Advertisement

ವೈರಸ್‌ ಕಾಟದ ನಡುವೆಯೂ ಸಾಗಿತು ರಾಜಕೀಯ ಆಟ!

11:06 AM Dec 28, 2020 | Team Udayavani |

ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕ, ಯುಕೆಯಲ್ಲಿ ಕಾಣಿಸಿಕೊಂಡಿರುವ ವೈರಸ್‌ನ ಹೊಸ ಸ್ವರೂಪದ ಭೀತಿಯ ನಡುವೆಯೇ, 2021 ಯಾವ ರಾಜಕೀಯ ಪಕ್ಷಕ್ಕೆ ವರದಾನವಾಗುತ್ತದೋ ಕಾದು ನೋಡಬೇಕು.

Advertisement

2020. ಟ್ವೆಂಟಿ ಟ್ವೆಂಟಿ ಎಂಬ ಸುಂದರವಾದ ಹೆಸರು ಹೊತ್ತ ಈ ವರ್ಷವು ಸುಳಿವನ್ನೇ ನೀಡದೆ ವಿಶ್ವಕ್ಕೆ ಕೊಟ್ಟ ಆಘಾತ ಒಂದೆರಡಲ್ಲ. ಕಣ್ಣಿಗೆ ಕಾಣದ ಕೊರೊನಾ ಎಂಬ ಯಕಶ್ಚಿತ್‌ ವೈರಸ್‌ ಜಗದಗಲ ವ್ಯಾಪಿಸಿ ಜನರನ್ನು ಮನೆಗಳಿಗೆ ಸೀಮಿತವಾಗಿಸಿ, ಇಡೀ ಆರ್ಥಿಕತೆಯನ್ನೇ ಬುಡಮೇಲು ಮಾಡಿ, ಮನುಕುಲವನ್ನು ಬೆಚ್ಚಿಬೀಳಿಸಿತು. ಲಾಕ್‌ಡೌನ್‌, ನಿರ್ಬಂಧಗಳಲ್ಲೇ ಇಡೀ ವರ್ಷ ಕಳೆದುಹೋಯಿತು. ಎಲ್ಲವೂ ಸ್ತಬ್ಧವಾಗಿದೆಯೆಂದು ನಾವು ಭಾವಿಸುತ್ತಿ¨ªಾಗಲೇ ನಮ್ಮ ದೇಶದ ರಾಜಕೀಯ ವಲಯ ಮಾತ್ರ ವರ್ಷವಿಡೀ ಸದ್ದು ಮಾಡುತ್ತಲೇ ಇತ್ತು.

ಜಮ್ಮು-ಕಾಶ್ಮೀರದಿಂದ ಹಿಡಿದು ಕೇರಳದವರೆಗೂ, ರಾಜಸ್ಥಾನ ದಿಂದ ಹಿಡಿದು ಪಶ್ಚಿಮ ಬಂಗಾಲದ‌ವರೆಗೂ ವರ್ಷವಿಡೀ ರಾಜಕೀಯ ಚಟುವಟಿಕೆಗಳಿಗೆ ಬಿಡುವಿರಲಿಲ್ಲ. ಕೊರೊನಾ ನಿರ್ಬಂಧಗಳ ನಡುವೆಯೇ, ಹಲವು ರಾಜ್ಯಗಳಲ್ಲಿ ಚುನಾವಣೆ ಗಳು ನಡೆದವು, ಹೊಸ ಸರಕಾರಗಳು ರಚನೆಯಾದವು, ಕೆಲವೆಡೆ ಸರಕಾರಗಳು ಪತನಗೊಂಡವು, ಇನ್ನೂ ಕೆಲವೆಡೆ ಪತನದ ಅಂಚಿಗೆ ಹೋಗಿ ವಾಪಸಾದವು. ವಿಧಾನಸಭೆಯಿಂದ ಹಿಡಿದು ನಗರಪಾಲಿಕೆ, ಗ್ರಾಮ ಪಂಚಾಯತ್‌ ಚುನಾವಣೆಯವರೆಗೂ ಅದ್ದೂರಿ ರೋಡ್‌ ಶೋ, ಭರ್ಜರಿ ಪ್ರಚಾರಗಳು ರಾಜಕೀಯ ಯಾವತ್ತೂ ಲಾಕ್‌ ಆಗಲ್ಲ ಎಂಬುದನ್ನು ಸಾರಿ ಹೇಳಿದವು.

