Advertisement

ಬಂಡಾಯದ ಹೊರತಾಗಿಯೂ ಕಾವೇರಿದ ಪ್ರಚಾರ

12:23 PM Dec 25, 2020 | Suhan S |

ಬೆಳ್ತಂಗಡಿ, ಡಿ.24: ಹಳ್ಳಿ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅನೇಕ ರಾಜಕೀಯ ಕಸರತ್ತುಗಳ ನಡುವೆಯೇ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಿದೆ.   ಕೆಲವೆಡೆ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಎಲ್ಲ ಅಭ್ಯರ್ಥಿಗಳು ಬಹಿರಂಗ ಪ್ರಚಾರದ ಜತೆಜತೆಯಲ್ಲಿ  ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಮಾಡುತ್ತಿದ್ದಾರೆ.

Advertisement

ಕೆಲವೆಡೆ ರಾಜಕೀಯ ಪಕ್ಷಗಳ ಅಧಿಕೃತ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಆಕಾಂಕ್ಷಿಗಳಾಗಿದ್ದವರಿಗೆ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದವರನ್ನು ಕೊನೇ ಕ್ಷಣದಲ್ಲಿ ಒಲಿಸುವಲ್ಲಿ ಅಧಿಕೃತ ಅಭ್ಯರ್ಥಿಗಳು ಯಶಸ್ವಿ ಯಾಗಿದ್ದಾರೆ. ಈ ಎಲ್ಲ ಮನವೊಲಿಕೆ, ತಂತ್ರಗಾರಿಕೆಯ ಕಸರತ್ತಿನ ಮೂಲಕ ತಾ|ನಲ್ಲಿ 237 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆಗೆದುಕೊಂಡಿರುವುದು ವಿಶೇಷ.

ಹಿರಿಯರಿಗೆ ಪ್ರಾಶಸ್ತ್ಯ ನೀಡದಿರುವುದು, ಅನುಭವ ರಹಿತರಿಗೆ ಮಣೆ, ಜಾತಿ ಲೆಕ್ಕಾಚಾರ, ಪಕ್ಷಾಂತರಿಗಳಿಗೆ ಟಿಕೆಟ್‌ ಎಂಬೆಲ್ಲ ಒಳ ಬೇಗುದಿಯ ಕಾರಣಗಳಿಂದಾಗಿ ಹಲವೆಡೆ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ  ಉಳಿದಿದ್ದಾರೆ.

ಅರ್ಹರ ಆಯ್ಕೆಯಿಂದ ಗ್ರಾಮ ಸ್ವರಾಜ್ಯವಾಗಬೇಕು, ಯುವ ಸಮು ದಾಯಕ್ಕೆ ಅವಕಾಶ ಸಿಗಬೇಕು. ಆದರೆ ಅವರು ರಾಜಕೀಯದ ಅಮಲು ಏರಿಸಿ ಕೊಳ್ಳಬಾರದು ಎಂದು ಚುನಾವಣೆ ನಡೆಯ ಲಿರುವ ಗ್ರಾಮಗಳಲ್ಲಿ ಸಂಚರಿಸುವಾಗ “ಉದಯವಾಣಿ’ ಪ್ರತಿನಿಧಿ ಬಳಿ ಮತದಾರರು ತಮ್ಮ ನಿಲುವನ್ನು ಸೂಚ್ಯವಾಗಿ ವ್ಯಕ್ತಪಡಿಸಿದರು.

 ಲಾೖಲ   :

Advertisement

ಲಾೖಲ ಗ್ರಾ.ಪಂ.ನ ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಕಳೆದ ಬಾರಿ  ಒಟ್ಟು 20 ಸ್ಥಾನಗಳಲ್ಲಿ 12 ಮಂದಿ ಬಿಜೆಪಿ ಬೆಂಬಲಿತರು ಮತ್ತು 8 ಮಂದಿ ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಕಾಂಗ್ರೆಸ್‌ ಬೆಂಬಲಿತರೋರ್ವರು ಬಿಜೆಪಿ ಬೆಂಬಲಿತರತ್ತ ವಾಲಿದ್ದರಿಂದ ಬಿಜೆಪಿ ಬೆಂಬಲಿತರ ಬಲ 13 ಕ್ಕೇರಿತ್ತು. ಈ ಬಾರಿ 20 ಸ್ಥಾನಗಳಿಗೆ ಒಟ್ಟು 51 ಮಂದಿ ಕಣದಲ್ಲಿದ್ದಾರೆ.

