ನಿರೀಕ್ಷೆಯಂತೆ ಕೋವಿಡ್ ಸಂದರ್ಭದ ನೆಪವೊಡ್ಡಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ರಾಜ್ಯ ಸರಕಾರ ಚುನಾವಣ ಆಯೋಗಕ್ಕೆ ಮತ್ತೂಂದು ಪತ್ರ ಬರೆದಿದೆ. ಆಶ್ಚರ್ಯ ಎಂದರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಹ ಚುನಾವಣೆ ಮುಂದೂಡಿಕೆಗೆ ದನಿಗೂಡಿಸಿವೆ.
ಚುನಾವಣೆ ನಡೆಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದವರೇ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ. ಇದೀಗ ಕಾಂಗ್ರೆಸ್ ಕೂಡ ಚುನಾವಣೆ ಮುಂದೂಡಲು ಆಯೋಗಕ್ಕೆ ಮನವಿ ಮಾಡಿದೆ. ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸಿ ಸಜ್ಜಾಗಿದ್ದ ಚುನಾವಣ ಆಯೋಗವೂ ಮುಂದೂಡಿಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೂ ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರ ಸರಕಾರ ಚುನಾವಣೆ ನಡೆಸುವ ಸಂಬಂಧ ನೀಡಲಾಗಿರುವ ಮಾರ್ಗದರ್ಶಿಗಳನ್ನೂ ಸೂಕ್ತವಾಗಿ ಪಾಲಿಸಲು ಸಿದ್ಧರಿದ್ದೇವೆ ಎಂದು ಈ ಹಿಂದೆಯೇ ಆಯೋಗ ಸ್ಪಷ್ಟವಾಗಿ ಹೇಳಿದೆ.
ವಿಕೇಂದ್ರೀಕರಣ ವ್ಯವಸ್ಥೆಯ ಬಹುಮುಖ್ಯ ಅಂಗವಾಗಿರುವ ಗ್ರಾಮ ಪಂಚಾಯತ್ಗಳ ಅವಧಿ ಮುಗಿದು ಐದಾರು ತಿಂಗಳು ಕಳೆದರೂ ಚುನಾವಣೆ ನಡೆದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ಬೇಡ ಎಂಬುದು ಸರಕಾರ ಹಾಗೂ ರಾಜಕೀಯ ಪಕ್ಷಗಳ ವಾದ. ಆದರೆ ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಟ್ಟಿರುವಾಗ ಗ್ರಾಮ ಪಂಚಾಯತ್ ಚುನಾವಣೆ ಯಾಕೆ ಬೇಡ ಎಂಬುದು ಗ್ರಾಮೀಣ ಭಾಗದ ಜನರ ಪ್ರಶ್ನೆ. ಅಷ್ಟೇ ಅಲ್ಲ, ಉತ್ತರ ಭಾರತದಲ್ಲಿನ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯನ್ನೇ ನಡೆಸಲಾಗುತ್ತಿದೆ. ರಾಜ್ಯವ್ಯಾಪಿ ಚುನಾವಣೆ ನಡೆಸುವಾಗ ಗ್ರಾಮಗಳ ಚುನಾವಣೆ ನಡೆಸುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಚುನಾವಣೆ ನಡೆಸಲು ನಾವು ತಯಾರಿದ್ದೇವೆ ಎಂದು ಹೇಳುತ್ತಲೇ ಚುನಾವಣೆ ಮುಂದೂಡಿಕೆಗೆ ಆಯೋಗಕ್ಕೆ ಪತ್ರ ಬರೆದಿರುವ ಸರಕಾರದ ನಿಲುವು ಅನುಮಾನಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಯಾಕೆ ನಡೆಸುತ್ತಿಲ್ಲ ಎಂದು ಗ್ರಾಮೀಣ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ. ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆದರೆ ಅಭಿವೃದ್ಧಿ ಯೋಜನೆಗಳಿಗೂ ವೇಗ ಸಿಗುತ್ತದೆ. ಜನಪ್ರತಿನಿಧಿಗಳು ಇಲ್ಲದಿದ್ದರೆ ಸ್ಥಳೀಯ ಆಡಳಿತ ವ್ಯವಸ್ಥೆ ಇಲ್ಲದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗುತ್ತದೆ ಎಂಬುದು ಅವರ ಪ್ರತಿಪಾದನೆ.
ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಹಾಗೂ ಸಾಮಾನ್ಯ ಜನರ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುವಲ್ಲಿ ವ್ಯತ್ಯಾಸಗಳಾಗುತ್ತಿವೆ ಎಂಬ ಆರೋಪವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸದಿರುವುದು ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವೂ ಹೌದು.
ಅಷ್ಟೇ ಅಲ್ಲ ಈಗಂತೂ ಹಳ್ಳಿ ಹಳ್ಳಿಗಳಿಗೆ ಕೊರೊನಾ ವೈರಸ್ ಸೋಂಕು ತಲುಪುತ್ತಿದೆ. ಇಂಥ ಕಾಲದಲ್ಲಿ ಕೊರೊನಾ ನಿಯಂತ್ರಣ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗಿಂತ ಜನಪ್ರತಿನಿಧಿಗಳಿದ್ದರೆ ವಾಸಿಯಿತ್ತು ಎಂಬುದು ಜನರ ಅಭಿಪ್ರಾಯ. ಈ ನಿಟ್ಟಿನಲ್ಲಾದರೂ ಸರಕಾರ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಬಹುದಿತ್ತು.
ಈ ಮಧ್ಯೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಬಹುತೇಕ ಕಡೆಗಳಲ್ಲಿ ಗ್ರಾಮ ಸಭೆಗಳೇ ನಡೆದಿಲ್ಲ. ಗ್ರಾಮಸಭೆಗಳು ನಡೆಯದಿದ್ದರೆ ಸರಕಾರದ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯೂ ಕಷ್ಟವಾಗುತ್ತಿದೆ. ಇಷ್ಟೆಲ್ಲ ವಾಸ್ತವ ಸಂಗತಿಗಳು ಇದ್ದರೂ ಸರಕಾರ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.