ಸಿಂದಗಿ: ತಾಲೂಕಿನಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಗೆ ನಾಮಪತ್ರ ಹಿಂಪಡೆದುಕೊಂಡ ಬೆನ್ನಲ್ಲಿಯೇ ಕಣದಲ್ಲಿ ಉಳಿದ ಅಭ್ಯರ್ಥಿಗಳು ತಮ್ಮಅದೃಷ್ಟದ ಚಿಹ್ನೆ ಪಡೆದುಕೊಳ್ಳಲು ಮುಗಿಬಿದ್ದರುಗ್ರಾಪಂಗಳಲ್ಲಿ ಶನಿವಾರ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಪ್ರಕ್ರಿಯೆ ನಡೆದಿತ್ತು. ಕೆಲವರು ಒಂದೇ ಚಿಹ್ನೆ ಬಯಸಿ ಅರ್ಜಿ ಸಲ್ಲಿಸಿದ್ದು ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಲಾಟರಿ ಮೊರೆ ಹೋಗಬೇಕಾಯಿತು.
194 ಚಿಹ್ನೆಗಳು: ರಾಜ್ಯ ಚುನಾವಣಾ ಆಯೋಗ 194 ಮುಕ್ತ ಚಿಹ್ನೆಗಳ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕಹಳೆ ಊದುತ್ತಿರುವ ಮನುಷ್ಯ, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ಆಟೊ, ಟಿವಿ, ವಜ್ರ, ಕ್ಯಾಮರಾ, ಗ್ಯಾಸ್ ಸ್ಟೌ, ಗಿರಣಿ, ಕುಕ್ಕರ್, ತೆಂಗಿನ ತೋಟ, ಬ್ಯಾಟರಿ, ಟೆಲಿಫೋನ್, ಉಂಗುರ ಮೊದಲಾದ ಚಿಹ್ನೆಗಳಿವೆ. ಅಭ್ಯರ್ಥಿಗಳು ಆರಿಸಿಕೊಳ್ಳುವಚಿಹ್ನೆ ಆಕರ್ಷಕವಾಗಿದ್ದರೆ ಗೆಲುವು ಇನ್ನಷ್ಟು ಸುಲಭವಾಗಲಿದೆ ಎಂಬುದು ಹಲವರ ನಂಬಿಕೆ. ಹೆಚ್ಚಿನ ಸ್ಪರ್ಧಿಗಳು ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆಗಾಗಿ ಬೇಡಿಕೆ ಇಡುತ್ತಿದ್ದಾರೆ. ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆಯತ್ತಲೂ ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ.
ಅಭ್ಯರ್ಥಿಗಳಿಗೆ ನಿರಾಸೆ: ಅನ್ಯ ರಾಜ್ಯಗಳಲ್ಲಿ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳು ಕಾರು, ಬೈಸಿಕಲ್, ಸೀಲಿಂಗ್ ಫ್ಯಾನ್,ಆನೆ, ತೆಂಗಿನಕಾಯಿ, ನೇಗಿಲು, ಬಿಲ್ಲು-ಬಾಣ, ಬಾಣ, ಕಿರೀಟ, ಏಣಿ, ತಕ್ಕಡಿ, ಉದಯಿಸುತ್ತಿರುವ ಸೂರ್ಯ, ಕೊಡೆ, ಎರಡು ಎಲೆಗಳು, ಕಾರು ಸೇರಿದಂತೆ ಹಲವು ಗುರುತುಗಳನ್ನು ಹೊಂದಿವೆ. ಇವು ಆಕರ್ಷಣೀಯ ಚಿಹ್ನೆಗಳಾಗಿದ್ದರೂ ಗ್ರಾಪಂ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗುವವರಿಗೆ ನೀಡಲಾಗುವುದಿಲ್ಲ. ಇದು ಹಲವರಲ್ಲಿ ನಿರಾಸೆಯನ್ನೂ ಉಂಟು ಮಾಡಿದೆ. ಒಲವು ತೋರದ ಚಿಹ್ನೆಗಳು: ಅನ್ಯ ಅರ್ಥ ಕಲ್ಪಿಸುವಚಿಹ್ನೆಗಳನ್ನು ಮುಖಂಡರು ಪಕ್ಕಕ್ಕೆ ಸರಿಸಿದ್ದಾರೆ. ಅದರಲ್ಲೂ ಟ್ಯೂಬ್ ಲೈಟ್, ಕತ್ತರಿ, ರೇಜರ್, ಪಂಚಿಂಗ್ ಮಿಷನ್, ಗರಗಸ , ಬೆಂಕಿಪೊಟ್ಟಣ, ಗ್ರಾಮೊಫೋನ್, ಡೋರ್ ಲಾಕ್ ಮೊದಲಾದ ಚಿಹ್ನೆಗಳಿಗೆ ಬೇಡಿಕೆ ಕೊಂಚ ಕಡಿಮೆ ಇದೆ.