ದಿಲ್ಲಿ ವಿಧಾನಸಭೆ ಚುನಾವಣೆಯ ಮೂಲಕ 2020ರ “ರಾಜಕೀಯ ವರ್ಷ’ ಆರಂಭಗೊಂಡಿತು. ಆ ಸಮಯದಲ್ಲಿ ಕೊರೊನಾ ವೈರಸ್‌ ಭಾರತದಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಚೀನದಿಂದ ಒಂದೆರಡು ದೇಶಗಳಿಗೆ ಸೋಂಕು ಹಬ್ಬಿದ ಸುದ್ದಿಗಳಷ್ಟೇ ಹರಿದಾಡುತ್ತಿದ್ದವು.

ದಿಲ್ಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರಕಾರ 70ರ ಪೈಕಿ 62 ಸೀಟುಗಳಲ್ಲಿ ಗೆದ್ದು, ದಿಲ್ಲಿ ಗದ್ದುಗೆಯನ್ನು ತನ್ನದಾಗಿಸಿ ಕೊಂಡಿತು. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವ ಸಂಪು ಟವೇ ದಿಲ್ಲಿಯಲ್ಲಿ ಪ್ರಚಾರ ನಡೆಸಿದರೂ ಕೇಜ್ರಿವಾಲ್‌ ಅವರ ಜನಪರ ಆಡಳಿತದ ಮುಂದೆ ಸೋತು ಹೋದರು. ಆದರೆ ದಿಲ್ಲಿಯ ಸೋಲನ್ನು ಬದಿಗಿಟ್ಟು ನೋಡಿದರೆ, ವರ್ಷವಿಡೀ ರಾಜಕೀಯದಲ್ಲಿ ವಿಜಯ ಪತಾಕೆ ಹಾರಿಸಿದ್ದು ಮಾತ್ರ ಬಿಜೆಪಿಯೇ.

Advertisement

ಇದಾದ ಒಂದೇ ತಿಂಗಳಲ್ಲಿ ಇಡೀ ದೇಶದ ಗಮನ ಮಧ್ಯಪ್ರದೇಶದತ್ತ ತಿರುಗಿತು. ದೇಶವಾಸಿಗಳಲ್ಲಿ ಕೊರೊನಾ ಆತಂಕ ಶುರುವಾದ ಸಮಯವದು. ಆಗ ಮಧ್ಯಪ್ರದೇಶದ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯೇ ಬೀಸಿತ್ತು. ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಅಲುಗಾಡತೊಡಗಿತ್ತು. ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಕಾಂಗ್ರೆಸ್‌ನ 23 ಮಂದಿ ಬಂಡಾಯ ಶಾಸಕರ ರಾಜೀನಾಮೆ, ರೆಸಾರ್ಟ್‌ ರಾಜಕೀಯ, ವಿಶ್ವಾಸಮತ…

ಹೀಗೆ ಹಲವು ಹೈಡ್ರಾಮಾಗಳು ನಡೆದು 15 ತಿಂಗಳ ಅವಧಿಯ ಕಮಲ್‌ ನಾಥ್‌ ಸರಕಾರ ಪತನಗೊಂಡಿತು. ಕೊರೊನಾ ಹಿನ್ನೆಲೆಯಲ್ಲಿ ಮಾ.22ರಂದು ಎಲ್ಲರೂ ಸ್ವಯಂಪ್ರೇರಣೆಯಿಂದ ಜನತಾಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆಕೊಟ್ಟಿದ್ದರೆ, ಅದರ ಮುನ್ನಾದಿನ ಅಂದರೆ ಮಾ.21ರಂದು ಕಮಲ್‌ ನಾಥ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಲ್ಲಿಗೆ ಮಧ್ಯಪ್ರದೇಶ ಬಿಜೆಪಿಯ ಪಾಲಾಯಿತು.

