ದಾವಣಗೆರೆ; ಅಧಿಕಾರ ವಿಕೇಂದ್ರೀಕರಣದ ಪ್ರಮುಖ ಘಟ್ಟವಾಗಿರುವ ಗ್ರಾಮ ಪಂಚಾಯಿತಿಚುನಾವಣೆ ಪಕ್ಷಾತೀತ ಎಂಬುದು ವೇದ್ಯ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ತಳ ಮಟ್ಟದಲ್ಲಿ ಪಕ್ಷದ ಬೇರಿನ ಬಲವರ್ಧನೆಗೆ ತೆರೆಮರೆಯ ಕಸರತ್ತು ನಡೆಸುತ್ತವೆ ಎಂಬುದು ಬಹಿರಂಗ ಸತ್ಯ.
ಮುಂದಿನ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮಾತ್ರವಲ್ಲ, ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಬುನಾದಿ ಭದ್ರಗೊಳಿಸಿಕೊಳ್ಳಲು ರಾಜಕೀಯ ಪಕ್ಷಗಳು ಪರೋಕ್ಷವಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ವೇದಿಕೆಯನ್ನಾಗಿಬಳಸಿಕೊಳ್ಳುತ್ತವೆ. ಗ್ರಾಪಂ ಚುನಾವಣೆಯಲ್ಲಿ ಪಕ್ಷ, ಚಿನ್ಹೆ ಯಾವುದೂ ಇರುವುದಿಲ್ಲ. ಆದರೆ ವಾಸ್ತವವೇ ಬೇರೆ. ಪಕ್ಷದ ಆಧಾರದಲ್ಲೇ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ಪ್ರಕ್ರಿಯೆ ನಡೆಯುತ್ತದೆ ಎಂಬುದನ್ನು ಬಾಯಿ ಬಿಟ್ಟು ಹೇಳುವ ಅಗತ್ಯವೇ ಇಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಗರ ಮಟ್ಟದ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮತ್ತು ಗ್ರಾಮೀಣ ಭಾಗದಲ್ಲಿ ಕಮಲದ ಬೇರು ಭದ್ರವಾಗಿದೆ ಎಂಬುದನ್ನು ರುಜುವಾತುಪಡಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮ ಸ್ವರಾಜ್ಯ ಯಾತ್ರಾ ಸಮಾವೇಶ ನಡೆಸಲಾಗುತ್ತಿದೆ. ದಾವಣಗೆರೆಯಲ್ಲಿ ಈಚೆಗೆ ನಡೆದಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಭಾಗವಹಿಸಿದ್ದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ, ಗ್ರಾಮಗಳಅಭಿವೃದ್ಧಿಯತ್ತ ಆಸಕ್ತಿ ಹೊಂದಿರುವ ಮತ್ತು ಪಕ್ಷದ ತತ್ವ, ಸಿದ್ಧಾಂತಗಳ ಬಗ್ಗೆ ಒಲವು ಇರುವವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಬಗ್ಗೆ ಚರ್ಚಿಸುವುದೇಸಮಾವೇಶದ ಉದ್ದೇಶ ಎಂದು ಸಾರಿದ್ದರು. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವಂತಹ ಅನೇಕರು ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ತಾವು ಅಖಾಡಕ್ಕೆ ಇಳಿಯಲು ಸಿದ್ಧ ಎಂಬುದನ್ನು ತಮ್ಮ ಮುಖಂಡರಿಗೆ ತೋರಿಸಿದ್ದರು.
2015ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತನ್ನ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು ಎಂಬುದಾಗಿ ಕಾಂಗ್ರೆಸ್ ಬಿಂಬಿಸಿಕೊಂಡಿದೆ. ಗ್ರಾಪಂ ಚುನಾವಣೆ ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆ ಬಲಪಡಿಸಿಕೊಳ್ಳುವ ಉದ್ದೇಶದಿಂದ ಹಲವಾರು ಸಭೆ ನಡೆಸಿದೆ.
