ಹಳೆಯಂಗಡಿ: ಹಳೆಯಂಗಡಿಯ ಮಾರುಕಟ್ಟೆಯಿಂದ ಸಸಿ ಹಿತ್ಲುವಿನ ತಿರುವಿನವರೆಗಿನ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿರು ವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ನಾಗರಿಕರು ತೊಂದರೆ ಅನುಭ ವಿಸುತ್ತಿದ್ದರೂ ಸಹ ಗ್ರಾ.ಪಂ. ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಳೆದ ವಾರ ಉದಯವಾಣಿಯ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ಸಂದರ್ಭ ಹಳೆಯಂಗಡಿ ಗ್ರಾ.ಪಂ.ನ ಪಿಡಿಒ ಪೂರ್ಣಿಮಾ ಅವರು, ಚರಂಡಿಯ ಹೂಳನ್ನು ತೆಗೆಯುವ ಬಗ್ಗೆ ಭರವಸೆ ನೀಡಿದ್ದರು. ಆದರೆ ವಾರ ಕಳೆದರೂ ಸಹ ಪಂಚಾಯತ್‌ನಿಂದ ಯಾವುದೇ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎಂದು ಸ್ಥಳೀಯ ಅಂಗಡಿ ಮಾಲಕರು ತಿಳಿಸಿದ್ದಾರೆ.
ಚರಂಡಿಯ ಹೂಳನ್ನೆ ತೆಗೆಯದಿರುವುದರಿಂದ ಹತ್ತಿರದ ಅಂಗಡಿಗಳ ಒಳಗೆ ನೇರವಾಗಿ ಮಳೆ ನೀರು ನುಗ್ಗುತ್ತಿವೆ. ಹಳೆಯಂಗಡಿಯ ಮಹಿಳಾ ಮತ್ತು ಯುವತಿ ಮಂಡಲದ ಆವರಣಕ್ಕೆ ನೀರು ಹರಿದಿದೆ. ಪಿಸಿಎ ಬ್ಯಾಂಕ್‌ನ ಪಡಿತರ ವಿಭಾಗದಲ್ಲಿ ಗ್ರಾಹಕರು ನಿಲ್ಲುವುದಕ್ಕೂ ಸಾಧ್ಯವಾಗುತ್ತಿಲ್ಲ, ರಸ್ತೆಯ ಅಂಚಿನಲ್ಲಿರುವ ಮನೆಗಳ ಅಂಗಳಕ್ಕೂ ನೀರು ನುಗ್ಗಿವೆ. ಹಲವು ಬಾರಿ ಪಂ.ಗೆ ಕೇಳಿಕೊಂಡರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕವಾಗಿ ಪಂಚಾಯತ್‌ನ್ನು ದೂರುತ್ತಿರುವುದು ಕಂಡು ಬಂದಿದೆ.
ಜಿ.ಪಂ. ಸದಸ್ಯರಿಗೆ ಮಾಹಿತಿ
ಚರಂಡಿಯ ದುರಾವಸ್ಥೆಯಿಂದ ಸುತ್ತಮುತ್ತ ಮಳೆ ನೀರು ಒಳ ನುಗ್ಗುತ್ತಿದೆ. ಸ್ಥಳೀಯರು ಹಲವು ಬಾರಿ ಪಂಚಾಯತ್‌ಗೆ ತಿಳಿಸಿದ್ದಾರೆ. ಕೊನೆಗೆ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು, ಅವರು ಸ್ಥಳ ಪರಿಶೀಲಿಸಿದ್ದಾರೆ.