Advertisement

ನಾಮಪತ್ರ ಸಲ್ಲಿಕೆ ಜತೆಗೆ ಮನೆಮನೆ ಪ್ರಚಾರವೂ ಬಿರುಸು

09:39 PM Dec 14, 2020 | mahesh |

ಕುಂದಾಪುರ: ಹಳ್ಳಿ ಹಳ್ಳಿಗಳಲ್ಲೂ ಚುನಾವಣ ಕಣ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಕಾರ್ಯ ಬಿರುಸು ಪಡೆದಿದೆ. ಡಿ. 27ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕುಂದಾಪುರ ತಾಲೂಕಿನ ಹಾರ್ದಳ್ಳಿ – ಮಂಡಳ್ಳಿ, ಹೊಂಬಾಡಿ – ಮಂಡಾಡಿ, ಮೊಳಹಳ್ಳಿ, ಹಾಲಾಡಿ, ಶಂಕರನಾರಾಯಣ ಹಾಗೂ ಅಂಪಾರು ಗ್ರಾ.ಪಂ.ಗಳ ಪೈಕಿ ಕೆಲವೆಡೆ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತರ ನಡುವೆ ನೇರ ಸ್ಪರ್ಧೆಯಿದ್ದರೆ, ಮತ್ತೆ ಕೆಲವೆಡೆ ಪಕ್ಷೇತರರೂ ಸೇರಿ ತ್ರಿಕೋನ ಸ್ಪರ್ಧೆಯ ವಾತಾವರಣವಿರುವುದು “ಉದಯವಾಣಿ’ಯ ಗ್ರಾಮ ಸುತ್ತಾಟದಲ್ಲಿ ಕಂಡುಬಂತು.

Advertisement

ಹಾಲಾಡಿ: ಪಕ್ಷೇತರರ ಪ್ರಬಲ ಪೈಪೋಟಿ?
ಈ ಭಾಗದ ದೊಡ್ಡ ಪಂಚಾಯತ್‌ಗಳಲ್ಲಿ ಒಂದಾಗಿರುವ ಹಾಲಾಡಿಯಲ್ಲಿ 4 ವಾರ್ಡ್‌ಗಳಿದ್ದು, 11 ಸ್ಥಾನಗಳಿವೆ. ಕಳೆದ ಬಾರಿ 8 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಮೂವರು ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಹಿಂದಿನಿಂದಲೂ ಈ ಎರಡು ಪಕ್ಷಗಳ ಬೆಂಬಲಿತರ ಮಧ್ಯೆಯೇ ಪೈಪೋಟಿ ನಡೆಯುತ್ತಿತ್ತು. ಆದರೆ ಈ ಬಾರಿ 8 ಮಂದಿ ಪಕ್ಷೇತರರು ಕಣಕ್ಕಿಳಿದಿದ್ದು, ಇಡೀ ಚಿತ್ರಣವೇ ಬದಲಾಗುವ ಸಾಧ್ಯತೆ ಕಂಡು ಬರುತ್ತಿದೆ.

ಪ್ರಮುಖವಾಗಿ ಜಾಗದ ಸಮಸ್ಯೆಯಿಂದಾಗಿ ಹಾಲಾಡಿ ಸರ್ಕಲ್‌ ನಿರ್ಮಾಣದ ಬೇಡಿಕೆ ಈಡೇರಿಲ್ಲ. ಬೀದಿ ದೀಪದ ಸಮಸ್ಯೆಯೂ ತೀವ್ರವಾಗಿದ್ದು, ಮಾರುಕಟ್ಟೆ ನಿರ್ಮಾಣಕ್ಕೂ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮೊಳಹಳ್ಳಿ: ನೇರಾನೇರ ಸ್ಪರ್ಧೆ
ಮೊಳಹಳ್ಳಿ ಪಂಚಾಯತ್‌ನಲ್ಲಿ 4 ವಾರ್ಡ್‌ಗಳಿದ್ದು, 11 ಸದಸ್ಯರಿದ್ದಾರೆ. ಕಳೆದ ಬಾರಿ 6ರಲ್ಲಿ ಕಾಂಗ್ರೆಸ್‌ ಹಾಗೂ 5ರಲ್ಲಿ ಬಿಜೆಪಿ ಬೆಂಬಲಿತರು ಜಯಿಸಿದ್ದರು. ಆದರೆ ಹೊಂದಾಣಿಕೆ ಸೂತ್ರ ಹಾಗೂ ಮೀಸಲಾತಿ ಆಧಾರದಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ನಲ್ಲಿತ್ತು. ಈ ಬಾರಿ ಎರಡು ಪಕ್ಷಗಳ ಬೆಂಬಲಿತರ ನಡುವೆ ನೇರಾನೇರ ಸ್ಪರ್ಧೆ ಕಂಡು ಬರುತ್ತಿದೆ. ಕೃಷಿಗೆ ಕಾಡು ಪ್ರಾಣಿಗಳ ಹಾವಳಿ, ನೀರಿನ ಕೊರತೆ ಹಾಗೂ ಬೀದಿ ದೀಪ ಸಮಸ್ಯೆ ಇಲ್ಲಿ ಎದ್ದು ಕಾಣುತ್ತಿದೆ.

