ಬೆಳ್ತಂಗಡಿ, ಅ. 4: ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷೆ, ಮುಂಜಾಗ್ರತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಬಹು ಹಂತಗಳಲ್ಲಿ ಗ್ರಾ. ಪಂ. ಚುನಾವಣೆ ನಡೆಸುವ ಕುರಿತು ಈಗಾಗಲೇ ರಾಜ್ಯ ಸರಕಾರ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಅವಧಿ ಮುಗಿದ ಸುಮಾರು 5,800 ಗ್ರಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಹಲವು ಪಕ್ರಿಯೆಗಳ ಮೂಲಕ ಸಿದ್ಧತೆ ಚುರುಕುಗೊಳಿಸಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಈ 5,800 ಗ್ರಾ.ಪಂ.ಗಳಿಗೆ 2 ಅಥವಾ 3 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಕೋವಿಡ್ 19 ಹಿನ್ನೆಲೆ ಯಲ್ಲಿ ಜಿಲ್ಲಾ ಮತ್ತು ತಾಲೂಕುವಾರು ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವ ಇರಾದೆ ಹೊಂದಿದೆ. ವಿರೋಧ ಪಕ್ಷಗಳ ವಿರೋಧದ ಹೊರ ತಾಗಿಯೂ ಅವಧಿ ಮುಗಿದ ಎಲ್ಲ ಗ್ರಾ.ಪಂ.ಗಳಿಗೆ ಇತ್ತೀಚಿಗೆ ಆಡಳಿತಾಧಿಕಾರಿಗಳನ್ನು ಸರಕಾರ ನೇಮಕ ಮಾಡಿತ್ತು. ಮೊದಲು ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ರಾಜ್ಯ ಬಿಜೆಪಿ ಸರಕಾರ ಮುಂದಾಗಿತ್ತು, ಆದರೆ ಅದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ಜೂ. 26 2020ಕ್ಕೆ ನೇಮಕ ಮಾಡಲಾಗಿತ್ತು.
ಸರಕಾರ ಕಳೆದ ಒಂದೂವರೆ ತಿಂಗಳಿಂದ ನೀಡಿದ ಸೂಚನೆಯಂತೆ ಚುನಾವಣಾ ಶಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಗೆ ಇನ್ನೇನು ದಿನ ನಿಗದಿಯೊಂದೇ ಬಾಕಿ ಇರುವಂತೆ ಶೇ. 50 ಪೂರ್ವತಯಾರಿ ಪ್ರಕ್ರಿಯೆ ನಡೆಸಿದೆ. ಮತ ಪೆಟ್ಟಿಗೆ ಜೋಡಣೆ ಮಾಡಿ, ಬಣ್ಣ ಬಳಿಯುವುದು ಸೇರಿದಂತೆ ಅಗತ್ಯ ಪರಿಕರಗಳ ಜೋಡಣೆಯಲ್ಲಿ ತೊಡಗಿದೆ. ಈಗಾಗಲೇ ಚುನಾವಣಾ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ, ಹೆಸರು ಬದಲಾವಣೆ, ದಾಖಲಾತಿ ತಿದ್ದುಪಡಿಗೆ ಕಡತಗಳನ್ನು ಪರಿ ಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಚುನಾವಣಾಧಿಕಾರಿ ನೇಮಕ? : ದ.ಕ. ಜಿಲ್ಲೆಯಲ್ಲಿ ಚುನಾವಣಾ ಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಮಂಗಳೂರು-1, ಬಂಟ್ವಾಳ-3, ಬೆಳ್ತಂಗಡಿ-2, ಪುತ್ತೂರು-1, ಸುಳ್ಯ, 1, ಕಡಬ-1, ಮೂಡುಬಿದಿರೆಗೆ-1 ಚುನಾವಣಾಧಿಕಾರಿಗಳು ನೇಮಕ ವಾಗಲಿದ್ದಾರೆ. ಹೆಚ್ಚಿರುವ ಗ್ರಾ.ಪಂ.ಗಳಿಗೆ ಒಂದಕ್ಕಿಂತ ಹೆಚ್ಚಿನ ಮಂದಿಯನ್ನು ನೇಮಿಸಲಾಗಿದೆ. ತಾಲೂಕಿಗೆ ಓರ್ವ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಡಾಟಾ ಎಂಟ್ರಿ ಇದ್ದು, ಒಂದು ಮತಗಟ್ಟೆಗೆ 5 ಮಂದಿ ಸಿಬಂದಿ ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧ್ಯಕ್ಷ ಅಧಿಕಾರಿ-1, ಮೂವರು ಸಿಬಂದಿ, ಸಹಾಯಕರಾಗಿ ಓರ್ವ ಗ್ರೂಪ್ ಡಿ ನೇಮಕಗೊಳ್ಳಲಿದೆ. ಒಟ್ಟು 1,460 ಸಿಬಂದಿ ಆವಶ್ಯಕತೆ ಬೀಳಲಿದೆ. ಎಲ್ಲ ಇಲಾಖೆ ಅಧಿ ಕಾರಿಗಳು ನಿಯೋಜನೆಗೊಳ್ಳಲಿದ್ದಾರೆ.
