ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಪಂ ನೌಕರರು ನಗರದ ಜಿಪಂ ಮುಂದೆ ಗುರುವಾರ ಪ್ರತಿಭಟನೆ ನೆಡೆಸಿದರು.
ಸರ್ಕಾರದ ಆದೇಶದಂತೆ ಕನಿಷ್ಠ ವೇತನ, ಬಾಕಿ ವೇತನ ನೀಡಬೇಕು. ಬಾಕಿ ಇರುವ ನೌಕರರನ್ನು ಇಎಫ್ಎಂಎಸ್‌ಗೆ ಸೇರ್ಪಡೆ ಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಗ್ರಾಪಂಗಳಲ್ಲಿ ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್, ನೀರು ವಿತರಕರು, ಸ್ವತ್ಛತೆಗಾರರು ಹಾಗೂ ಜವಾನರು ಹಲವು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರೂ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಹೊಸದಾಗಿ ಕಾನೂನು ಬಾಹಿರವಾಗಿ ಅಕ್ರಮವಾಗಿ ನೇಮಕ ಮಾಡುವುದನ್ನು ತಡೆಯಬೇಕು. ಈಗಾಗಲೇ ಅಕ್ರಮ ನೇಮಕಾತಿ ಮಾಡಿಕೊಂಡಿರುವವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನೇಮಕಾತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಕರ ವಸೂಲಿಗಾರರು ಹಾಗೂ ಕಂಪ್ಯೂಟರ್ ಆಪರೇಟರ್‌ಗಳ ಜೇಷ್ಠತಾ ಪಟ್ಟಿ ಅಂತಿಮಗೊಳಿಸುವುದು ಮತ್ತು ಸರ್ಕಾರದ ಆದೇಶದ ರೀತ್ಯ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಲು ಕ್ರಮ ವಹಿಸಬೇಕು. ಗ್ರಾಪಂಗಳಲ್ಲಿ ಖಾಲಿಯಾದ ಬಿಲ್ ಕಲೆಕ್ಟರ್ ಹುದ್ದಗೆ ಅದೇ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಐದು ವರ್ಷ ಸೇವೆ ಸಲ್ಲಿಸಿರುವ ಎಸ್‌ಎಸ್ ಎಲ್‌ಸಿ ಪಾಸಾದ ಇತರೆ ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್, ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಅರಳಳ್ಳಿ, ಜಿಲ್ಲಾ ಖಜಾಂಚಿ ರಂಗನಾಥ್, ತಿಪಟೂರಿನ ರಾಜು, ಗುಬ್ಬಿ ತಾಲೂಕಿನ ಬಶೀರ್ ಅಹಮದ್, ಕೊರಟಗೆರೆಯ ನಾಗಭೂಷಣ್, ಮಧುಗಿರಿಯ ಸುಬ್ರಮಣ್ಯ, ಕುಣಿಗಲ್‌ನ ಶ್ರೀನಿವಾಸ್ ಮತ್ತು ಶಂಕರ್, ಚಿಕ್ಕನಾಯಕನಹಳ್ಳಿಯ ಲೋಕೇಶ್, ತುಮಕೂರು ತಾಲೂಕು ಅಧ್ಯಕ್ಷ ಪಂಚಾಕ್ಷರಿ ಇದ್ದರು. ಉಪಕಾರ್ಯದರ್ಶಿ-1 ಅವರಿಗೆ ಮನವಿ ಸಲ್ಲಿಸಲಾಯಿತು.