Advertisement
ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯಗ್ರಾಪಂ ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಇದೀಗ ಚುನಾವಣೆ ಗೆಲುವು ಮಂತ್ರ ಜಪಿಸುತ್ತಿದ್ದಾರೆ. ಅದಕ್ಕಾಗಿ ಜಾತಿ, ಹಣ, ಹೆಂಡ ಅಷ್ಟೇಯಲ್ಲ ಶಿರ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ.ವಿಧಾನಸಭೆ ಚುನಾವಣೆ ಅತ್ಯಂತ ತುರುಸು ಮತ್ತುಭರಾಟೆಯಿಂದ ನಡೆಯುವ ಚುನಾವಣೆ. ಆದರೆ ಈವರ್ಷದ ಗ್ರಾಪಂ ಚುನಾವಣೆ ಮಾತ್ರ ಹಿಂದೆ ಕಂಡುಕೇಳರಿಯದಷ್ಟು ತುರುಸಿನ ಕಣವಾಗಿ ಮಾರ್ಪಾಟಾಗಿದೆ. ಗರಿ ಗರಿ ನೋಟುಗಳು ಮತದಾರರ ಜೇಬಿಗೆ ಬೀಳುತ್ತಿವೆ. ಅಭ್ಯರ್ಥಿಗಳು ತಮ್ಮ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದು, ಕಿರು ರಣತಂತ್ರ ಹೆಣೆಯುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ : ಮಂಗಳೂರು: ಪೊಲೀಸರ ಮೇಲೆ ದಾಳಿ ನಡೆಸಿ ಬಂದೂಕು ಮುರಿದ ನಾಲ್ವರು ಯುವಕರು
ದಾಬಾಗಳಲ್ಲಿ ಫುಲ್ ಪಾರ್ಟಿ : ಗ್ರಾಮಗಳಲ್ಲಿ ಸದ್ಯಕ್ಕೆ ಚುನಾವಣೆ ಪ್ರಚಾರ ರಂಗೇರಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಅಭ್ಯರ್ಥಿಗಳು ದಾಬಾ ಪಾರ್ಟಿಗಳನ್ನು ಏರ್ಪಡಿಸುತ್ತಿದ್ದಾರೆ. ಕೋವಿಡ್ದಿಂದ ಸಂಕಷ್ಟಕ್ಕೆಒಳಗಾಗಿದ್ದ ದಾಬಾ ಮಾಲೀಕರು ಹಳ್ಳಿಗಳಿಂದಬರುವ ಗ್ರಾಪಂ ಅಭ್ಯರ್ಥಿಗಳ ಬೆಂಬಲಿಗರಿಗೆ ಪಂಚ ಪಕ್ವಾನ್ನಗಳನ್ನು ಮಾಡಿ ಉಣಬಡಿಸುತ್ತಿದ್ದು, ಸದ್ದಿಲ್ಲದೇ ಹಣ ಸಂಪಾದಿಸುತ್ತಿದ್ದಾರೆ. ಯುವಕರಿಗೆ ಗುಂಡು ಮತ್ತು ತುಂಡಿನ ವ್ಯವಸ್ಥೆ ಗ್ರಾಮಗಳ ಹೊರವಲಯದಲ್ಲಿ ಎಗ್ಗಿಲ್ಲದೇ ಸಾಗಿದ್ದರೆ, ಸಾರಾಯಿ ಹಂಚಿಕೆಯಂತೂ ಮಿತಿಮೀರಿದೆ.
ತಾಪಂ-ಜಿಪಂಗೆ ಈಗಲೇ ಟವೆಲ್! : ಗ್ರಾಪಂ ಚುನಾವಣೆ ತಾಪಂ ಮತ್ತು ಜಿಪಂ ಚುನಾವಣೆಗೆ ಸ್ಪರ್ಧಿಸುವವರ ಬೇರುಗಳನ್ನು ಗಟ್ಟಿಗೊಳಿಸುವ ಚುನಾವಣೆಗಳಾಗಿವೆ. ಹೀಗಾಗಿ ಮುಂದಾಲೋಚನೆಯಲ್ಲಿ ತೊಡಗಿರುವ ತಾಪಂ-ಜಿಪಂ ಚುನಾವಣೆ ಅಕಾಂಕ್ಷಿಗಳು ಈಗಿನಿಂದಲೇ ಗ್ರಾಪಂನಲ್ಲಿ ತಮ್ಮ ಅಭ್ಯರ್ಥಿಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಅದಕ್ಕಾಗಿ ತಕ್ಕಮಟ್ಟಿನ ಹಣಕಾಸು ನೆರವು, ಜಾತಿ ಬೆಂಬಲಿಗರ ಮೂಲಕ ಮತ ಹಾಕಿಸುವುದು ಕೂಡ ಈಗಲೇ ನಡೆದಿದೆ. ಹಿಂದೆ ಜಿಪಂನಲ್ಲಿ ಸೋಲುಂಡ ಅಭ್ಯರ್ಥಿಗಳೂಸದ್ಯಕ್ಕೆ ಕಣದಲ್ಲಿರುವ ಗ್ರಾಪಂ ಅಭ್ಯರ್ಥಿಗಳನ್ನು ಪಕ್ಷವಾರು ಬೆಂಬಲಿಸುತ್ತಿದ್ದಾರೆ. ಮೇಲ್ನೋಟಕ್ಕೆರಾಜಕೀಯ ಪಕ್ಷಗಳ ಪ್ರಭಾವ ಇಲ್ಲದ ಚುನಾವಣೆಯಾದರೂ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಕಡಿಮೆ ಎಲ್ಲಾ ವಾರ್ಡ್‌ಗಳಲ್ಲೂ ಪರಸ್ಪರ ಪ್ರಬಲ ಅಭ್ಯರ್ಥಿಗಳಾಗಿ ಬಿಂಬಿತವಾಗುತ್ತಿದ್ದಾರೆ.
ಹಣ-ಹೆಂಡದ ಹಂಚಿಕೆ, ಖಂಡದ ಊಟಗಳ ಪಾರ್ಟಿಗಳು ಗ್ರಾಮಸ್ವರಾಜ್ಯ ಪರಿಕಲ್ಪನೆಗೆ ವಿರುದ್ಧವಾಗಿವೆ. ಆದರೆ, ಸದ್ಯಕ್ಕೆ ಇಂತಹ ಸನ್ನಿವೇಶಗಳು ಗ್ರಾಮಗಳಲ್ಲಿ ಸಾಮಾನ್ಯ ಎನ್ನುವ ಹಂತಕ್ಕೆ ಎಲ್ಲರೂ ತಲುಪಿಯಾಗಿದೆ. ಆದರೆ ಸಾಮಾಜಿಕ ಜವಾಬ್ದಾರಿ ಅರಿತವರು ಸದಸ್ಯರಾದರೆ ಗ್ರಾಮಗಳ ಭವಿಷ್ಯ ಉಜ್ವಲವಾಗುತ್ತದೆ. -ಡಾ| ನಯನತಾರಾ, ಪಂಚಾಯತ್‌ರಾಜ್ ತಜ್ಞರು
ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿನ್ಹೆಗಳು ಇಲ್ಲದೇ ಇರಬಹುದು. ಆದರೆ ಚುನಾವಣೆ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲೇಬೇಕು. ಇಲ್ಲವಾದರೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಅರ್ಥ ಬರುವುದಿಲ್ಲ. –ಬಸವಪ್ರಭು ಹೊಸಕೇರಿ, ಗಾಂಧೀವಾದಿಗಳು
–ಬಸವರಾಜ ಹೊಂಗಲ್