ಇಎಂಎಸ್ ತಂತ್ರಾಂಶ : ಕೋವಿಡ್-19 ಹಿನ್ನೆಲೆ ಇದೇ ಮೊದಲ ಬಾರಿಗೆ ಅಭ್ಯರ್ಥಿ ಚುನಾವಣಾ ಪ್ರಕ್ರಿಯೆ ಸಂಪೂರ್ಣ ತಂತ್ರಾಂಶದಿಂದಲೇ ಕೂಡಿರಲಿದೆ. ಇದಕ್ಕಾಗಿ ಇಎಂಎಸ್ (ಎಲೆಕ್ಷನ್ ಮಾನಿಟರಿಂಗ್ ಸಿಸ್ಟಮ್) ಸಾಫ್ಟ್‌ವೇರ್ ಅಳವಡಿಸಲಾಗಿದ್ದು ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ (ಫಾರ್ಮ್ ನಂ. 9, 10) ಅಭ್ಯರ್ಥಿ ಚಿಹ್ನೆ ದಾಖಲೀಕರಣ ಎಲ್ಲವೂ ಆನ್‌ಲೈನ್ ಪ್ರಕ್ರಿಯೆಯಾಗಿದೆ. ಚುನಾವಣಾಧಿಕಾರಿ ಲಾಗಿನ್ ಹಕ್ಕು ಹೊಂದಿರುತ್ತಾರೆ. ಈ ಹಿಂದೆ ಅಭ್ಯರ್ಥಿ ಚಿಹ್ನೆ ಅಧಿಕೃತಗೊಳ್ಳಲು 3 ದಿನದ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸಕ್ತ ತತ್‌ಕ್ಷಣದಲ್ಲೇ ಲಭ್ಯವಾಗುವಂತೆ ತಂತ್ರಾಂಶ ಸಿದ್ಧ ಪಡಿಸಲಾಗಿದೆ. ಚುನಾವಣೆಯ ಪ್ರತಿಯೊಂದು ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮಾನಿಟರಿಂಗ್ ವ್ಯವಸ್ಥೆ ಗೊಳಪಡಿಸ ಲಾಗುತ್ತದೆ. ಹಿಂದೆ ಫಾರ್ಮ್ ನಂ. 10 ಕೈಯಲ್ಲೆ ಬರೆಯುವ ಪದ್ಧತಿ ಇದ್ದು, ಇದೂ ಈ ಬಾರಿ ತಂತ್ರಾಂಶದಲ್ಲೇ ಬಳಕೆಯಾಗಲಿದೆ.
ರಾಜಕೀಯ ಲೆಕ್ಕಾಚಾರ : ಗ್ರಾ.ಪಂ. ಮಟ್ಟದಲ್ಲಿ ಈಗಾಗಲೇ ಚುನಾವಣಾ ಕಾವು ರಂಗೆದ್ದಿದೆ. ಬೂತ್ ಸಮಿತಿಗಳ ರಚನೆ, ಅಭ್ಯರ್ಥಿಗಳ ಹೊಂದಾಣಿಕೆಯಲ್ಲಿ ಪಕ್ಷವು ತೊಡಗಿದೆ. ಹಲವು ಲೆಕ್ಕಾಚಾರಗಳು ನಡೆಯುತ್ತಿದೆ.
ಬೆಳ್ತಂಗಡಿ 46 ಗ್ರಾ.ಪಂ. : ಬೆಳ್ತಂಗಡಿ ತಾಲೂಕಿ® 48 ಗ್ರಾ.ಪಂ.ಗಳಲ್ಲಿ ಅವಧಿ ಮುಗಿದ 46 ಗ್ರಾ.ಪಂ.ಗಳ ಆಡಳಿತ ಮಂಡಳಿ ಚುನಾವಣೆ ನಡೆಯಲಿದೆ. 201 ಬೂತ್‌ಗಳಿದ್ದು, ಕೋವಿಡ್ ಹಿನ್ನೆಲೆ 91 ಹೆಚ್ಚುವರಿ ಬೂತ್ ಸೇರಿ ಒಟ್ಟು 292 ಬೂತ್‌ಗಳಾಗಲಿವೆ. ಪ.ಪಂ. ಹಾಗೂ ಎರಡು ಗ್ರಾ.ಪಂ. ಹೊರತುಪಡಿಸಿ ಪ್ರಸಕ್ತ 1,99,344 ಮತದಾರರಿದ್ದಾರೆ. ಈ ಪೈಕಿ ಪುರುಷ-99,622, ಮಹುಳೆ-99,722 ಮತದಾರರಿದ್ದಾರೆ. ಹೊಸ ಸೇರ್ಪಡೆ ಸೇರಿ 2 ಲಕ್ಷ ಮತದಾರರ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.
ವಿಭಜಿಸಲು ಸೂಚನೆ : ರಾಜ್ಯದಲ್ಲಿ ಈಗ 5,800 ಗ್ರಾ.ಪಂ.ಗಳ 93 ಸಾವಿರಕ್ಕೂ ಹೆಚ್ಚು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ. ಇದಕ್ಕಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1,000 ಮತದಾರರು ಇದ್ದಲ್ಲಿ ಅದನ್ನು ಎರಡು ಬೂತ್‌ಗಳಾಗಿ 500/500 ರಂತೆ ವಿಭಜಿಸಲು ಸೂಚಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಪೂರ್ವ ಸಿದ್ಧತೆಗಳು ಸಬಂಧಪಟ್ಟವರಿಗೆ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ಚುನಾವಣೆಗೆ ಅವಶ್ಯವಿರುವ ಸಲಕರಣೆ ಜೋಡಿಸಲಾಗುತ್ತಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಕ್ರಮ ವಹಿಸಬೇಕಾಗಿರುವ ಒತ್ತಡ ಇರುವುದು ಸಹಜ.
-ಮಹೇಶ್ ಜೆ., ತಹಶೀಲ್ದಾರ್