ಮೈಸೂರು: ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯ್ತಿ ನೌಕರರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಗರದ ಗನ್‌ಹೌಸ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಪಂಯ ನೂರಾರು ನೌಕರರು, ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೆಚ್ಚುವರಿ ಹಣ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡರು, ಹಲವಾರು ವರ್ಷಗಳ ಹೋರಾಟದಿಂದ ನಾವು ಸರ್ಕಾರದಿಂದ ವೇತನ ಪಡೆಯಲು 2018ರಿಂದ ಸಾಧ್ಯವಾಗಿದೆ. ಗ್ರಾಪಂಯ 61 ಸಾವಿರ ನೌಕರರಿಗೆ ಈಗಿನ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆ ಸೇರಿ ವೇತನ ನೀಡಲು 830 ಕೋಟಿ ರೂ. ಬೇಕಾಗುತ್ತದೆ. ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನು ಸರ್ಕಾರ ನೀಡಿಲ್ಲ. ವೇತನಕ್ಕಾಗಿ ಬೇಕಾಗಿರುವ ಹೆಚ್ಚುವರಿ ಹಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆಗೆ ಪತ್ರ ಬರೆದಿದ್ದು, ಹೆಚ್ಚುವರಿ ಹಣ ಬರದೆ ಗ್ರಾಪಂ ನೌಕರರ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಆದೇಶ ಪಾಲಿಸಿ: ಗ್ರಾಪಂಗಳಲ್ಲಿ ಇಎಫ್ಎಂಎಸ್‌ಗೆ ಸೇರಿಸಲು ತೊಂದರೆ ಮಾಡುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ನೌಕರರರು ಇಎಫ್ಎಂಎಸ್‌ಗೆ ಸೇರ್ಪಡೆಯಾಗಿಲ್ಲ. ಜೊತೆಗೆ ಸರ್ಕಾರದಿಂದ ವೇತನವು ಸಿಗುತ್ತಿಲ್ಲ. ಬಾಕಿ ಉಳಿದ ವೇತನ ಹಾಗೂ ಇಎಫ್ಎಂಎಸ್‌ಗೆ ಸೇರದೆ ಇರುವವರಿಗೆ ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ.40ರಷ್ಟು ಹಣವನ್ನು ನೌಕರರ ಸಂಬಳಕ್ಕೆ ಬಳಸುವಂತೆ ಆದೇಶವಿದ್ದರೂ ನೌಕರರಿಗೆ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ.
ಗ್ರಾಪಂ ನೌಕರರಿಗೆ ಸೇವಾ ಪುಸ್ತಕ ಬರೆಯುವುದು ಪಿಡಿಒ ಕರ್ತವ್ಯವಾಗಿದ್ದರೂ ನೌಕರರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಸರ್ಕಾರದ ಆದೇಶಗಳ ಜಾರಿ ಹಾಗೂ ಸಂಬಳಕ್ಕೆ ಬೇಕಾದ ನಿಧಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಅನುಮೋದನೆ: ಅಪರ ಕಾರ್ಯದರ್ಶಿ ಸ್ವಾಮಿಯವರ ವರದಿಯಂತೆ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ನೀಡಬೇಕು. ಕಳೆದ ಒಂದು ವರ್ಷದಿಂದ ಬಾಕಿ ಉಳಿದ ವೇತನ ಇಎಫ್ಎಂಎಸ್‌ಗೆ ಸೇರಿಸದಿರುವವರ ವೇತನವನ್ನು ತೆರಿಗೆ ಸಂಗ್ರಹದಲ್ಲಿ ಕೊಡುವಂತಾಗಬೇಕು. ನಿವೃತ್ತಿ ಹೊಂದಿದ್ದ ನೌಕರರಿಗೆ ಉಪಧನ ಕೊಡಬೇಕು. ಎಲ್ಲಾ ನೌಕರರಿಗೂ ಸೇವಾ ಪುಸ್ತಕ ತೆರೆಯಬೇಕು. ನೆನೆಗುದಿಗೆ ಬಿದ್ದರುವ ಸೇವಾ ನಿಯಮಾವಳಿ ರಚಿಸಬೇಕು. ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ, ಸರ್ಕಾರಿ ನೌಕರರಿಗೆ ನೀಡುವಂತೆ ಎಲ್ಲಾ ನೌಕರರಿಗೂ ನೀಡಬೇಕು.
ಪಂಚಾಯ್ತಿ ನೌಕರರಿಂದ ಹೊಸ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಹೊಸ ಬಿಲ್‌ಕಲೆಕ್ಟರ್ ನೇಮಕಾತಿ ಮಾಡಬಾರದು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಸಿಐಟಿಯು ಮುಖಂಡ ಮಾರುತಿ ಮಾನ್ಪಡೆ, ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ಕೆ.ಬಸವರಾಜು, ಪ್ರಧಾನ ಕಾರ್ಯದರ್ಶಿ ಟಿ.ಎಸ್.ದಿನೇಶ್, ಖಜಾಂಚಿ ಲೋಕೇಶ್, ಕಾರ್ಮಿಕ ಮುಖಂಡ ಜಯರಾಮ್ ಮಾತನಾಡಿದರು. ಜಿಲ್ಲೆಯ ವಿವಿಧ ಗ್ರಾಪಂಗಳ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.