ಜೇವರ್ಗಿ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಹಳ್ಳಿಗಳಲ್ಲಿ ರಾಜಕೀಯ ರಂಗೇರತೊಡಗಿದ್ದು, ಸಭೆ, ಔತಣಕೂಟಗಳು ಸದ್ದಿಲ್ಲದೇ ನಡೆಯತೊಡಗಿವೆ.
ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಕಳೆದ ಮೇದಲ್ಲಿ ಅಂತ್ಯಗೊಂಡಿತ್ತು. ಇಷ್ಟರೊಳಗೆ ಚುನಾವಣೆ ನಡೆಯಬೇಕಿತ್ತು, ಆದರೆ ಕೋವಿಡ್-19 ಸೋಂಕಿನ ಕಾರಣದಿಂದ ಘೋಷಣೆ ವಿಳಂಬವಾಯಿತು. ಕೊರೊನಾ ಕಾರಣದಿಂದ ಆರು ತಿಂಗಳು ಕಾಲ ಮುಂದೂಡಿದ್ದ ಗ್ರಾಪಂ ಚುನಾವಣೆ ಕೊನೆಗೂ ಎರಡನೇ ಹಂತದಲ್ಲಿ ಬರುವ ಡಿ.27ರಂದು ಘೋಷಣೆಯಾಗಿದೆ. ಜೇವರ್ಗಿ ತಾಲೂಕಿನ 23 ಗ್ರಾಪಂ, ಯಡ್ರಾಮಿ ತಾಲೂಕಿನಲ್ಲಿ 15 ಗ್ರಾಪಂಗಳಿವೆ. ಇವುಗಳ ವಾರ್ಡ್ ವಾರು ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಮುಕ್ತಾಯವಾಗಿವೆ.
ಗ್ರಾಮೀಣ ಪ್ರದೇಶಗಳಲ್ಲಿನ ಅರಳಿ ಕಟ್ಟೆಗಳ ಮೇಲೆ ಚುನಾವಣೆ ಚರ್ಚೆ ಜೋರಾಗಿ ನಡೆಯಲಾರಂಭಿಸಿದೆ. ಈ ಬಾರಿ ತಮಗೆ ಬೆಂಬಲ ಸಿಗಬೇಕೆಂದು ಕೋರಿ ಸ್ಪರ್ಧಾಕಾಂಕ್ಷಿಗಳು ಊರಿನ ಮುಖಂಡರ ಬೆನ್ನಿಗೆ ಬಿದ್ದಿದ್ದಾರೆ.
ಗ್ರಾಪಂ ಸದಸ್ಯ ಸ್ಥಾನಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಕುದುರಿದೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿ ವಿವಿಧ ರಾಜ್ಯ ಹಾಗೂ ನಗರಗಳಿಂದ ವಾಪಸ್ಸಾದ ಯುವಕರೇ ಚುನಾವಣಾ ಆಕಾಂಕ್ಷಿಗಳಾಗಿದ್ದಾರೆ. ಹಳೆಯ ಸದಸ್ಯರಿಗಿಂತ ಯುವಕರೇ ಚುನಾವಣೆ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಗ್ರಾಪಂಗೆ ಆಯ್ಕೆಯಾಗಿದ್ದ ಹಳೆ ಸದಸ್ಯರಿಗೆ ಮೀಸಲು ಸಮಸ್ಯೆ ಎದುರಾಗಿ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ. ತಾವು ಗೆದ್ದಿರುವ ಕ್ಷೇತ್ರದಲ್ಲಿ ಕುಡಿಯುವ ನೀರು, ಸ್ವಚ್ಛತೆ ಮತ್ತು ರಸ್ತೆ ಅಭಿವೃದ್ಧಿ ಕೆಲಸ ಮಾಡಿ, ಈಗ ಬೇರೆ ವಾರ್ಡ್‌ನಲ್ಲಿ ಮತ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಹೊಸದಾಗಿ ನಿಲ್ಲುವ ಅಭ್ಯರ್ಥಿಗಳಿಗೆ ಅನುಕೂಲ ಹೆಚ್ಚಾಗಿ ಮತದಾರರ ಓಲೈಕೆಗೆ ಕಸರತ್ತು ನಡೆಸಿದ್ದಾರೆ.
ಗ್ರಾಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆಯುವುದಾದರೂ ಇಲ್ಲಿಯೂ ಪಕ್ಷ ರಾಜಕಿಯವೇ ನಿರ್ಣಾಯಕ ಎನ್ನುವುದು ಎಲ್ಲರಿಗೂ ತಿಳಿದ ಸತ್ಯವಾಗಿದೆ. ಅದರಲ್ಲೂ ನಿಜವಾದ ರಾಜಕೀಯ ಜಿದ್ದಾಜಿದ್ದಿ ನಡೆಯುವುದು ಗ್ರಾಪಂ ಚುನಾವಣೆಗಳಲ್ಲಿಯೇ. ಚುನಾವಣೆ ಸಮೀಪಿಸಿದಂತೆಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಭೆ-ಸಮಾರಂಭಗಳ ಆಯೋಜನೆಗೆ ಮುಂದಾಗಿದ್ದಾರೆ.
ಜೇವರ್ಗಿ ತಾಲೂಕಿನ ರಾಜಕೀಯದಲ್ಲಿ ದಶಕಗಳಿಂದಲೂ ಕಾಂಗ್ರೆಸ್, ಬಿಜೆಪಿ ಹಾಗೂಜೆಡಿಎಸ್ ನಡುವೆ ಪ್ರಬಲ ಪೈಪೋಟಿ ಇದೆ. ಇದು ಗ್ರಾಪಂ ಚುನಾವಣೆಗೂ ಹೊರತಾಗಿಲ್ಲ. ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನೇ ಇಲ್ಲಿನ ಜನರು ಹೆಚ್ಚು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿ ಮೂರು ಪಕ್ಷಗಳ ಬೆಂಬಲಿತರಾಗಿ ಕಣಕ್ಕೆ ಇಳಿಯಲು ಆಕಾಂಕ್ಷಿಗಳು ಸಿದ್ಧತೆ ನಡೆಸಿದ್ದಾರೆ. ಟಿಕೆಟ್‌ಗಾಗಿ ನಾಯಕರ ಮನೆಗಳಿಗೆ ತಂಡೋಪತಂಡವಾಗಿ ಅಲೆದಾಟ ಆರಂಭವಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದ ಕುರಿತು ಶಾಸಕ ಡಾ| ಅಜಯಸಿಂಗ್, ಬಿಜೆಪಿ ಬೆಂಬಲದ ಕುರಿತು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್ ಬೆಂಬಲದ ಕುರಿತು ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ.
-ವಿಜಯಕುಮಾರ ಎಸ್.ಕಲ್ಲಾ