Advertisement

ಬಿಂಡಿಗನವಿಲೆಯಲ್ಲಿ ವಿಧಾನಪರಿಷತ್‌ ಸದಸ್ಯ ವಾಸ್ತವ್ಯ :  ಪಿಡಿಒಗಳ ವಿರುದ್ಧ ಸದಸ್ಯರ ದೂರು

03:22 PM Feb 12, 2022 | sudhir |

ನಾಗಮಂಗಲ : ಚುನಾವಣಾ ಪೂರ್ವದಲ್ಲಿ ಮಾತು ಕೊಟ್ಟಂತೆ ನೂತನ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ತಾಲೂಕಿನ ಬಿಂಡಿಗನವಿಲೆ ಗ್ರಾಮ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡಿ ಬಿಂಡಿಗನವಿಲೆ ಹೋಬಳಿ ವ್ಯಾಪ್ತಿಯ ಗ್ರಾಪಂ ಸದಸ್ಯರ ಕುಂದು ಕೊರತೆಗಳನ್ನು ಆಲಿಸಿದರು.

Advertisement

ವಿಫ‌ಲವಾಗುತ್ತಿದ್ದೇವೆ: ಬಿಂಡಿಗನವಿಲೆ ಗ್ರಾಪಂನಲ್ಲಿ ಗುರುವಾರ ಸಭೆ ನಡೆಸಿದ ವೇಳೆ ಗ್ರಾಪಂ ಸದಸ್ಯರು ಹಲವು ಸಮಸ್ಯೆಗಳನ್ನು ಬಿಚ್ಚಿಟ್ಟರು. ಸಭೆಯ ಅಧ್ಯಕ್ಷತೆ ದಿನೇಶ್‌ ಗೂಳಿಗೌಡ ವಹಿಸಿದ್ದರು. ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಸುರಿಮಳೆಯನ್ನ ಸುರಿಸಿದರು. ನೂತನ ಗ್ರಾಮ ಪಂಚಾಯತಿ ಆಡಳಿತ ಬಂದು ವರ್ಷ ಕಳೆಯುತ್ತಿದ್ದರೂ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಜನತೆಗೆ ಕೊಟ್ಟ ಮಾತನ್ನು ನಡೆಸಿಕೊಡುವಲ್ಲಿ ವಿಫ‌ಲವಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಅಭಿವೃದ್ಧಿ ಮಾಡಲಾಗುತ್ತಿಲ್ಲ: ಪಂಚಾಯಿತಿಗೆ ಸರ್ಕಾರದಿಂದ ಬರುವ ಅನುದಾನವನ್ನು ಜಲ್‌ಜೀವನ್‌ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮ ಅಭಿವೃದ್ಧಿಗೆಂದು ಅನುದಾನವನ್ನು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ.

ಇದರಿಂದ ಗ್ರಾಮಗಳ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒಗಳ ವಿರುದ್ಧ ಕಿಡಿ: ಪಂಚಾಯಿತಿಯಲ್ಲಿ ನಡೆಯುವ ಸಾಮಾನ್ಯ ಸಭೆಯ ನಡಾವಳಿಯನ್ನು ಸದಸ್ಯರೆಲ್ಲರ ಸಮಕ್ಷಮ ಬರೆಯುವುದಿಲ್ಲ. ಅಭಿವೃದ್ಧಿ ಅಧಿಕಾರಿಗಳು ತಮಗಿಷ್ಟ ಬಂದಾಗ ತಮ್ಮಿಷ್ಟದಂತೆ ಬರೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಚರ್ಚೆಯಾಗುವ ವಿಷಯವೇ ಒಂದಾದರೆ, ನಡಾವಳಿಯಲ್ಲಿ ಬರೆ ಯುವುದೇ ಇನ್ನೊಂದು. ಗ್ರಾಪಂ ಸದಸ್ಯರನ್ನು ಪಿಡಿಒಗಳು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ
ವಿರುದ್ಧ ಹರಿಹಾಯ್ದರು.

ಜನಸಾಮಾನ್ಯರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಅಹವಾಲು ಸ್ವೀಕರಿಸಿದ ವಿಧಾನ ಪರಿಷತ್‌ ಸದಸ್ಯ ದಿನೇಶ್‌, ನಿಜವಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲೆಂದೇ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡುತ್ತಿದ್ದು, ಸದಸ್ಯರು ಸಲ್ಲಿಸಿರುವ ಎಲ್ಲಾ ಅಹವಾಲುಗಳ ಅರಿವು ನನಗೆ ತಿಳಿದಿದೆ.

Advertisement

ಸ್ಥಳೀಯವಾಗಿ ಎಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೋ ಇಲ್ಲೇ ಪರಿಹರಿಸಿ, ಸರ್ಕಾರದ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದು ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಬಿಂಡಿಗನವಿಲೆ ಗ್ರಾಮಕ್ಕೆ ಆಗಮಿಸಿದ ವಿಧಾನಪರಿಷತ್‌ ಸದಸ್ಯರನ್ನು ಗ್ರಾಪಂ ಸದಸ್ಯರು, ಅಭಿಮಾನಿಗಳು ಪಟಾಕಿ ಸಿಡಿಸಿ ಸ್ವಾಗತಿಸಿದರು. ಗ್ರಾಮದ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಗ್ರಾಪಂ ಕಚೇರಿಗೆ ಕರೆದುಕೊಂಡು ಬಂದರು. ಅಲ್ಲಿ ಪಂಚಾಯಿತಿ ಅಧಿಕಾರಿಗಳು ಸ್ವಾಗತ ಕೋರಿದರು. ಬಿಂಡಿಗನವಿಲೆ ಗ್ರಾಪಂ ಅಧ್ಯಕ್ಷ ಸುಪ್ರೀತ್‌ ಕುಮಾರ್‌, ಹಿರಿಯ ತೋಟಗಾರಿಕೆಯ ಸಹಾಯಕ ನಿರ್ದೇಶಕಿ ಶಾಂತ, ಕೃಷಿ ಅಧಿಕಾರಿ ದಯಾನಂದ್‌, ಗ್ರಾಮ ಲೆಕ್ಕಿಗ ಗುಂಡೂರಾವ್‌ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next