Advertisement

ಚಾಮರಾಜನಗರ: ಗೆದ್ದ ಅಭ್ಯರ್ಥಿ ಸೋತರು, ಸೋತ ಅಭ್ಯರ್ಥಿ ಗೆದ್ದರು!

01:58 AM Dec 31, 2020 | Team Udayavani |

ಚಾಮರಾಜನಗರ: ಕೆಲವೊಮ್ಮೆ ಅದೃಷ್ಟವಿಲ್ಲದಿದ್ದರೆ ಎಲ್ಲ ಪ್ರಯತ್ನ ವ್ಯರ್ಥ ಎಂಬ ಮಾತಿದೆ. ಅದಕ್ಕೆ ಇಲ್ಲಿದೆ ಒಂದು ನಿದರ್ಶನ. ತಾಲೂಕಿನ ಅರಕಲವಾಡಿ ಗ್ರಾ.ಪಂ.ನಲ್ಲಿ ಅಭ್ಯರ್ಥಿಯೊಬ್ಬರು ಗೆದ್ದರೂ, ಮೀಸಲು ಸ್ಥಾನದ ಮಹಿಳಾ ಅಭ್ಯರ್ಥಿಯೊಂದಿಗೆ ಲಾಟರಿ ಮೂಲಕ ನಡೆದ ಪೈಪೋಟಿಯಲ್ಲಿ ಸೋತ ಘಟನೆ ನಡೆಯಿತು.

Advertisement

ಅರಕಲವಾಡಿ ಗ್ರಾಮದ ಒಂದನೇ ಬ್ಲಾಕ್‌ನಲ್ಲಿ ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಮೀಸಲು ಸ್ಥಾನಗಳಿವೆ. ಸಾಮಾನ್ಯ ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಮಹದೇವಸ್ವಾಮಿ (ಮಂಜುನಾಥ್) ಹಾಗೂ ಬಿಜೆಪಿ ಬೆಂಬಲಿತ ಬಿ. ಕುಮಾರ್ ಸ್ಪರ್ಧಿಸಿದ್ದರು.

ಸಾಮಾನ್ಯ ಮಹಿಳಾ ಮೀಸಲು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ದಾಕ್ಷಾಯಿಣಿ ಹಾಗೂ ಕಾಂಗ್ರೆಸ್ ಬೆಂಬಲಿತ ರೂಪಾ ಸ್ಪರ್ಧಿಸಿದ್ದರು.

ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಬಿ. ಕುಮಾರ್ 368 ಮತಗಳನ್ನು ಗಳಿಸಿ ಗೆದ್ದರು. ಸೋತ ಮಹದೇವಸ್ವಾಮಿ 366 ಮತ ಪಡೆದರು.ಕೇವಲ 2 ಮತಗಳ ಅಂತರದಿಂದ ಕುಮಾರ್ ಗೆದ್ದಿದ್ದರು. ಅವರ ಗೆಲುವಿನ ಹರ್ಷ ಹೆಚ್ಚು ಕಾಲ ಉಳಿಯಲಿಲ್ಲ.

ಅತ್ತ, ಸಾಮಾನ್ಯ ಮಹಿಳಾ ಮೀಸಲು ಸ್ಥಾನದಲ್ಲಿ ದಾಕ್ಷಾಯಿಣಿ 384 ಮತ ಪಡೆದು ರೂಪಾ ವಿರುದ್ಧ ಜಯಗಳಿಸಿದ್ದರು. ಸೋತ ರೂಪಾ 368 ಮತಗಳನ್ನು ಪಡೆದಿದ್ದರು.

Advertisement

ಮೀಸಲಾತಿ ನಿಯಮದಂತೆ ಮೀಸಲು ಸ್ಥಾನದಿಂದ ಸೋತವರು ಸಾಮಾನ್ಯ ಸ್ಥಾನದ ಅಭ್ಯರ್ಥಿಗಳಾಗಿ ಪರಿವರ್ತನೆಯಾಗುತ್ತಾರೆ. ಸೋತವರು ಪಡೆದ ಮತ ಸಾಮಾನ್ಯ ಕ್ಷೇತ್ರದ ಗೆದ್ದ ಅಭ್ಯರ್ಥಿ ಪಡೆದ ಮತಕ್ಕಿಂತ ಹೆಚ್ಚಿದ್ದರೆ, ಮೀಸಲಿನಿಂದ ಬಂದ ಅಭ್ಯರ್ಥಿ ಜಯಗಳಿಸುತ್ತಾರೆ. ಇಲ್ಲಿ ಈ ನಿಯಮ ಅನ್ವಯಿಸಿದಾಗ ಬಿ. ಕುಮಾರ್ ಹಾಗೂ ರೂಪಾ ಅವರಿಗೆ ತಲಾ 368 ಮತಗಳು ಬಂದಿದ್ದವು! ಆಗ ಲಾಟರಿ ಮೂಲಕ ಆಯ್ಕೆ ನಡೆಯಿತು. ಲಾಟರಿಯಲ್ಲಿ ರೂಪಾ ಗೆದ್ದರು! ಇತ್ತ ಗೆದ್ದಿದ್ದರೂ ಕುಮಾರ್ ಸೋತರು. ಸೋತಿದ್ದರೂ ರೂಪಾ ಗೆದ್ದರು!

Advertisement

Udayavani is now on Telegram. Click here to join our channel and stay updated with the latest news.

Next