ಕಾಂಗ್ರೆಸ್‌ನ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸೆಳೆದ ಬಿಜೆಪಿಯ ಅನಂತರದ ಗುರಿ ರಾಜಸ್ಥಾನದ ಯುವನಾಯಕ ಸಚಿನ್‌ ಪೈಲಟ್‌ ಆಗಿದ್ದರು. ರಾಜಸ್ಥಾನ ಸಿಎಂ ಅಶೋಕ್‌ ಗೆಹಲೋಟ್‌ ಮತ್ತು ಪೈಲಟ್‌ ನಡುವೆ ಹಿಂದಿನಿಂದಲೂ ಇದ್ದ ವೈಮನಸ್ಸು ಬಿಜೆಪಿಗೆ ಕೆಲಸವನ್ನು ಸುಲಭಗೊಳಿಸುವುದರ ಲ್ಲಿತ್ತು. ಕಾಂಗ್ರೆಸ್‌ ನಾಯಕರೊಳಗಿನ ಆಂತರಿಕ ಕಚ್ಚಾಟವೇ ಬಹುತೇಕ ಕಡೆ ಬಿಜೆಪಿಗೆ ಲಾಭ ತಂದುಕೊಟ್ಟಿದೆ. ಅದೇ ರೀತಿ, ರಾಜಸ್ಥಾನದಲ್ಲೂ ಜುಲೈ ವೇಳೆಗೆ ರಾಜಕೀಯ ಸಂಚಲನ ಆರಂಭ ವಾಯಿತು. ಆಗ ದೇಶಾದ್ಯಂತ ಲಾಕ್‌ ಡೌನ್‌ ಘೋಷಣೆಯಾಗಿತ್ತು. ಅದರ ನಡುವೆಯೇ ಪೈಲಟ್‌ ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಂಡಾಯದ ಬಾವುಟ ಹಾರಿಸಿ, ರೆಸಾರ್ಟ್‌ನತ್ತ ನಡೆದರು. ಹಲವು ದಿನಗಳ ಕಾಲ ಈ ಹಗ್ಗಜಗ್ಗಾಟ ಮುಂದುವರಿಯಿತು. ಆದರೆ, ಸಿಎಂ ಗೆಹಲೋಟ್‌ ಅವರ ಕಾರ್ಯತಂತ್ರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ನ‌ ಜಾಣನಡೆ ಸರಕಾರವನ್ನು ಉಳಿಸುವಲ್ಲಿ ಯಶಸ್ವಿಯಾಯಿತು. ಮುನಿದಿದ್ದ ಪೈಲಟ್‌, ಹೊಂದಾಣಿಕೆ ಮಾಡಿಕೊಂಡು ಹೋಗುವ ಮನಸು ಮಾಡಿದರು. ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರ ಉರುಳಿದರೆ, ರಾಜಸ್ಥಾನದಲ್ಲಿ ಸರಕಾರ ಉಳಿಯಿತು.

ಇನ್ನೇನು, ಅಕ್ಟೋಬರ್‌-ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆಯಿದ್ದ ಕಾರಣ ಬಿಜೆಪಿ ನಾಯಕರು ರಾಜಸ್ಥಾನದ ಕೈಬಿಟ್ಟು ಬಿಹಾರದತ್ತ ದೃಷ್ಟಿ ಹರಿಸಿದರು. ಬಿಹಾರ ಚುನಾವಣೆಯು ಬಿಜೆಪಿಗೆ ಹೂವಿನ ಹಾಸಿಗೆಯಾಗಲ್ಲ ಎಂದೇ ನಂಬಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಎನ್‌ಡಿಎ ಬಹುಮತ ಗಳಿಸಿ, ಆರ್‌ಜೆಡಿ ನೇತೃತ್ವದ ಮಹಾಮೈತ್ರಿಗೆ ಆಘಾತ ನೀಡಿತು.