ಮೇಲಂತ ಬೆಟ್ಟು  :

ಮೇಲಂತ ಬೆಟ್ಟು ಗ್ರಾ.ಪಂ. ಮುಂಡೂರು, ಸವಣಾಲು ಎರಡು ಗ್ರಾಮ ಗಳನ್ನು ಹೊಂದಿದ್ದು, 12 ಸ್ಥಾನಗಳಿಗೆ 27 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಬೆಂಬಲಿತರು 5, ಬಿಜೆಪಿ ಬೆಂಬಲಿತರು 7 ಸ್ಥಾನಗಳನ್ನು ಪಡೆದಿದ್ದರು. ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿದೆ. ಈ ಬಾರಿ ಸವಣಾಲು ಗ್ರಾಮದ ಗಡಿ ಪ್ರದೇಶ ಕಸ್ತೂರಿರಂಗನ್‌ ವರದಿಯ ವ್ಯಾಪ್ತಿಗೆ ಸೇರುವ ಆತಂಕದಲ್ಲಿ ಜನಸಾಮಾನ್ಯರಿದ್ದಾರೆ. ಈ ಸಲ ತುಳುನಾಡ ಪಕ್ಷ ಬೆಂಬಲಿತ  ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ.

 ಪುದುವೆಟ್ಟು  :

ಪುದುವೆಟ್ಟು ಗ್ರಾ.ಪಂ.ಈ ಬಾರಿ ಕಸ್ತೂರಿರಂಗನ್‌ ವರದಿ ಎಂಬ ಗುಮ್ಮನ ವಿರುದ್ಧ ಮತದಾರರು ಚುನಾವಣೆ ಮುನ್ನ ಪ್ರತಿಭಟನೆ ಬಿಸಿಯನ್ನೂ ತೋರಿಸಿದ್ದಾರೆ. ವರದಿಯ ಅನುಷ್ಠಾನ ವಿರೋಧಿ ಸಿ ಅಭ್ಯರ್ಥಿ ಗಳ ಸಹಿತ ಸ್ಥಳೀಯರು ಸಾರ್ವತ್ರಿಕವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪಂ.ನ ಒಟ್ಟು 9 ಸ್ಥಾನಗಳಿಗೆ ಈ ಬಾರಿ 20 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ 9 ಸ್ಥಾನಗಳಲ್ಲಿ 4 ಕಾಂಗ್ರೆಸ್‌ ಬೆಂಬಲಿತ, 5 ಬಿಜೆಪಿ ಬೆಂಬಲಿತರು ಜಯಗಳಿಸಿದ್ದರಾದರೂ ಅಧಿಕಾರ ಕಾಂಗ್ರೆಸ್‌ ಬೆಂಬಲಿತರ ಪಾಲಾಗಿತ್ತು.

ಮುಂಡಾಜೆ :  

ಮುಂಡಾಜೆ ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತರದೇ ಪ್ರಾಬಲ್ಯ. 11 ಸದಸ್ಯ ಬಲದ ಗ್ರಾಮ ಪಂಚಾಯತ್‌ಗೆ ಕಳೆದ ಬಾರಿ 7 ಕಾಂಗ್ರೆಸ್‌ ಬೆಂಬಲಿತರು, 2 ಬಿಜೆಪಿ ಬೆಂಬಲಿತರು ಮತ್ತು 2 ಮಂದಿ ಪಕ್ಷೇತರರು ಜಯಗಳಿಸಿದ್ದರು. ಈ ಬಾರಿ 26 ಮಂದಿ ಕಣದಲ್ಲಿದ್ದಾರೆ. ಸಮರ್ಪಕ ನಳ್ಳಿ ನೀರು, ತ್ಯಾಜ್ಯ ಘಟಕ, ರಸ್ತೆ ಕಾಂಕ್ರೀಟ್‌, ಚರಂಡಿ ಅವ್ಯವಸ್ಥೆ ಸರಿಪಡಿಸಬೇಕಿದೆ. ನದಿ ನೀರಿಗೆ ತ್ಯಾಜ್ಯ ಎಸೆಯುತ್ತಿರುವ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಗ್ರಾಮಸ್ಥರದ್ದಾಗಿದೆ.

