ಕೊಪ್ಪಳ: ಜಿಲ್ಲೆಯ 73 ಗ್ರಾಪಂಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ತಮ್ಮ ನಾಮಪತ್ರವು ದೃಢವಾದ ತಕ್ಷಣವೇ ಚಿಹ್ನೆ ಪಡೆದು ಗ್ರಾಮಗಳಲ್ಲಿ ಪ್ರಚಾರಕ್ಕಿಳಿದಿದ್ದಾರೆ.
ಯಪ್ಪಾ ದೇವ್ರು.. ನನಗೊಂದು ಓಟ್ ಕೊಡಿ, ನಿಮ್ಮನ್ನ ಕೈ ಮುಗಿದು ಬೇಡುವೆ.. ಕಾಲು ಬೀಳುವೆ.. ನನ್ನನ್ನು ಗೆಲ್ಲಿಸಿಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಹೌದು.. ಈಗಾಗಲೇ ಮೊದಲ ಹಂತದ ಚುನಾವಣೆ ರಂಗೇರಿದೆ. ಹಳ್ಳಿ ಹಳ್ಳಿಯಲ್ಲೂ ಜಿದ್ದಾ ಜಿದ್ದಿಗೆ ಬಿದ್ದವರಂತೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.
ಅಭ್ಯರ್ಥಿಗಳಿಗೆ ಚಿಹ್ನೆ: ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಚಿಹ್ನೆ ಇಲ್ಲವಾದ್ದರಿಂದ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಚಿಹ್ನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲುನಾಮಪತ್ರ ಯಾರು ಸಲ್ಲಿಕೆ ಮಾಡಿರುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಚಿಹ್ನೆ ಆಯ್ಕೆ ಮಾಡಿಕೊಳ್ಳಲು ಮೊದಲ ಆದ್ಯತೆ ನೀಡಿದ್ದು, ಹಾಗಾಗಿ ಆಯಾ ಗ್ರಾಪಂನ ಚುನಾವಣಾ ಅಧಿಕಾರಿಗಳು ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆ ನೀಡಿದ್ದಾರೆ. ಅಭ್ಯರ್ಥಿಗೆ ಚಿಹ್ನೆ ಸಿಕ್ಕ ಬೆನ್ನಲ್ಲೇ ತಮ್ಮ ಊರುಗಳಿಗೆ ತೆರಳಿ ಇಡೀ ದಿನ ಮನೆ ಮನೆಗೂ ಸುತ್ತಿ ಮತದಾರನಿಗೆ ಮನವಿ ಮಾಡಿ ನಮಗೆ ಮತ ನೀಡಿ, ಇಂತಹ ಚಿಹ್ನೆಯಿಂದ ನಾನು ಸ್ಪರ್ಧೆ ಮಾಡಿದ್ದೇನೆ. ದಯವಿಟ್ಟು ಮತ ನೀಡಿ ಎಂದು ಮತದಾರರ ಮತಗಳನ್ನ ಪಡೆಯುವಲ್ಲಿ ನಿರತರಾಗಿದ್ದಾರೆ.
ಕೈ ಮುಗಿತಾರೆ, ಕಾಲು ಬೀಳ್ತಾರೆ: ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಂತೂ ಬಿಗುಮಾನ ಬಿಟ್ಟು ಕಂಡ ಕಂಡವರ ಕಾಲಿಗೆ ಬಿದ್ದು ಮತ ನೀಡುವಂತೆ ಮನವಿಮಾಡುತ್ತಿರುವ ದೃಶ್ಯ ಪ್ರತಿ ಹಳ್ಳಿಯಲ್ಲೂ ಕಂಡು ಬರುತ್ತಿದೆ. ಚುನಾವಣೆಗೆ ನಿಂತಿರುವನನಗೆ ನಿಮ್ಮ ಆಶೀರ್ವಾದ ಬೇಕು. ನೀವು ಕೈ ಹಿಡಿದರೆ ನಾನು ಗೆಲ್ಲುವೆ ನನ್ನನ್ನ ನೀರಿನಲ್ಲಿ ತೇಲಿಸುತ್ತೀರೋ.. ಮುಳಿಗಿಸುತ್ತೀರೋ ನಿಮಗೆ ಬಿಟ್ಟ ವಿಚಾರ. ನನ್ನ ನೀವು ಗೆಲ್ಲಿಸಿದರೆ ನಮ್ಮ ವಾರ್ಡ್‌ನ್ನು ಅಭಿವೃದ್ಧಿ ಮಾಡುವೆ ಎಂದೆಲ್ಲಾ ಆಶಾ ಗೋಪುರ ಕಟ್ಟುತ್ತಿದ್ದಾರೆ.
ಹಲವು ತಂತ್ರಗಾರಿಕೆ: ವಾರ್ಡ್‌ನಲ್ಲಿ ಪ್ರಬಲ ಸಮುದಾಯದ ನಾಯಕರ ಮನೆಯ ಕದ ತಟ್ಟುವ ಮೂಲಕ ನಿಮ್ಮ ಬೆಂಬಲ ನಮಗಿದ್ದರೆ ಸಮಾಜದಮತಗಳು ನಮಗೆ ಬರಲಿವೆ. ನೀವು ಮನಸ್ಸು ಮಾಡಿದರೆ ನಾವು ಗೆಲುವು ಕಾಣಲು ಸಾಧ್ಯ ಎಂದೆಲ್ಲ ಮುಖಂಡರಲ್ಲಿ ಮನವಿ ಮಾಡಿ ಹಲವು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಲ್ಲದೇ ದೇವಸ್ಥಾನಗಳಿಗೆ ದೇಣಿಗೆ ನೀಡುವ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೆ ನಾನು ಕೈ ಜೋಡಿಸುವೆ. ಗೆದ್ದರೆಈ ವಾರ್ಡ್‌ನ ಸಮಸ್ಯೆಯನ್ನು ಬಗೆ ಹರಿಸುವೆ ಎಂದು ಅವರಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸೋಮವಾರದಿಂದಲೇ ಅಭ್ಯರ್ಥಿಗಳು ಪ್ರಚಾರ ಕಾರ್ಯಕ್ಕಿಳಿದಿದ್ದಾರೆ.
-ದತ್ತು ಕಮ್ಮಾರ