ಬಿಹಾರ ಚುನಾವಣೆಯೊಂದಿಗೇ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯನ್ನೂ ಸ್ವೀಪ್‌ ಮಾಡಿದ ಬಿಜೆಪಿ, 59 ಸೀಟುಗಳ ಪೈಕಿ 41ನ್ನು ತನ್ನದಾಗಿಸಿಕೊಂಡಿತು. ಇಷ್ಟೇ ಅಲ್ಲ, ಇದೇ ಅವಧಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯೂ ಆಡಳಿತಾರೂಢ ಪಕ್ಷದ ಅದೃಷ್ಟಕ್ಕೆ ಸಾಥ್‌ ನೀಡಿ, ಬಿಜೆಪಿಯ ಸ್ಥಾನವನ್ನು 111ಕ್ಕೇರಿಸಿತು. ಕಾಂಗ್ರೆಸ್‌ನ ಸ್ಥಾನ 65ಕ್ಕೆ ಕುಸಿಯಿತು ಇದಾದ ಬೆನ್ನಲ್ಲೇ ಬಂದ ಸ್ಥಳೀಯ ಸಂಸ್ಥೆ ಚುನಾವಣೆಗಳು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರೀ ಸದ್ದು ಮಾಡಿದವು. ಇದೇನು ನಗರಪಾಲಿಕೆ ಚುನಾವಣೆಯೋ, ಲೋಕ ಸಭಾ ಚುನಾವಣೆಯೋ ಎಂದು ಅಚ್ಚರಿಪಡುವಷ್ಟರ ಮಟ್ಟಿಗೆ ಪ್ರಚಾರದ ಭರಾಟೆ ಹಾಗೂ ಜಿದ್ದಾಜಿದ್ದಿ ನಡೆದವು. ಹೈದರಾಬಾದ್‌ ನಗರಪಾಲಿಕೆ(ಜಿಎಚ್‌ಎಂಸಿ) ಚುನಾವಣೆ ಯಂತೂ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಕಳೆಕಟ್ಟಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ರಾಜಕೀಯ ಘಟಾನುಘಟಿಗಳು ಮುತ್ತಿನ ನಗರಿಯನ್ನು ಮುತ್ತಿಕ್ಕಿದರು. ಭರ್ಜರಿ ರೋಡ್‌ ಶೋ, ರ್ಯಾಲಿಗಳು ಈವರೆಗೆ ಯಾವ ಪಾಲಿಕೆಯೂ ಮಾಡದಷ್ಟು ಸುದ್ದಿ ಮಾಡಿದ್ದು ಮಾತ್ರವಲ್ಲ, 2016ರಲ್ಲಿ 4 ಸ್ಥಾನ ಗೆದ್ದಿದ್ದ ಕೇಸರಿ ಪಕ್ಷ, ಈ ಬಾರಿ 48ರಲ್ಲಿ ಜಯ ಗಳಿಸಿತು. ಟಿಆರ್‌ಎಸ್‌ 56 ಸ್ಥಾನಗಳನ್ನು ಗಳಿಸಿದರೆ, ಎಂಐಎಂ 44 ಮತ್ತು ಕಾಂಗ್ರೆಸ್‌ 2 ಸ್ಥಾನಗಳಲ್ಲಿ ಜಯ ದಾಖಲಿಸಿದವು.

