಕೇಕ್‌ ತಿನ್ನಿಸಿ, ಶಾಲು ಹೊದಿಸಿ ಸನ್ಮಾನಿಸಿದರಲ್ಲದೇ ಹೂವಿನ ಹಾರ ಹಾಕಿ ಅಭಿನಂದಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಗಳ ರೈತರು, ಯಲ್ಲಪ್ಪ ಮತ್ತು ಪರಶುರಾಮ ಓಮಗಣ್ಣವರ ಹಾಗೂ ನಿಂಗಪ್ಪ ಕಳಸಣ್ಣವರ ಕುಟುಂಬದ ಬಂಧು-ಮಿತ್ರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next