ಈಚೆಗೆ ದಾವಣಗೆರೆಯಲ್ಲೂ ಆಕಾಂಕ್ಷಿಗಳ ಸಭೆ ಆಯೋಜಿಸಿತ್ತು. ಇನ್ನೂ ಹೆಚ್ಚಿನ ಸಭೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಂಚಾಯ್ತಿ ಚುನಾವಣೆಯಲ್ಲಿ ಪ್ರಾಬಲ್ಯ ಮುಂದುವರೆಸುವ ಉಮೇದಿಯೊಂದಿಗೆ ರಣತಂತ್ರ ಹೆಣೆಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ಮಾದರಿಯಲ್ಲೇ ಜೆಡಿಎಸ್ ಸಹ ಗ್ರಾಪಂ ಚುನಾವಣೆಯತ್ತ ಗಮನ ಹರಿಸಿದೆ. ತನ್ನ ಪ್ರಾಬಲ್ಯತೆ ಇರುವಲ್ಲಿ ಚುನಾವಣಾ ನೀತಿ ರೂಪಿಸುವಲ್ಲಿ ನಿರತವಾಗಿದೆ. ಸಭೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸುವ ಕೆಲಸವೂ ನಡೆಯುತ್ತಿದೆ.
ಎರಡು ಹಂತಗಳ ಗ್ರಾಮ ಪಂಚಾಯಿತಿ ಚುನಾವಣೆ ತೆರೆಮರೆಯಲ್ಲಿ ರಾಜಕೀಯ ಪಕ್ಷಗಳಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಮೇಲಾಟಕ್ಕೆ ವೇದಿಕೆಯಾಗುವುದಂತೂ ದಿಟ.
ಗರಿಗೆದರಿದ ಚಟುವಟಿಕೆ : ಕೋವಿಡ್, ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆ ನಡೆಯುವುದೇ ಅಥವಾ ಸರ್ಕಾರದ ಮರ್ಜಿಯಂತೆ ಮುಂದೂಲ್ಪಡುವುದೇ ಎಂಬ ಗೊಂದಲ ಇತ್ತು. ಅದರ ನಡುವೆಯೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅನೇಕರು ವಿವಿಧ ರಾಜಕೀಯ ಕಸರತ್ತು ನಡೆಸಿದ್ದರು. ಗ್ರಾಪಂ ಚುನಾವಣೆ ಘೋಷಣೆ ಆಗುವ ಸೂಚನೆ ದೊರೆಯುತ್ತಿದ್ದಂತೆ ಆಕಾಂಕ್ಷಿಗಳ ಚಟುವಟಿಕೆ ಗರಿಗೆದರಿದ್ದವು. ಕನ್ನಡ ರಾಜ್ಯೋತ್ಸವ, ಇತರೆ ಸಾರ್ವಜನಿಕ ಸಭೆ, ಸಮಾರಂಭ, ಖಾಸಗಿ ಕಾರ್ಯಕ್ರಮಗಳು ಉಮೇದುವಾರಿಕೆ ತಿಳಿಸುವ ವೇದಿಕೆಯೂ ಆಗಿದ್ದವು. ಎಲ್ಲರೊಟ್ಟಿಗೆಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸುವುದು ಇಲ್ಲವೇ ತಮ್ಮ ಅತ್ಯಾಪ್ತರ ಮೂಲಕ ಚುನಾವಣೆ ಸ್ಪರ್ಧೆಯ ಊಹಾಪೋಹದ ಸುದ್ದಿ ವರದಿ ಬಹಿರಂಗವಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ನಾಮಪತ್ರ ಸಲ್ಲಿಕೆಗೆ ಜನಜಂಗುಳಿ : ಈಗಾಗಲೇ ಮೊದಲ ಹಂತದ ನಾಮಪತ್ರಸಲ್ಲಿಕೆ ಮುಗಿದು ಎರಡನೆಯ ಹಂತದಚುನಾವಣೆಯ ಅಧಿಸೂಚನೆ ಹೊರ ಬಿದ್ದಿದೆ. ಮೊದಲ ದಿನವೇ ನಾಮಪತ್ರಸಲ್ಲಿಕೆಗೆ ಜನಜಂಗುಳಿ ಉಂಟಾಗಿರುವುದು ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆಯ ಪ್ರತೀಕವಾಗಿವೆ.
-ರಾ. ರವಿಬಾಬು