ಶಂಕರನಾರಾಯಣ: ಯಾರಿಗೆ ಲಾಭ-ನಷ್ಟ?
ಶಂಕರನಾರಾಯಣ ಗ್ರಾ.ಪಂ.ನಲ್ಲಿ 7 ವಾರ್ಡ್‌ಗಳಿದ್ದು, 18 ಸದಸ್ಯರಿದ್ದಾರೆ. ಕಳೆದ ಬಾರಿ ಇಲ್ಲಿ 10ರಲ್ಲಿ ಕಾಂಗ್ರೆಸ್‌ ಬೆಂಬಲಿಗರು ಹಾಗೂ 8ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ಬಾರಿಯ ಅಧ್ಯಕ್ಷರು ಈಗ ಬಿಜೆಪಿ ಸೇರಿದ್ದಾರೆ. ಈ ಕಾರಣದಿಂದ ಲಾಭ-ನಷ್ಟದ ಲೆಕ್ಕಾಚಾರ ಜೋರಾಗಿದೆ. ಜತೆಗೆ ಕಳೆದ ಬಾರಿ ಸದಸ್ಯರಾಗಿದ್ದು, ಕೆಲವು ದಿನಗಳ ಹಿಂದೆ ಸಾವಿಗೀಡಾಗಿರುವ ಈ ಭಾಗದ ಪ್ರಭಾವಿ ಬಿಜೆಪಿ ಮುಖಂಡ ಹದ್ದೂರು ರಾಜೀವ ಶೆಟ್ಟಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಕೆಲವೆಡೆಗಳಲ್ಲಿ ಪಕ್ಷೇತರರು ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಎತ್ತರದ ಪ್ರದೇಶಕ್ಕೆ ಸರಿಯಾಗಿ ನೀರು ಪೂರೈಕೆ ಯಾಗುತ್ತಿಲ್ಲ ಎಂಬುದು ಇಲ್ಲಿನ ಒಂದು ಪ್ರಮುಖ ಸಮಸ್ಯೆಯಾಗಿದೆ.

Advertisement

ಹೊಂಬಾಡಿ- ಮಂಡಾಡಿ: ತ್ರಿಕೋನ ಸ್ಪರ್ಧೆ ಸಾಧ್ಯತೆ
ಹೊಂಬಾಡಿ – ಮಂಡಾಡಿ, ಯಡಾಡಿ – ಮತ್ಯಾಡಿ ಹಾಗೂ ಜಪ್ತಿಯನ್ನೊಳಗೊಂಡ ಹೊಂಬಾಡಿ – ಮಂಡಾಡಿ ಗ್ರಾ.ಪಂ.ನಲ್ಲಿ 6 ವಾರ್ಡ್‌ಗಳಿದ್ದು, 17 ಸದಸ್ಯರಿದ್ದಾರೆ. ಕಳೆದ ಬಾರಿ 11ರಲ್ಲಿ ಬಿಜೆಪಿ ಬೆಂಬಲಿತರು ಹಾಗೂ 6ರಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಈ ಬಾರಿ ಹೆಚ್ಚಿನ ಕಡೆಗಳಲ್ಲಿ ಪಕ್ಷೇತರರೂ ಕಣದಲ್ಲಿರುವ ಕಾರಣ ತ್ರಿಕೋನ ಸ್ಪರ್ಧೆಯ ಲಕ್ಷಣ ಕಂಡುಬರುತ್ತಿದೆ. ಯಡಾಡಿ – ಮತ್ಯಾಡಿ ಭಾಗದಲ್ಲಿ ನೀರಿನ ಸಮಸ್ಯೆ ಸಹಿತ ಕೆಲವು ಮೂಲಸೌಕರ್ಯ ಸಮಸ್ಯೆಗಳಿವೆ.

ಹಾರ್ದಳ್ಳಿ – ಮಂಡಳ್ಳಿ: ನಿಕಟ ಸ್ಪರ್ಧೆ
ಹಾರ್ದಳ್ಳಿ – ಮಂಡಳ್ಳಿಯಲ್ಲಿ 5 ವಾರ್ಡ್‌ಗಳಿದ್ದು, 13 ಸದಸ್ಯರಿದ್ದಾರೆ. ಕಳೆದ ಬಾರಿ 8ರಲ್ಲಿ ಬಿಜೆಪಿ ಹಾಗೂ 5ರಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಇಲ್ಲಿ 10 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದೆ. ಈ ಬಾರಿ ಎರಡು ಪಕ್ಷಗಳ ಬೆಂಬಲಿತರ ಮಧ್ಯೆಯೇ ನಿಕಟ ಪೈಪೋಟಿಯಿದೆ. ಪಂಚಾಯತ್‌ ಹೊಸ ಕಟ್ಟಡ ನಿರ್ಮಾಣ, ನಿವೇಶನ ಮಂಜೂರಾಗದೆ ಇರುವುದು, ರಸ್ತೆ ಸಮಸ್ಯೆ ಪ್ರಮುಖವಾಗಿದೆ.

ಅಂಪಾರು: ನೇರ ಪೈಪೋಟಿ
ಅಂಪಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 4 ವಾರ್ಡ್‌ಗಳಿದ್ದು, 12 ಸದಸ್ಯರಿದ್ದಾರೆ. ಕಳೆದ ಬಾರಿ 9ರಲ್ಲಿ ಕಾಂಗ್ರೆಸ್‌ ಬೆಂಬಲಿತರು ಹಾಗೂ 3ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಹಿಂದಿನ ಎರಡು ಅವಧಿಯಲ್ಲಿಯೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಈ ಬಾರಿ ಹೆಚ್ಚಿನ ಕಡೆಗಳಲ್ಲಿ ನೇರ ಪೈಪೋಟಿಯಿದ್ದರೂ 2-3 ಕಡೆಗಳಲ್ಲಿ ಪಕ್ಷೇತರರೂ ಕಣದಲ್ಲಿದ್ದಾರೆ. ಕೊನೆಯ ಕ್ಷಣಗಳಲ್ಲಿ ಚಿತ್ರಣ ಬದಲಾದರೂ ಅಚ್ಚರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next