ತೆಲಂಗಾಣ, ಹೈದರಾಬಾದ್‌ನಲ್ಲಿ ಸ್ಥಳೀಯ ಮಟ್ಟದಲ್ಲೇ ಪ್ರಭಾವ ಹೆಚ್ಚಿಸಿಕೊಳ್ಳುವ ಮೂಲಕ ಬಿಜೆಪಿಯು ದಕ್ಷಿಣದ ರಾಜ್ಯಗಳಲ್ಲಿ ಹಿಡಿತ ಸಾಧಿಸುವ ತನ್ನ ಪ್ರಯತ್ನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನೇ ಕಂಡಿತು. ಇನ್ನು, ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನೋಡಿದರೆ, ಶಬರಿಮಲೆ ಮತ್ತಿತರ ವಿಚಾರವನ್ನೆತ್ತಿಕೊಂಡು ಕೇರಳದಲ್ಲಿ ನೆಲೆಯೂರಲು ಉದ್ದೇಶಿಸಿದ್ದ ಬಿಜೆಪಿಗೆ ಅಂದುಕೊಂಡಷ್ಟು ಸೀಟುಗಳು ಲಭ್ಯವಾಗಲಿಲ್ಲ. ಆದರೆ ಶಬರಿಮಲೆ ವಿಚಾರದಲ್ಲಿ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಪಂದಳಂ ಮುನ್ಸಿಪಲ್‌ ಕೌನ್ಸಿಲ್‌ ಅನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು. ಕೇವಲ ಎರಡು ಮುನ್ಸಿಪಾಲಿಟಿಗಳಲ್ಲಿ ಬಹುಮತ ಗಳಿಸಿದ ಬಿಜೆಪಿ, ಮಾವೆಲಿಕ್ಕಾರ, ವರ್ಕಲ, ಒಟ್ಟಪ್ಪಾಳಂ ಸೇರಿದಂತೆ ಹಲವೆಡೆ ಎಲ್‌ಡಿಎಫ್ ಮತ್ತು ಯುಡಿಎಫ್ ಗೆ ಹೆಗಲೆಣೆಯ ಪೈಪೋಟಿ ನೀಡುವ ಮೂಲಕ ಕೇರಳ ರಾಜಕೀಯದಲ್ಲಿ ಛಾಪು ಮೂಡಿಸಿತು. ಚಿನ್ನದ ಕಳ್ಳಸಾಗಣೆ, ಡ್ರಗ್‌ ಪ್ರಕರಣದ ಸುಳಿಗೆ ಸಿಲುಕಿದ್ದ ಕೇರಳದ ಆಡಳಿತಾರೂಢ ಎಲ್‌ಡಿಎಫ್ ಸ್ಥಳೀಯ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ಮುಂದಿನ ವಿಧಾನಸಭೆ ಚುನಾವಣೆಗೆ ಸನ್ನದ್ಧವಾಗಿರುವ ಸುಳಿವು ನೀಡಿತು. ಆದರೆ ಇಲ್ಲೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭಾರೀ ಹಿನ್ನಡೆ ಅನುಭವಿಸಿತು.

