ಚನ್ನರಾಯಪಟ್ಟಣ: ಗ್ರಾಮ ಪಂಚಾಯಿತಿ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಾಗ ಚುನಾವಣಾ ಕಾವು ರಂಗೇರಿದೆ. ಮೂರೂ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ನೆಲಯೂರುವ ತವಕ: ಶ್ರವಣಬೆಳಗೊಳ ವಿಧಾನಸಭೆ ಎರಡು ದಶಕದಿಂದ ಜೆಡಿಎಸ್ ಕೈನಲ್ಲಿದೆ. ಈ ಬಾರಿ ಗ್ರಾಪಂ ಚುನಾವಣೆ ಮೂಲಕ ಬೇರುಮಟ್ಟದಲ್ಲಿ ನೆಲೆಯೂರಲು ಬಿಜೆಪಿ ಕಸರತ್ತು ನಡೆಸಿದೆ. ಕಾಂಗ್ರೆಸ್ ಕೂಡ ಗ್ರಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಬಿಜೆಪಿ ಸಮೂಹಿಕ ನಾಯಕತ್ವ: ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂರಾರು ಕ್ಷೇತ್ರದಲ್ಲಿ ಬೆಂಬಲಿತಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಜಿಪಂ ಕ್ಷೇತ್ರವಾರುನಾಯಕತ್ವವನ್ನೂ ವಹಿಸಿದೆ. ಬಾಗೂರು ಜಿಪಂ ಕ್ಷೇತ್ರಕ್ಕೆ ಅಲ್ಲಿನ ಸದಸ್ಯೆಶ್ವೇತಾ ಅವರ ಪತಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯಎ.ಸಿ.ಆನಂದಕುಮಾರ್ ಗ್ರಾಪಂ ಚುನಾವಣೆಯ ಪಕ್ಷದ ಉಸ್ತುವಾರಿವಹಿಸಿಕೊಂಡಿರುವುದಲ್ಲದೆ, ತಾಲೂಕಾದ್ಯಂತ ಸಂಚರಿಸುತ್ತಿದ್ದಾರೆ.ನುಗ್ಗೇಹಳ್ಳಿ ಜಿಪಂ ಕ್ಷೇತ್ರಕ್ಕೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಬ್ಬಳಿ ಸತೀಶ್, ಗೌಡಗೆರೆ ಜಿಪಂ ಕ್ಷೇತ್ರಕ್ಕೆ ಎಚ್.ಸಿ.ಶ್ರೀಕಂಠಪ್ಪ, ಹಿರೀಸಾವೆ ಜಿಪಂ ಕ್ಷೇತ್ರಕ್ಕೆ ಈ ಹಿಂದೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದ ಪಟೇಲ್ ಮಂಜುನಾಥ್ ಹೊಣೆ ಹೊತ್ತಿದ್ದರೆ, ಶ್ರವಣಬೆಳಗೊಳ ಜಿಪಂ ಕ್ಷೇತ್ರ ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಸಿ.ಕೆ.ಪ್ರವೀಣ್ ನೇತೃತ್ವದಲ್ಲಿ ಪಕ್ಷದ ಬೆಂಬಲಿಗರು ಚುನಾವಣೆ ಎದುರಿಸುತ್ತಿದ್ದಾರೆ. ಯಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎನ್ನುವುದೇ ಮುಖ್ಯವಾಗಿದೆ.