ನಡ  :

ಹೈನುಗಾರರೇ ಹೆಚ್ಚಿರುವ ನಡ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸದ್ದಿಲ್ಲದ ರಾಜಕೀಯ ಕಣ ರಂಗೇರಿದೆ. 14 ಸ್ಥಾನಗಳನ್ನು ಹೊಂದಿದ್ದು ಕಳೆದ ಬಾರಿ 7ಮಂದಿ ಬಿಜೆಪಿ ಬೆಂಬಲಿತರು, 6 ಮಂದಿ ಕಾಂಗ್ರೆಸ್‌ ಬೆಂಬಲಿತರು ಮತ್ತು  ಒಬ್ಬರು ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದರು. ಅಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿತ್ತು.

 ಕಲ್ಮಂಜ :  

ಒಟ್ಟು 10 ಸ್ಥಾನಗಳನ್ನು ಹೊಂದಿರುವ ಕಲ್ಮಂಜ ಗ್ರಾಮ ಪಂಚಾಯತ್‌ ಅತೀ ಕಡಿಮೆ ಸದಸ್ಯ ಸ್ಥಾನ ಹೊಂದಿರುವ ಪಂಚಾಯತ್‌ ಆಗಿದೆ. ಕಳೆದ ಬಾರಿ 9 ಮಂದಿ ಬಿಜೆಪಿ ಬೆಂಬಲಿತರು ಮತ್ತು ಓರ್ವ ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದರು. ಕಲ್ಮಂಜದಲ್ಲಿ ರಸ್ತೆ ಸಮಸ್ಯೆ ಹೆಚ್ಚಿರುವುದರಿಂದ ಮತದಾರರ ನಿರೀಕ್ಷೆಯೂ ಅಧಿಕವಿದೆ.

ಧರ್ಮಸ್ಥಳ  :

ಧರ್ಮಸ್ಥಳ ಗ್ರಾ.ಪಂ.ನಲ್ಲೂ ಈ ಬಾರಿ ಹಲವು ರಾಜಕೀಯ ವಿದ್ಯಮಾನಗಳ ನಡುವೆ ಚುನಾವಣೆ ಕಣ ರಂಗೇರಿದೆ. ಒಟ್ಟು 25 ಸದಸ್ಯ ಸ್ಥಾನಗಳಿಗೆ 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಬಾರಿ 14 ಮಂದಿ ಬಿಜೆಪಿ ಬೆಂಬಲಿತರು, 11 ಮಂದಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದರು. ಅಧ್ಯಕ್ಷರು ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದರು. ಅಡ್ಡಮತದಾನದಿಂದ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.ಪಕ್ಷಾಂತರ, ಬಂಡಾಯಗಳಿಂದಾಗಿ ಗ್ರಾ.ಪಂ.ನ ಚುನಾವಣ ಕಣ ಕುತೂಹಲ ಮೂಡಿಸಿದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಹೊಸತನದ ಚಿಂತನೆ ಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಉಜಿರೆ :

ಬೆಳ್ತಂಗಡಿ ತಾಲೂಕಿನಲ್ಲಿ ಅತೀ ದೊಡ್ಡ ಗ್ರಾ.ಪಂ. ಆಗಿರುವ ಉಜಿರೆಯಲ್ಲಿ 34 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಕಳೆದ ಬಾರಿ 11ಮಂದಿ ಬಿಜೆಪಿ ಬೆಂಬಲಿತರು, 22 ಮಂದಿ ಕಾಂಗ್ರೆಸ್‌ ಬೆಂಬಲಿತರು ಮತ್ತು ಒಂದು ಸ್ಥಾನ ಪಕ್ಷೇತರ ಪಾಲಾಗಿತ್ತು. ಈ ಬಾರಿ ಪಕ್ಷೇತರ ಅಭ್ಯರ್ಥಿಬಿಜೆಪಿ ಬೆಂಬಲಿತರ ಬಣಕ್ಕೆ ಸೇರ್ಪಡೆಗೊಂಡ ಬಳಿಕ ರಾಜಕೀಯ ವಿದ್ಯಮಾನಬದಲಾಗಿದೆ. ಈ ಬಾರಿ 34 ಸ್ಥಾನಗಳಿಗೆ 72 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next