ಚಿಹ್ನೆಯಲ್ಲೇನಿದೆ ಮಹತ್ವ: ಸ್ಥಳೀಯ ಆಡು ಭಾಷೆಯಲ್ಲಿ ಗ್ರಾಮೊಫೋನ್ ಎಂದರೆ, ಖಾಲಿ ಭಾರವಸೆಗಳನ್ನು ನೀಡುವವನು ಎಂದರ್ಥವಂತೆ, ಇನ್ನು ಡೋರ್ ಲಾಕ್ ಎಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಾಗಿಲು ಮುಚ್ಚಿರುವುದುಎಂದು ಅರ್ಥವಿದೆ ಎನ್ನುತ್ತಾರೆ. ಟೋಪಿ ಚಿಹ್ನೆ ಎಂದರೆ ಮೋಸ ಮಾಡುವುದು, ಬಾಸ್ಕೆಟ್ ಎಂದರೆ ಅತಿ ಆಸೆಯುಳ್ಳವನು, ಮೆಣಸಿನಕಾಯಿ ಎಂದರೆಅತ್ಯಂತ ಒರಟು ಎಂಬೆಲ್ಲಾ ಅರ್ಥಗಳಿವೆ ಎಂದು ಅಭ್ಯರ್ಥಿಗಳು ವಿಚಿತ್ರವಾಗಿ ಹೇಳುತ್ತಾರೆ.
ಒಂದು ವೇಳೆ ಆ ಅಭ್ಯರ್ಥಿ ಸೋತರೆ, ಸೋಲಿನ ಹೊಣೆಯಲ್ಲಾ ಚಿಹ್ನೆಯದ್ದೇ. ಒಂದು ವೇಳೆ ಓರ್ವ ಅಭ್ಯರ್ಥಿಗೆ ಹೆಲ್ಮೆಟ್ ಚಿಹ್ನೆಯಾಗಿ ದೊರೆತು ಆತಸೋತರೆ, ಹೆಲ್ಮೆಟ್ ಅಭ್ಯರ್ಥಿಯ ತಲೆ ಉಳಿಸಲು ವಿಫಲವಾಯಿತು ಎನ್ನುವ ಮಾತುಗಳು. ದಾಕ್ಷಿಯ ಚಿಹ್ನೆ ಪಡೆದಿರುವ ವ್ಯಕ್ತಿ ಸೋತರೆ ಅದನ್ನು ಹುಳಿ ದ್ರಾಕ್ಷಿ ಎನ್ನಲು ಪ್ರಾರಂಭಿಸುತ್ತಾರೆ. ಆದ್ದರಿಂದ ಇವೆಲ್ಲಾ ಅಭ್ಯರ್ಥಿಗಳು ಹುಡುಕಲು ಯತ್ನಿಸುವುದು ಸಾಮಾನ್ಯವಾಗಿತು.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣಾ ನೀತಿ ಸಂಹಿತೆ) 1993ರ ರೂಲ್ 21 ರ ಪ್ರಕಾರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಾಗಿದೆ. ಇದನ್ನು ಅಭ್ಯರ್ಥಿಗಳು ತೆಗೆದುಕೊಳ್ಳಬೇಕು.
-ಸಂಜೀವ ಕುಮಾರ ದಾಸರ, ತಹಶೀಲ್ದಾರ್ ಸಿಂದಗಿ
ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿದ 194 ಮುಕ್ತ ಚಿಹ್ನೆಗಳಲ್ಲಿರುವ ಗುರುತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶವಿದೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷಗಳಿಗೆ ನೀಡಲಾಗಿರುವ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ.
-ಅಮೋಘಿ ಹಿರೇಕುರಬರ ಚುನಾವಣಾಧಿಕಾರಿ, ಸುಂಗಠಾಣ ಗ್ರಾಪಂ ಮತಕ್ಷೇತ
ನಗರ ಪ್ರದೇಶದಲ್ಲಿ ಜನರು ಚಿಹ್ನೆಗಳಿಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಚಿಹ್ನೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಜನಪ್ರೀಯ ಚಿಹ್ನೆ ಪಡೆದರೆ ಗೆಲುವು, ಒಂದು ವೇಳೆ ನಕಾರಾತ್ಮಕ ಚಿಹ್ನೆಪಡೆದರೆ ಗೇಲಿಗಿಡಾಗಿ ಸೋಲುವುದು ಖಂಡಿತ ಎಂದು ಅಭ್ಯರ್ಥಿಗಳು ಹೇಳುತ್ತಾರೆ.
-ಆನಂದ ಹೂಗಾರ, ಮಾಲೀಕರು ಸರ್ವೋದಯ ಆಫ್‌ಸೆಟ್ ಪ್ರಿಂಟರ್ಸ್, ಸಿಂದಗಿ
-ರಮೇಶ ಪೂಜಾರ