ಕೈನಲ್ಲೂ ಸಮೂಹಿಕ ಮುಂದಾಳತ್ವ: ತಾಲೂಕಿನಲ್ಲಿ ಜೆಡಿಎಸ್‌ಗೆ ಪ್ರತಿಸ್ಪರ್ಧಿ ಆಗಿರುವ ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಏನೂ ಕಮ್ಮಿ ಇಲ್ಲ. ಆದರೆ, ಇಲ್ಲಿನ ಒಳಜಗಳವೇ ಜೆಡಿಎಸ್‌ಗೆ ವರವಾಗುತ್ತಿದೆ. ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ತನ್ನಪ್ರಬಲ್ಯ ಸಾಧಿಸಲು ಅನುಕೂಲವಾಗುತ್ತಿದೆ. ಆದರೆ, ಈ ಗ್ರಾಪಂ ಚುನಾವಣೆಯಲ್ಲಿ ಸಮೂಹಿಕ ನಾಯಕತ್ವದಲ್ಲಿ ನಡೆಸಲು ಪಕ್ಷದ ಮುಖಂಡರು ತೀರ್ಮಾನ ಮಾಡಿ, ಜಿಪಂ ಕ್ಷೇತ್ರವಾರು ಉಸ್ತುವಾರಿ ವಹಿಸಿ ಜನರನ್ನು ತಲುಪುತ್ತಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ: ಕಸಬಾ ಜಿಪಂ ಕ್ಷೇತ್ರವನ್ನು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಯುವಕಾಂಗ್ರೆಸ್ ಅಧ್ಯಕ್ಷ ಯುವರಾಜ್ ವಹಿಸಿಕೊಂಡಿದ್ದಾರೆ. ಶ್ರವಣಬೆಳಗೊಳ ಜಿಪಂ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ವಹಿಸಿಕೊಂಡಿದ್ದಾರೆ. ಹಿರೀಸಾವೆಯನ್ನು ಮಾಜಿ ಮಂತ್ರಿ ಶ್ರೀಕಂಠಯ್ಯ ಅವರ ಪುತ್ರ ಜಿಪಂ ಮಾಜಿ ಉಪಾಧ್ಯಕ್ಷಎಚ್.ಎಸ್.ವಿಜಯಕುಮಾರ್ ನೇತೃತ್ವದಲ್ಲಿ ಸಾಗುತ್ತಿದೆ. ಬಾಗೂರು ಹೋಬಳಿ ಶ್ರೀಕಂಠಯ್ಯ ಅವರ ಮೊಮ್ಮಗ ದೀಪು, ದಂಡಿಗನಹಳ್ಳಿ ಹೋಬಳಿ ಅಲ್ಲಿನ ಜಿಪಂ ಸದಸ್ಯ ಶ್ರೇಯಸ್ ಎಂ.ಪಟೇಲ್ ಇನ್ನು ನುಗ್ಗೇಹಳ್ಳಿ ಹೋಬಳಿ ಪಿಕಾರ್ಡ್ ನಿರ್ದೇಶಕ ಎಂ.ಎ.ರಂಗಸ್ವಾಮಿ ವಹಿಸಿಕೊಂಡಿದ್ದರೆ, ಎಪಿಎಂಸಿ ನಿರ್ದೇಶಕ ಎಂ.ಶಂಕರ್ ಗೌಡಗೆರೆಕ್ಷೇತ್ರದ ಉಸ್ತುವಾರಿ ಯಾಗಿದ್ದಾರೆ. ಇನ್ನು ತಾಲೂಕಿನ ಸಂಪೂರ್ಣ ಜವಾಬ್ದಾರಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ಅವರ ಹೆಗಲಮೇಲಿದ್ದು ಹೆಚ್ಚು ಗ್ರಾಪಂ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಜೆಡಿಎಸ್ ಏಕಾಂಗಿ: ತಾಲೂಕಿನಲ್ಲಿ ಪ್ರತಿಚುನಾವಣೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಪಕ್ಷವು ಎದುರಿಸುತ್ತಿದೆ. ಅವರತೀರ್ಮಾನವೇ ಅಂತಿಮವಾಗಿದೆ. ತಾಲೂಕಿನ ದಂಡಿಗನಹಳ್ಳಿ ಹೋಬಳಿ ಹೊರತು ಪಡಿಸಿ ಉಳಿದ 34 ಗ್ರಾಪಂ ಅಭ್ಯರ್ಥಿಗಳನ್ನು ಇವರೇ ಅಂತಿಮ ಮಾಡಿ ಚುನಾವಣೆಗೆ ನಡೆಸುತ್ತಿದ್ದಾರೆ, ಪಕ್ಷದ ಅಧ್ಯಕ್ಷರು ಇಲ್ಲಿ ನೆಪಮಾತ್ರ ಎಂದರೆ ತಪ್ಪಾಗಲಾರದು. ಮತದಾರ ಪ್ರಭುಗಳು ಸಾಮೂಹಿಕ ನಾಯಕತ್ವಕ್ಕೆ ಮಣೆ ಹಾಕುತ್ತಾರೋ ಇಲ್ಲ ಏಕಾಂಗಿ ಹೋರಾಟಕ್ಕೆ ಮನ ಸೂಲುತ್ತಾರೋ ಎನ್ನುವುದನ್ನು ಡಿ.30ರ ನಂತರ ತಿಳಿಯಲಿದೆ.
– ಶಾಮಸುಂದರ್ ಕೆ.ಅಣ್ಣೇನಹಳ್ಳಿ