ಜಿಎಚ್‌ಎಂಸಿ ಚುನಾವಣೆಯ ಜತೆಗೇ ಈ ಬಾರಿ ಜನರನ್ನು ಕುತೂಹಲಕ್ಕೆ ತಳ್ಳಿದ್ದ ಮತ್ತೂಂದು ಸ್ಥಳೀಯ ಚುನಾವಣೆಯೆಂದರೆ ಜಮ್ಮು ಮತ್ತು ಕಾಶ್ಮೀರದ ಡಿಡಿಸಿ ಎಲೆಕ್ಷನ್‌. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಸಂದರ್ಭದಲ್ಲೇ, ಅಂದರೆ ಇತ್ತೀಚೆಗಷ್ಟೇ ಡಿಡಿಸಿ ಚುನಾವಣೆ ನಡೆಯಿತು. ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯು, ಪಿಡಿಪಿ-ಎನ್‌ಸಿ ಸೇರಿದಂತೆ 8 ಪಕ್ಷಗಳ ಒಕ್ಕೂಟವಾದ ಗುಪ್ಕರ್‌ ಮೈತ್ರಿಗೂ, ಬಿಜೆಪಿಗೂ ದೊಡ್ಡ ಸವಾಲಾಗಿತ್ತು. ಸಂವಿಧಾನದ 370ನೇ ವಿಧಿಯ ರದ್ದತಿಯ ಜನಾದೇಶವೆಂದೇ ಪರಿಗಣಿಸಲಾಗಿದ್ದ ಚುನಾವಣೆಯಲ್ಲಿ ಗುಪ್ಕರ್‌ ಮೈತ್ರಿ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಿತು. ಆದರೆ ಇಲ್ಲೂ ಬಿಜೆಪಿ ಸೋಲಲಿಲ್ಲ. ಮುಸ್ಲಿಂ ಬಾಹುಳ್ಯದ ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಕಾಶ್ಮೀರದಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಷ್ಟೇ ಅಲ್ಲ, ಅತೀ ಹೆಚ್ಚು ಮತಗಳೂ ಪಕ್ಷದ ಬುಟ್ಟಿಗೆ ಬಿದ್ದವು. ಒಟ್ಟು 75 ಸೀಟುಗಳಲ್ಲಿ ಗೆಲುವು ಸಾಧಿಸಿ ಬಿಜೆಪಿಯು ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಕೊರೊನಾ ವೈರಸ್‌ ಕಾಟ, ಲಾಕ್‌ ಡೌನ್‌ ಎಫೆಕ್ಟ್ ನಡುವೆಯೂ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದ ಸರಕಾರವನ್ನು ಪತನಗೊಳಿಸಲು ವರ್ಷವಿಡೀ ಬಿಜೆಪಿ ಪ್ರಯತ್ನಿಸಿದರೂ ಅದರಲ್ಲಿ ಯಶ ಕಾಣಲಿಲ್ಲ. ಮಹಾ ವಿಕಾಸ್‌ ಅಘಾಡಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಿತ್ರಪಕ್ಷಗಳ ನಡುವೆ ಒಡಕು ಮೂಡಿಸುವ ಯತ್ನಗಳು ನಡೆದವು. ಜತೆಗೆ, ಶಿವಸೇನೆಯೊಂದಿಗೆ ಮತ್ತೆ ಕೈಜೋಡಿಸಿ ಸರಕಾರ ರಚಿಸುವ ಕುರಿತ ಮಾತುಕತೆಗಳೂ ತೆರೆಮರೆ ಯಲ್ಲಿ ನಡೆಯುತ್ತಲೇ ಇದ್ದವು. ಆದರೆ, ಈ ವರ್ಷವಂತೂ ಬಿಜೆಪಿಯ ಪ್ರಯತ್ನ ಫ‌ಲ ನೀಡಲಿಲ್ಲ. ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತು ಹಗ್ಗದ ಮೇಲೆ ಜಾಗರೂಕ ಹೆಜ್ಜೆ ಇಡುತ್ತಾ 5 ವರ್ಷಗಳ ಅವಧಿ ಪೂರ್ಣಗೊಳಿಸುವ ಗುರಿ ಮುಟ್ಟುವಲ್ಲಿ ಉದ್ಧವ್‌ ಗಮನ ನೆಟ್ಟಿರುವ ಕಾರಣ, ಬಿಜೆಪಿಗೆ ಆ ಹಗ್ಗದ ಬ್ಯಾಲೆನ್ಸ್ ತಪ್ಪಿಸಲು ಇನ್ನೂ ಆಗಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ, ಈ ವರ್ಷ ವೈರಸ್‌ ಕಾಟದ ನಡುವೆಯೂ ರಾಜಕೀಯ ಆಟ ಎಂದಿನಂತೆ ಸಾಗಿತ್ತು. ಈಗ ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ. ಮುಂದಿನ ವರ್ಷ ಅಸ್ಸಾಂ, ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಈ ಸಮರ ಗೆಲ್ಲಲು ತಯಾರಿಯನ್ನು ಆರಂಭಿಸಿವೆ. ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕ, ಯುಕೆಯಲ್ಲಿ ಕಾಣಿಸಿಕೊಂಡಿರುವ ವೈರಸ್‌ನ ಹೊಸ ಸ್ವರೂಪದ ಭೀತಿಯ ನಡುವೆಯೇ, 2021 ಯಾವ ರಾಜಕೀಯ ಪಕ್ಷಕ್ಕೆ ವರದಾನ ವಾಗುತ್ತದೋ ಕಾದು ನೋಡಬೇಕು.

– ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next